ಪೊಲೀಸರು ಕಾನೂನು ಪಾಲನೆ ಮಾತ್ರವಲ್ಲದೆ ಸಾಮಾಜಿಕ ಸೇವೆಯನ್ನು ಕೈಗೊಳ್ಳುತ್ತಾರೆ ಎಂಬುದಕ್ಕೆ ಈ ಪ್ರತ್ಯಕ್ಷ ಘಟನೆ ಸಾಕ್ಷಿಯಾಗಿದೆ. ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೈತರೊಬ್ಬರನ್ನು ಕಾನ್ಸ್‌ಟೇಬಲ್ ಒಬ್ಬರು ತನ್ನ ಭುಜದ ಮೇಲೆ 2 ಕಿ.ಮೀ ಹೊತ್ತು ಪ್ರಾಣ ಉಳಿಸಿದ್ದಾರೆ. ಈ ಘಟನೆಯು ತೆಲಂಗಾಣ ಕರೀಮ್ ನಗರದ ವೀನಾವನಕ ಮಂಡಲ್‌ನ ಬೇತಿಗಲ್ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಉಂಟಾದ ಜಗಳದಿಂದಾಗಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಕೀಟನಾಶಕ ಸೇವಿಸಿ ಹೊರಳಾಡುತ್ತಿದ್ದರು. ರೈತನ ಪರಿಸ್ಥಿಯನ್ನು ಗಮನಿಸಿದ ಹತ್ತಿರದಲ್ಲಿದ್ದ ಇತರ ರೈತರು ಆರೋಗ್ಯ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಂಧ್ರ ಪ್ರದೇಶ | ವಿಧಾನಸಭೆಯಿಂದ 8 ಶಾಸಕರು ಅನರ್ಹ
ಸಂಕಷ್ಟದ ತುರ್ತು ಕರೆಗೆ ಪ್ರತಿಕ್ರಿಯೆ ನೀಡಿ ಆಗಮಿಸಿದ ಕಾನ್ಸ್‌ಟೇಬಲ್ ಜಯ್‌ಪಾಲ್ ಅವರು ಹೊಲದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ರೈತನನ್ನು ಗಮನಿಸಿದರು. ಯಾವುದೇ ಹಿಂಜರಿಕೆಯಿಲ್ಲದೆ ಜಯಪಾಲ್ ಅವರು ತನ್ನ ಭುಜದ ಮೇಲೆ ರೈತನನ್ನು ಹೊತ್ತು ಹೊಲಗಳ ಕಾಲುದಾರಿಗಳ ನಡುವೆಯೆ ಎರಡು ಕಿ.ಮೀ ಸಾಗಿದರು.
ಜಯ್‌ಪಾಲ್ ರೈತನನ್ನು ಸುರಕ್ಷಿತವಾಗಿ ಸ್ಥಳೀಯ ಜಮ್ಮಿಕುಂಟ ಆಸ್ಪತ್ರೆಗೆ ದಾಖಲಿಸಿದರು. ಸಮಯಕ್ಕೆ ಸರಿಯಾಗಿ ರೈತನನ್ನು ದಾಖಲಿಸಿದ ಕಾರಣ ವೈದ್ಯರು ತುರ್ತು ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ತುರ್ತು ಸಮಯದಲ್ಲಿ ರೈತನ ಪ್ರಾಣ ಉಳಿಸಿದ್ದಕ್ಕೆ ಜಯಪಾಲ್ ಅವರನ್ನು ಸ್ಥಳೀಯ ಜನಪ್ರತಿನಿಧಿಗಳು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
