ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ ಬಳಿಕ ಪಿಂಚಣಿಯೂ ನಿಂತು ಹೋಗಿದೆ ಎಂದು ಆರೋಪಿಸಿ ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕಾರ್ಯಕರ್ತರು ಕಲಬುರಗಿಯ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ ನಂತರ ಕಾರ್ಮಿಕರ ಕ್ಲೇಮು ಮತ್ತು ರಿನೀವಲ್, ಹೊಸ ಅರ್ಜಿಗಳನ್ನು ಸುಲಭವಾಗಿ ತೆಗೆದುಕೊಳ್ಳುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ 60 ವರ್ಷವಾದ ನಂತರ ಯಾವಾಗಲಾದರೂ ಪಿಂಚಣಿ ಅರ್ಜಿ ಹಾಕಲು ಅವಕಾಶ ನೀಡಬೇಕು. ಈಗ ಇರುವ ಕಾಲಮಿತಿಯನ್ನು ಕೈಬಿಡಬೇಕು. ಸರಳವಾಗಿ ಅರ್ಜಿಯನ್ನು ತಂತ್ರಾಂಶದಲ್ಲಿ ತೆಗೆದುಕೊಳ್ಳುವ ವ್ಯವಸ್ಥೆ ಜಾರಿ ಮಾಡಬೇಕು. ಕಾರ್ಮಿಕರ ಮಕ್ಕಳ ಹಿಂದಿನ ಸ್ಕಾಲರ್‌ಶಿಪ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಖಾಸಗಿ ಆಸ್ಪತ್ರೆಯಿಂದ ನಡೆಸುತ್ತಿರುವ ಆರೋಗ್ಯ ತಪಾಸಣಾ ಶಿಬಿರವನ್ನು ನಿಲ್ಲಿಸಿ ಕಾರ್ಮಿಕರಿಗೆ ನೆರವಾಗುವಂತಹ ಇಎಸ್‌ಐ ಜಾರಿ ಮಾಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ಹೊಸ ತಂತ್ರಾಂಶದಲ್ಲಿ ಅರ್ಜಿ ಹಾಕುವ ಸಮಯದಲ್ಲಿ ಕೇಳುತ್ತಿರುವ ಕಟ್ಟಡ ಕಾರ್ಮಿಕರು ಒದಗಿಸಲಾಗದ, ದಾಖಲಾತಿಗಳನ್ನು ಕೈಬಿಟ್ಟು ಕಾರ್ಮಿಕರ ಬಳಿ ಇರುವ ದಾಖಲಾತಿಗಳನ್ನು ತೆಗೆದುಕೊಂಡು ಅರ್ಜಿಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಒಂದರಿಂದ ಎರಡು ವರ್ಷಗಳ ಹಿಂದಿನಿಂದ ಕ್ಲೇಮು ಅರ್ಜಿಗಳು ಅನುಮೋದನೆಯಾಗಿದ್ದರೂ ಈವರೆಗೆ ಕಾರ್ಮಿಕರಿಗೆ ಹಣ ಪಾವತಿಯಾಗಿಲ್ಲ. ದಾಖಲೆಗಳ ಕೊರತೆಯ ನೆಪವೊಡ್ಡಿ ಎರಡು ವರ್ಷಗಳಿಂದ ತಡೆ ಹಿಡಿದಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಪತಕಿ, ಶಿವಲಿಂಗಮ್ಮ ಲೆಂಗಟಿಕರ್, ಜಿಲ್ಲಾ ಸಹ ಕಾರ್ಯದರ್ಶಿ ಕಲ್ಯಾಣಿ ತುಕ್ಕಾಣಿ, ಶರಣಮ್ಮ ಪೂಜಾರಿ, ಮಾನಪ್ಪ ಕಟ್ಟಿಮನಿ ಹಾಗೂ ಕಟ್ಟಡ ಕಾರ್ಮಿಕರು ಇದ್ದರು.
