ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಎಡ ಪಂಥೀಯ ಬೆಂಬಲಿತ ಗುಂಪುಗಳ ನಡುವಿನ ಘರ್ಷಣೆಯಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ (ಫೆ.29) ಸ್ಕೂಲ್ ಆಫ್ ಲ್ಯಾಂಗ್ವೇಜಸ್ ವಿಭಾಗದಲ್ಲಿ ಚುನಾವಣಾ ಸಮಿತಿಯ ಸದಸ್ಯರ ಆಯ್ಕೆಯ ವಿವಾದಗಳಿಂದ ವಾಗ್ವಾದ ಪ್ರಾರಂಭವಾಯಿತು. ವಾಗ್ವಾದ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಕೆಲವು ವಿದ್ಯಾರ್ಥಿಗಳನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘ ಚುನಾವಣಾ ಸಮಿತಿ ಸದಸ್ಯರ ಆಯ್ಕೆಗಾಗಿ ವಿಭಾಗ ಮಟ್ಟದ ಸಾಮಾನ್ಯ ಸಭೆಗಳನ್ನು ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಭುತ್ವ ಪೋಷಿತ ಮೈತೇಯಿ ಮಿಲಿಟೆಂಟ್ ಅಟ್ಟಹಾಸ ಮತ್ತು ಮಣಿಪುರ ಪೊಲೀಸರ ಅಸಹಾಯಕತೆ
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ವಿದ್ಯಾರ್ಥಿಗಳನ್ನು ಕೋಲಿನಿಂದ ಥಳಿಸುತ್ತಿರುವುದನ್ನು ಕಾಣಬಹುದು. ಮತ್ತೊಂದು ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಸೈಕಲ್ ಎಸೆಯುತ್ತಿರುವುದನ್ನು ಕಾಣಬಹುದು.
ಘಟನೆಯ ಇತರ ವಿಡಿಯೋಗಳು ವಿವಿಯ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗಲೂ ಗುಂಪು ಗುಂಪಾಗಿ ವ್ಯಕ್ತಿಗಳನ್ನು ಥಳಿಸುತ್ತಿರುವುದನ್ನು ತೋರಿಸಿದೆ.
ಘಟನೆಯ ಕುರಿತು ವಿಶ್ವವಿದ್ಯಾನಿಲಯ ಆಡಳಿತವು ಇನ್ನೂ ಹೇಳಿಕೆಯನ್ನು ನೀಡದಿದ್ದರೂ, ವಿದ್ಯಾರ್ಥಿ ಗುಂಪುಗಳು ಘರ್ಷಣೆಗೆ ಪರಸ್ಪರ ಆರೋಪಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.