ನಾಲ್ಕು ವರ್ಷದ ಪದವಿ ಕೋರ್ಸ್‌ನ ನಿರ್ಧಾರ ಘೋಷಿಸುವಲ್ಲಿನ ವಿಳಂಬ ಹಾಗೂ ಅಪ್ರಜಾತಾಂತ್ರಿಕವಾಗಿ ಹೇರಿದ ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ಮೈಸೂರಿನ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ಜಿಲ್ಲಾಧ್ಯಕ್ಷ ಸುಭಾಷ್ ಮಾತನಾಡಿ, “ಕಳೆದ ಸರ್ಕಾರ ಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಎನ್ಇಪಿ-2020ಯನ್ನು ಜಾರಿ ಮಾಡಿತು. ಎನ್ಇಪಿ-2020 ಭಾಗವಾಗಿದ್ದ ನಾಲ್ಕು ವರ್ಷದ ಪದವಿಯನ್ನು ಅಪ್ರಜಾತಾಂತ್ರಿಕವಾಗಿ ಹೇರಿಕೆ ಮಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ಉಂಟುಮಾಡಿತು” ಎಂದು ಕಿಡಿ ಕಾರಿದರು.
“ಶಿಕ್ಷಣಕ್ಕೆ ಮಾರಕವಾಗಿರುವ ಎನ್ಇಪಿ-2020 ವಿರುದ್ಧ ರಾಜ್ಯದಲ್ಲಿ ಹಲವಾರು ಬಲಿಷ್ಠ ಚಳವಳಿಯನ್ನು ಕಟ್ಟಿದೆ. ಈ ನೀತಿಯ ವಿರುದ್ಧ ಐತಿಹಾಸಿಕವಾಗಿ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ರಾಜ್ಯದ ಮೂಲೆ ಮೂಲೆಗಳಿಂದ 36 ಲಕ್ಷ ಸಹಿಗಳನ್ನು ಸಂಗ್ರಹಿಸಿದರು” ಎಂದು ಹೇಳಿದರು.
“ಅಭೂತಪೂರ್ವ ಹೋರಾಟಗಳ ಫಲವಾಗಿ ರಾಜ್ಯದಲ್ಲಿ ಎನ್‌ಇಪಿ- 2020ಯನ್ನು ರಾಜ್ಯದಿಂದ ಹಿಮ್ಮೆಟ್ಟಿಸಲಾಯಿತು ಹಾಗೂ ರಾಜ್ಯ ಸರ್ಕಾರವು ರಾಜ್ಯದ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಿತು. ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಯಿಂದ ಕರ್ನಾಟಕದ 23 ಸಾವಿರಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಯಿತು. ನಡೆಸಿದ ಸಮೀಕ್ಷೆಯಲ್ಲಿ ಶೇ.83ರಷ್ಟು ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಬೇಡವೆಂದು ಹೇಳಿದ್ದಾರೆ” ಎಂದರು.
“ರಾಜ್ಯ ಸರ್ಕಾರ ರಚಿಸಿರುವ ರಾಜ್ಯ ಶಿಕ್ಷಣ ಆಯೋಗವು ರಾಜ್ಯ ಶಿಕ್ಷಣ ನೀತಿ ಕುರಿತಾದ ಅಂತಿಮ ವರದಿಯನ್ನು ಆಗಸ್ಟ್‌ನಲ್ಲಿ ನೀಡುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. 4 ವರ್ಷದ ಪದವಿಯನ್ನು ಹಿಂಪಡೆಯುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ಈ ವಿಳಂಬವು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“6ನೇ ಸೆಮಿಸ್ಟರ್ ಪ್ರವೇಶಿಸಲಿರುವ ಪದವಿ ವಿದ್ಯಾರ್ಥಿಗಳಿಗೆ, ಇದೇ ಅಂತಿಮ ವರ್ಷವೇ ಅಥವಾ ಇನ್ನೊಂದು ವರ್ಷ ಓದಬೇಕೇ ಎಂಬುದರ ಕುರಿತು ಯಾವ ಸ್ಪಷ್ಟತೆಯನ್ನೂ ನೀಡಲಾಗಿಲ್ಲ. ಈ ವಿಳಂಬದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಕುರಿತಾಗಿಯೇ ಸ್ಪಷ್ಟತೆ ಇಲ್ಲದಂತಾಗಿದೆ. ಇನ್ನೂ
ಎರಡ್ಮೂರು ತಿಂಗಳಲ್ಲಿ ಮೂರನೇ ವರ್ಷದ ಪದವಿ ಮುಗಿಯಲಿದ್ದು, ಅವರ ಭವಿಷ್ಯ ಅತಂತ್ರದಲ್ಲಿದೆ. ಆದ್ದರಿಂದ 4 ವರ್ಷ ಪದವಿ ಕೋರ್ಸ್ ಕುರಿತ ನಿರ್ಧಾರವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೃಷಿ ಸಲಕರಣಾ ವಿತರಕರು ಹೊಸ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು: ಜಂಟಿ ಕೃಷಿ ನಿರ್ದೇಶಕ
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷರುಗಳಾದ ನಿತಿನ್, ಸ್ವಾತಿ, ಎಐಡಿಎಸ್‌ಒ ಕಾರ್ಯಕರ್ತರುಗಳಾದ ಚಂದನ, ಚಂದ್ರಿಕಾ, ಹೇಮಾಲತಾ, ಅಂಜಲಿ, ದಿಶಾ, ಅಭಿಷೇಕ್, ಬೀರಪ್ಪ ಹಾಗೂ ಮಹಾರಾಜ ಮತ್ತು ಮಹಾರಾಣಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.
