ಕಲೆಯ ಗ್ರಹಿಕೆ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮಬದ್ಧವಾಗಿದ್ದರೂ ನಿರ್ಬಂಧ ರಹಿತವಾಗಿರಬೇಕು ಎಂದು ವಿಮರ್ಶಕ, ಪ್ರೊ. ಎಚ್.ಎಸ್ ರಾಘವೇಂದ್ರರಾವ್ ಹೇಳಿದರು.
ತುಮಕೂರು ವಿವಿಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲೀಷ್ ಸಾಹಿತ್ಯ ಅಧ್ಯಯನ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ
ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
“ಸಂಸ್ಕೃತಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು. ಅನುವಂಶಿಕವಾಗಿ ಪಡೆಯಬಾರದು. ಕಲಾ ಗ್ರಹಿಕೆ, ಸೃಷ್ಟಿ, ಪ್ರಕಾರ, ಪ್ರಚಾರ ಎಲ್ಲಿಯವರೆಗೂ ಅಧಿಕಾರದ ಒತ್ತಡದಲ್ಲಿ ಇರುತ್ತದೋ, ಅಲ್ಲಿಯವರೆಗೂ
ಅಪಾಯವೇ ಆಗಿರುತ್ತದೆ. ಒತ್ತಡವನ್ನು ಮೀರಿ ವ್ಯಕ್ತಿ ಕಲೆಯನ್ನು ಗ್ರಹಿಸಿ, ಕಟ್ಟಬೇಕು. ಕಲೆ ದಾರಿ ತಪ್ಪಿಸಬಾರದು, ದಾರಿ ತೋರಬೇಕು. ವಿಷಯ ಗ್ರಹಿಕೆ ಯೋಚನೆಯಾಗಿ ಬದಲಾದಾಗ ಯಶಸ್ಸು
ಕಾಣಬಹುದು” ಎಂದರು.
“ಗುರುಗಳನ್ನು, ಹಿರಿಯರನ್ನು, ಪುಸ್ತಕಗಳನ್ನು ಹೀರಬೇಕು, ಮೀರಬೇಕು. ಆಗ ಲೋಕ-ಕಲೆ ಎರಡೂ ಉಳಿಯುತ್ತದೆ. ಬದಲಾಗುತ್ತಿರುವ ಲೋಕಕ್ಕೆ ಬದಲಾದ ಕಲೆಯ ಅವಶ್ಯಕತೆ ಇದೆ. ನೋವುಗಳನ್ನು ನಲಿವಾಗಿ ಬದಲಾಯಿಸುವ ಜೀವನದ ಕಲೆಯ ಗ್ರಹಿಕೆಯಾಗಬೇಕಿದೆ” ಎಂದರು.
“ಕಲೆಗಳ ಮೂಲಕ ಲೋಕ ಗ್ರಹಿಕೆಯಾಗಬೇಕು. ಬಚ್ಚಿಟ್ಟುಕೊಂಡ ಲೋಕಗಳ ಅನಾವರಣ ಕಲಾವಿದನಿಂದ ಆಗಬೇಕು. ಶತಮಾನಗಳಿಂದ ನೂಕಲ್ಪಟ್ಟ ಮಹಿಳೆಯರ, ದಲಿತರ ಲೋಕ
ಕಲೆಯಿಂದ ಅನಾವರಣವಾಯಿತು. ಕೇವಲ ಸಾಹಿತ್ಯವಷ್ಟೇ ಕಲೆಯಾಗಬಾರದು. ನೃತ್ಯ, ದೃಶ್ಯ, ಚಿತ್ರ, ಸಂಗೀತವೂ ವಿಭಿನ್ನ ಕಲೆಗಳು. ಕಲಾವಿದ ಮನುಷ್ಯನಾಗಿ ಲೋಕವನ್ನು ಅನುಭವಿಸುತ್ತಾನೆ. ಕಲೆಯನ್ನು ಸೃಷ್ಟಿಸುವಾಗ ಲೋಕದ ಅನುಭವ ಗ್ರಹಿಕೆಯಾಗುತ್ತದೆ” ಎಂದು ತಿಳಿಸಿದರು.
“ಕಲಾವಿದ ತನ್ನ ಲೋಕವನ್ನು ಕಲೆಯ ಮೂಲಕವೇ ಗ್ರಹಿಸಿಕೊಳ್ಳಬೇಕು. ಕವಿತೆ, ಕಾದಂಬರಿ ಬರೆಯುವ ಮೂಲಕ ಲೋಕದ ಗ್ರಹಿಕೆಯಾಗುತ್ತದೆ. ಪ್ರತಿಯೊಂದು ಕಲೆಯ ಅಂತರ ವಿಭಿನ್ನವಾಗಿರುತ್ತದೆ. ‘ಸಂಗೀತದ ರೆಕ್ಕೆ ಕವಿತೆಯ ಹಕ್ಕಿಗೆ ಬಂದಾಗ ಏನಾಗುತ್ತದೋ’ ಹಾಗೆಯೇ, ಕಲಾವಿದ ಕಟ್ಟುವುದು ಹೊಸದೇ ಲೋಕವನ್ನು. ಕಲಾವಿದನಿಂದ ಪಾತ್ರ ಸೃಷ್ಟಿಯಾಗುತ್ತದೆ, ಮುಂದುವರಿಯುತ್ತದೆ. ಇವೆಲ್ಲವೂ ಕಲಾವಿದನ ಗಹನವಾದ ಚಿಂತನೆಯಿಂದ ಸಾಧ್ಯ” ಎಂದರು.
“ನವಿಲು ನರ್ತಿಸುವುದು ಸಹಜ, ಪ್ರಕೃತಿ ನಿಯಮ. ನವಿಲಿನಂತೆ ನರ್ತಿಸುವುದೇ ಕಲೆ. ಕಲೆಯಿಂದ ಹುಟ್ಟಿದ ಲೋಕ ಕಲೆಯ ಮಾಧ್ಯಮದಿಂದ ನಿಯಂತ್ರಿಸಲ್ಪಟ್ಟಿರುತ್ತದೆ. ಕಲೆಯನ್ನು ಕಟ್ಟಿಕೊಡುವ ಕಲಾಕೃತಿ ವಿಭಿನ್ನವಾಗಿರುತ್ತದೆ. ಕೇವಲ ಭಾಷೆ ಬರುವುದರಿಂದ ಕವನ, ಕವಿತೆ, ಕಾದಂಬರಿ ಅರ್ಥವಾಗುತ್ತದೆ ಎಂದರೆ ಅದು ತಪ್ಪು ಗ್ರಹಿಕೆ. ಕಲಾರಸಿಕ ಕಲೆಯನ್ನು ಕಬ್ಬಿನ ರಸದಂತೆ ಹೀರಿದಾಗ ಮಾತ್ರ ಕಲಾಗ್ರಹಿಕೆ ಸಂಪೂರ್ಣ” ಎಂದರು.
“ಕಲೆ ಲೋಕವನ್ನು ಗ್ರಹಿಸುವ, ಕಟ್ಟುವ, ತಲುಪಿಸುವ ರೀತಿ ಬೇರೆಯದೇ ಆಗಿರುತ್ತದೆ. ಕಲೆಯ ಶಾಸ್ತ್ರದ ಅರಿವಿಲ್ಲದಿದ್ದರೂ ಕಲೆ ಲೋಕವನ್ನು ಪ್ರಾಥಮಿಕವಾಗಿ ತಲುಪುತ್ತದೆ. ಕಲೆಯ ಶಾಸ್ತ್ರ ಗೊತ್ತಿದ್ದವರಿಗೆ ಮಾತ್ರ ಪರಿಣಾಮ ಬೀರುತ್ತದೆ. ಕಲಾವಿದ ವಿಷಯ ಮಂಡಿಸುವ ವಕೀಲನಾಗಬಾರದು. ಲೋಕವನ್ನು ಗ್ರಹಿಸಿ, ಸಮುದಾಯದ ಒಳ-ಹೊರ ಆಳವನ್ನು ಅರಿತು ಕಲೆಯನ್ನು ಕಟ್ಟುವ ಅರ್ಥಗಳ ತಯಾರಕನಾಗಬೇಕು” ಎಂದು ಹೇಳಿದರು.
“ಶತಮಾನಗಳು ಕಳೆದಂತೆ ಕಲೆಯು ಸಮಯಾಧಾರಿತ, ವ್ಯಕ್ತಿಯಾಧಾರಿತ ಹಾಗೂ ಸಂಸ್ಕೃತಿಯಾಧಾರಿತವಾಗಿ ಬದಲಾಗುತ್ತದೆ. ಬದಲಾಗದ ಕಲೆ ಪೂರ್ವಗ್ರಹಕ್ಕೆ ಕಾರಣವಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಆರೋಪ; ಪುತ್ರಿಯಿಂದ ದೂರು
ಎರಡನೆಯ ದಿನದ ಸಾಹಿತ್ಯೋತ್ಸವದಲ್ಲಿ ರಂಗಭೂಮಿ ಕಲಾವಿದರಾದ ಅಕ್ಷತಾ ಮತ್ತು ತಂಡ ‘ಲೀಕ್ ಔಟ್’ ಕಥಾಭಿನಯ ಪ್ರಸ್ತುತಿಪಡಿಸಿದರು. ‘ಮಾನವಿಕಗಳ ಭವಿಷ್ಯ’ ಕುರಿತು ಬೆಂಗಳೂರು ಐಸೆಕ್‍ನ ಪ್ರಾಧ್ಯಾಪಕ ಪ್ರೊ. ಚಂದನ್ ಗೌಡ, ಬೆಂಗಳೂರು ವಿವಿಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀಕೀರ್ತಿ ಮಾತು-ಸಂವಾದ ನಡೆಸಿಕೊಟ್ಟರು. ಮೌನೇಶ ಬಡಿಗೇರ ಅವರ ಉಪಸ್ಥಿತಿಯಲ್ಲಿ ಕಥೆಗಾರರಾದ ದಾದಾಪೀರ್ ಜೈಮನ್, ರವಿಕುಮಾರ್ ನೀಹ, ಮಿರ್ಜಾ ಬಶೀರ್ ಕಟ್ಟು-ಕಥೆ ನಡೆಸಿಕೊಟ್ಟರು. ಅನುವಾದಕಿ ವನಮಾಲಾ ವಿಶ್ವನಾಥ್ ಭಾಷಾಂತರ ಕುರಿತು ನುಡಿ-ಮಾರ್ನುಡಿ ವಿಷಯ ಪ್ರಸ್ತುತಪಡಿಸಿದರು.
ಸಾಹಿತ್ಯೋತ್ಸವದ ಸಂಘಟಕರುಗಳಾದ ಪ್ರೊ ನಿತ್ಯಾನಂದ ಬಿ ಶೆಟ್ಟಿ, ಪ್ರೊ ಎಚ್ ಕೆ ಶಿವಲಿಂಗಸ್ವಾಮಿ ಇದ್ದರು.