ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಕ್ರಿಸ್ತಶಕ 1604ರಲ್ಲಿ ತಿಮ್ಮರಾಜ ಅಜಿಲರಿಂದ ಪ್ರತಿಷ್ಠಾಪಿಸಲ್ಪಟ್ಟ 35 ಅಡಿಗಳ ಎತ್ತರದ ಏಕಶಿಲಾ ಬಾಹುಬಲಿಯ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.
ಜೈನ ಧರ್ಮೀಯರ ಈ ಆರಾಧ್ಯ ಗೊಮ್ಮಟ ಮೂರ್ತಿಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಜ್ಜನವು ಈ ಶತಮಾನದಲ್ಲಿ 2000ನೇ ವರ್ಷ ಹಾಗೂ 2012ರಲ್ಲಿ ನಡೆದು, ಈಗ 2024ರಲ್ಲಿ ನಡೆಯುತ್ತಿದೆ. ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ನಿತ್ಯವೂ ಸಾವಿರಾರು ಜಿನಭಕ್ತರು ಆಗಮಿಸುತ್ತಿದ್ದಾರೆ. ಜೈನ ಪರಂಪರೆಯ ಬಾಹುಬಲಿ ಮಹಾಮಜ್ಜನದ ಉತ್ಸವವನ್ನು ಕಣ್ತುತುಂಬಿಸಿಕೊಳ್ಳಲು ಊರಿನ ಹಾಗೂ ಪರ ಊರಿನ ಸರ್ವ ಸಮುದಾಯದವರೂ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಮಹಾಮಸ್ತಾಕಾಭಿಷೇಕದ ಸಲುವಾಗಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಸಹಸ್ರಾರು ಜನ ಪ್ರತಿನಿತ್ಯ ಭೇಟಿ ಕೊಡುತ್ತಿದ್ದಾರೆ. ವಸ್ತು ಪ್ರದರ್ಶನದ ವ್ಯಾಪರ ಮಳಿಗೆಗಳಲ್ಲಿ ಎಲ್ಲ ಧರ್ಮೀಯರಿಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವ್ಯಾಪಾರ ಮಳಿಗೆಗಳಿಗೆ ಸ್ಥಳೀಯ ಮುಸ್ಲಿಂ, ಕ್ರೈಸ್ತರು ಸೇರಿದಂತೆ ಭಾರೀ ಜನಸ್ತೋಮ ಆಗಮಿಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಮಾ.9ರಂದು ಲೋಕ ಅದಾಲತ್: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ
ಮಹಾಮಸ್ತಕಾಭಿಷೇಕದ ಸಲುವಾಗಿ ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿದ್ದು, ನಿತ್ಯವೂ ಸಾವಿರಾರು ಜನರು ಮಹಾಮಜ್ಜನದ ಅನ್ನದಾಸೋಹವನ್ನು ಸ್ವೀಕರಿಸುತ್ತಿದ್ದಾರೆ. ಕರಾವಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಜಾತ್ರೆ ಉತ್ಸವದ ಸಂದರ್ಭದಲ್ಲಿ ಧರ್ಮದ ಹೆಸರಲ್ಲಿ ಧ್ವಜ ವಿವಾದ, ಸಂತೆ ವ್ಯಾಪಾರಕ್ಕೆ ತಡೆ ವಿವಾದ ಎಬ್ಬಿಸುವ ಸಂಘಟನೆಗಳು ಇಲ್ಲಿ ಮೂಗು ತೂರಿಸಲು ಮಹಾಮಸ್ತಕಾಭಿಷೇಕ ಆಯೋಜಕರು ಅವಾಕಾಶ ನೀಡಿಲ್ಲ. ಇದರಿಂದಾಗಿ ಉತ್ಸವಕ್ಕೆ ಎಲ್ಲ ಸಮುದಾಯದ, ವರ್ಗದ ಜನ ಸಂಭ್ರಮದಿಂದ ಬರುತಿದ್ದು, ಉತ್ಸವದ ಸವಿಯನ್ನು ಅನುಭವಿಸುತ್ತಿದ್ದಾರೆ.