ಮಗು ಅಳುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗುವನ್ನು ನೆಲಕ್ಕೆ ಬಡಿದು ಕೊಂದಿರುವ ಹೃದಯ ವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಯಾದವಾಡದಲ್ಲಿ ನಡೆದಿದೆ.
ಮೃತ ಮಗು ಶ್ರೇಯಾ(1) ಶಂಭುಲಿಂಗಯ್ಯ ಹಾಗೂ ಸವಿತಾ ದಂಪತಿಯ ಪುತ್ರಿ. ಶಂಭುಲಿಂಗಯ್ಯ ಎಂಬಾತ ಕುಡಿತದ ಚಟಕ್ಕೆ ಒಳಗಾಗಿದ್ದು, ನಿತ್ಯವೂ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಕುಟುಂಬಸ್ಥರು, ಅಕ್ಕಪಕ್ಕದವರು ಆತನಿಗೆ ಬುದ್ದಿ ಹೇಳಿ ಬರುತ್ತಿದ್ದರು. ಇದೀಗ ತನ್ನ ಮಗುವನ್ನೇ ಕೊಂದು ಕ್ರೌರ್ಯ ಮೆರೆದಿದ್ದಾನೆ.
ರಾತ್ರಿ ವೇಳೆ ಅಳುತ್ತದೆ. ತನಗೆ ನಿದ್ರೆ ಬರುವುದಿಲ್ಲವೆಂದು ಒಂದು ವರ್ಷದ ಮಗುವಿಗೆ ಹೊಡೆದಿದ್ದಾನೆ. ಹೆಂಡತಿ ಕೇಳಿಕೊಂಡರೂ ಬಿಡದ ಪಾಪಿ ತಂದೆ, ಅಳು ನಿಲ್ಲಿಸದ ವೇಳೆ ಮಗುವನ್ನು ತೆಗೆದು ನೆಲಕ್ಕೆ ಬಡಿದಿದ್ದಾನೆ. ಇದರಿಂದಾಗಿ ಗಂಭೀರ ಗಾಯಗೊಂಡಿತ್ತು.
ವಿಷಯ ತಿಳಿದ ಕುಟುಂಬಸ್ಥರು ಮಗುವನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸಂತ್ರಸ್ತ ತಾಯಿಯು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನಿತ್ಯವೂ ಕುಡಿದು ಬಂದು ನನಗೆ ಬಡಿಯುತ್ತಿದ್ದ. ಮಗು ಅಳುತ್ತೆ ಎಂಬ ಕಾರಣಕ್ಕೆ ಮಗುವಿಗೆ ಬಡಿದ. ಬಳಿಕ ಮಗುವಿಗೆ ಹೊಡಿಯಬೇಡ, ಬೇಕಾದರೆ ನನ್ನನ್ನು ಬಡಿದು ಸಾಯಿಸು. ಆ ಮಗು ಏನು ಮಾಡಿದೆ ನಿನಗೆ ಎಂದು ಪರಿಪರಿಯಾಗಿ ಗೋಗರೆದರೂ ಕೂಡ ಮಗುವನ್ನು ಎತ್ತಿ ನೆಲಕ್ಕೆ ಬಡಿದಿದ್ದಾನೆ” ಎಂದು ಕಣ್ಣೀರು ಸುರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಶವವಾಗಿ ಪತ್ತೆ
ಕುಟುಂಬಸ್ಥರು ಮಾತನಾಡಿ, “ಮಗುವನ್ನು ಹೊಡೆದಿರುವುದು ಅಲ್ಲದೆ, ಕೊಂದಿರುವುದು ಘೋರ ಅಪರಾಧ. ಆತನಿಗೆ ಯಾವ ಶಿಕ್ಷೆ ಬೇಕಾದರೂ ನೀಡಿ, ಏನೂ ಅರಿಯದ ಕಂದಮ್ಮ ಅವನಿಗೆ ಏನು ಮಾಡಿತ್ತು” ಎಂದು ಹಿಡಿ ಶಾಪ ಹಾಕಿದ್ದಾರೆ.
“ಗಂಡ-ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು. ನಾವು ಬಹಳಷ್ಟು ಬಾರಿ ಜಗಳ ಬಿಡಿಸಿ ಆತನಿಗೆ ಬೈದು ಬುದ್ದಿಹೇಳಿ ಬರುತ್ತಿದ್ದೆವು. ಕುಡಿದ ನಶೆಯಲ್ಲಿ ಏನೂ ಅರಿಯದ ಕಂದನ್ನು ಕೊಂದಿರುವ ಪಾಪಿಯನ್ನು ಸುಮ್ಮನೆ ಬಿಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
