ಮಹಾರಾಷ್ಟ್ರ ದಲ್ಲಿ ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿದ್ದು ಮುಂದಿನ 48 ಗಂಟೆಗಳೊಳಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ರಾಜ್ಯದ 48 ಲೋಕಸಭಾ ಕ್ಷೇತ್ರಗಳ ಪೈಕಿ 20ರಲ್ಲಿ, ಕಾಂಗ್ರೆಸ್ ಪಕ್ಷ 18ರಲ್ಲಿ ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಇತರ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಒಪ್ಪಂದಕ್ಕೆ ಬಂದಿವೆ ಎಂದು ತಿಳಿದು ಬಂದಿದೆ.
ಈ ಹಿಂದೆ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದ ವಂಚಿತ್ ಬಹುಜನ್ ಅಘಾಡಿ, ಉದ್ಧವ್ ಶಿವ ಸೇನೆ ಬಣದ ಪಾಲಿನಿಂದ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಹಾಗೂ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲದೊಂದಿಗೆ ರಾಜು ಶೆಟ್ಟಿ ಎಂಬವರು ಸ್ವತಂತ್ರ ಅಭ್ಯರ್ಥಿಯಾಗಲಿದ್ದಾರೆಂಬ ಮಾಹಿತಿಯಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಭುತ್ವ ಪೋಷಿತ ಮೈತೇಯಿ ಮಿಲಿಟೆಂಟ್ ಅಟ್ಟಹಾಸ ಮತ್ತು ಮಣಿಪುರ ಪೊಲೀಸರ ಅಸಹಾಯಕತೆ
ಮುಂಬೈಯ ಆರು ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಉದ್ಧವ್ ಬಣ ಸ್ಪರ್ಧಿಸಲಿದ್ದರೆ ಮುಂಬೈ ಈಶಾನ್ಯ ಕ್ಷೇತ್ರವನ್ನು ವಂಚಿತ್ ಬಹುಜನ್ ಅಘಾಡಿಗೆ ನೀಡುವ ಸಾಧ್ಯತೆಯಿದೆ.
2019 ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18ರಲ್ಲಿ ಜಯ ಸಾಧಿಸಿತ್ತು. ಇಪ್ಪತ್ತೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ ಚಂದ್ರಾಪುರದಲ್ಲಿ ಗೆದ್ದಿದ್ದರೆ ಎನ್‌ಸಿಪಿ 19 ಕ್ಷೇತ್ರಗಳ ಪೈಕಿ 4ರಲ್ಲಿ ಗೆದ್ದಿತ್ತು. ಆಗ ಶಿವಸೇನೆ ಮತ್ತು ಎನ್‌ಸಿಪಿ ಇಬ್ಭಾಗವಾಗಿರಲಿಲ್ಲ.