ಶುಕ್ರವಾರ ನಡೆದ ಘಟನೆ ರಾಜ್ಯ ರಾಜಧಾನಿ ಬೆಂಗಳೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ವೈಟ್ ಫೀಲ್ಡ್‌ನ ಕುಂದಲಹಳ್ಳಿ ಬಳಿಯ ಪ್ರಸಿದ್ಧ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಅಪರಿಚಿತ ವ್ಯಕ್ತಿಯೊಬ್ಬ ಹೋಟೆಲ್‌ನ ಬೇಸಿನ್ ಬಳಿ ಬ್ಯಾಗ್‌ವೊಂದರಲ್ಲಿ ಸ್ಪೋಟಕ ವಸ್ತು ಇಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ, ವ್ಯವಹಾರ ಸಂಬಂಧ ಸ್ಪೋಟ ನಡೆಸಿರುವ ಬಗ್ಗೆ ಅನುಮಾನಗಳು ಹುಟ್ಟಿವೆ.
ಅಂಬಾನಿ ಕುಟುಂಬಕ್ಕೆ ಕ್ಯಾಟರಿಂಗ್ ವ್ಯವಸ್ಥೆ ಮಾಡಲು ಕೆಫೆ ಜವಬ್ದಾರಿ ತೆಗೆದುಕೊಂಡಿತ್ತು. ಅಲ್ಲದೇ, ರಾಮೇಶ್ವರಂ ಕೆಫೆಯನ್ನು ಭಾರತದಾದ್ಯಂತ ವಿಸ್ತರಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಕೆಫೆ ಮೇಲಿನ ಅಸೂಯೆ ಮತ್ತು ಬಿಸಿನೆಸ್ ದ್ವೇಷದಿಂದ ಸ್ಪೋಟ ನಡೆಸಲಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸುತ್ತಮುತ್ತಲಿನ ಠಾಣೆಯ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ತೆರಳಿದ್ದಾರೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಂಡ ಸಹ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದೆ.
ಏನಿದು ಘಟನೆ?
ಮಾರ್ಚ್ 1ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಪೋಟ ಸಂಭವಿಸಿದೆ. ಕೆಫೆಯ ಕೈ ತೊಳೆಯುವ ಸ್ಥಳದಲ್ಲಿ ಮತ್ತು ಅಡುಗೆ ಪಾತ್ರೆ ಇಡುವ ಸ್ಥಳದಲ್ಲಿ ಸ್ಪೋಟವಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಕೆಫೆಯ ಒಳಗಡೆ ಬಂದು ಒಂದು ಬ್ಯಾಗ್ ಇಟ್ಟು ಪರಾರಿಯಾಗಿದ್ದಾನೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಕೆಫೆ ಒಳಗೆ ಭಾರಿ ಪ್ರಮಾಣದಲ್ಲಿ ಸ್ಫೋಟವಾಗಿದೆ. ಸ್ಪೋಟದಲ್ಲಿ ನಾಲ್ವರು ಗ್ರಾಹಕರು, ಮೂವರು ಸಿಬ್ಬಂದಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಫೆಯಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಡಿವಿಆರ್ ಸುಪರ್ದಿಗೆ ಪಡೆದಿರುವ ಪೊಲೀಸರು, ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. “ರಾಮೇಶ್ವರಂ ಕೆಫೆಯ ಕ್ಯಾಷಿಯರ್ ಬಳಿ ಮಧ್ಯಾಹ್ನ 12.30ರ ಸುಮಾರಿಗೆ ಗ್ರಾಹಕನೊಬ್ಬ ಹೋಗಿದ್ದನು. ಕ್ಯಾಷಿಯರ್ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಬ್ಯಾಗ್ ಇರಿಸಿದ್ದ. ಇದಾದ ನಂತರ, ಕೆಲ ನಿಮಿಷಗಳ ನಂತರ ಸ್ಫೋಟ ಸಂಭವಿಸಿರುವುದು ಗೊತ್ತಾಗಿದೆ. ಆದರೆ, ಬ್ಯಾಗ್‌ನಲ್ಲಿ ಇರುವುದು ಕಚ್ಚಾ ಬಾಂಬ್ ಅಥವಾ ಬೇರೆ ಯಾವುದಾದರೂ ಸ್ಫೋಟಕ ಇರಬಹುದೆಂಬ ಅನುಮಾನವಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
“ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿ ಬಿಳಿ ಬಣ್ಣದ ಪೌಡರ್, ಬೋಲ್ಟ್ ಹಾಗೂ ಬ್ಯಾಟರಿ ಪತ್ತೆಯಾಗಿದೆ. ಇವುಗಳನ್ನು ನೋಡಿದರೆ ಟಫಿನ್ ಬಾಕ್ಸ್ ಅಥವಾ ಬೇರೆ ರೀತಿಯಲ್ಲಿ ಕಚ್ಚಾ ಬಾಂಬ್ ಸಿದ್ಧಪಡಿಸಿರುವ ಬಗ್ಗೆ ಅನುಮಾನವಿದೆ. ಆದರೆ, ಯಾವುದಕ್ಕೂ ಸದ್ಯ ಖಚಿತತೆ ಇಲ್ಲ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ವರದಿಯಿಂದಲೇ ನಿಖರ ಮಾಹಿತಿ ತಿಳಿಯಲಿದೆ” ಎಂದು ಅಧಿಕಾರಿ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ; ಮನೆಗೆ ಬರಲಿದೆ ನೋಟಿಸ್ ಜತೆಗೆ ಕ್ಯೂಆರ್ ಕೋಡ್
“ಕೆಫೆಯಲ್ಲಿ ಯಾವುದೇ ವಿದ್ಯುತ್ ಅವಘಡ ಅಥವಾ ಸಿಲಿಂಡರ್ ಸ್ಪೋಟವಾಗಿಲ್ಲ. ಹೊರಗಿನಿಂದ ತಂದಿಟ್ಟ ಬ್ಯಾಗ್ ಸ್ಪೋಟವಾಗಿದೆ. ಈ ಹಿಂದೆಯೂ ಅಪರಿಚಿತರು ಎರಡು ಬಾರಿ ಬ್ಯಾಗ್ ಬಿಟ್ಟು ಹೋಗಿದ್ದರು. ಒಮ್ಮೆ ಬ್ಯಾಗ್‌ನಲ್ಲಿ ಮಡಿಕೆ ಕುಡಿಕೆ ಪತ್ತೆಯಾಗಿದ್ದರೇ, ಇನ್ನೊಮ್ಮೆ ನಿರ್ಜನ ಪ್ರದೇಶದಲ್ಲಿ ಬ್ಯಾಗನ್ನು ಇರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬ್ಯಾಗ ಅನ್ನು ಪೊಲೀಸರಿಗೆ ಒಪ್ಪಿಸಿದ್ದೆವು. ಅದರಲ್ಲಿ ಏನಿತ್ತು ಎಂಬ ಬಗ್ಗೆ ತಿಳಿಸಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವು” ಎಂದು ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ದಿವ್ಯಾ ಹೇಳಿದರು.
ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಜತೆಗೆ, ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಬಂದಿದ್ದು ತಪಾಸಣೆ ನಡೆಸಿವೆ. ಸದ್ಯ ಪೊಲೀಸರು ಸಿ ಸಿ ಕ್ಯಾಮರಾ ಪರೀಲನೆ ನಡೆಸುತ್ತಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: CCTV ದೃಶ್ಯ ಲಭ್ಯ
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ನಡೆದಿರುವ ಬಾಂಬ್ ಸ್ಫೋಟದ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಫೋಟ ಆಗುತ್ತಿದ್ದಂತೆ ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ದಟ್ಟ ಹೊಗೆ ಕೂಡ ಕಾಣಿಸಿಕೊಂಡಿದೆ.#RameshwaramCafeBlast #Bangalore pic.twitter.com/3PK1mrYxfY
— eedina.com (@eedinanews) March 1, 2024
ಸ್ಥಳೀಯರು ಘಟನೆ ಬಗ್ಗೆ ಮಾತನಾಡಿದ್ದು, “ಘಟನೆ ಸಂಭವಿಸಿದ ಸಮಯದಲ್ಲಿ 6 ರಿಂದ 7 ಜನ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡುವ ಕಾರ್ಯವನ್ನು ಪೊಲೀಸರಾಗಲಿ ಕೆಫೆ ಆಡಳಿತ ಮಂಡಳಿಯಾಗಲಿ ಯಾರು ಮಾಡಿಲ್ಲ. ಸ್ಥಳೀಯರು ಆಟೋದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಜತೆಗೆ ಇಂತಹ ಘಟನೆ ನಡೆಯಲು ರಾಮೇಶ್ವರಂ ಕೆಫೆಯ ವೈಫಲ್ಯವೇ ಕಾರಣ. ಈ ಕೆಫೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಆದರೆ ಯಾವುದೇ ರೀತಿಯ ಸೆಕ್ಯೂರಿಟಿ ವ್ಯವಸ್ಥೆ ಇಲ್ಲ. ಅಗ್ನಿ ದುರಂತ ಸಂಬವಿಸಿದಾಗ ತುರ್ತು ಕ್ರಮಗಳನ್ನು ಕೈಗೊಳ್ಳಲು ಯಾವುದೇ ಉಪಕರಣಗಳು ಇರಲಿಲ್ಲ” ಎಂದಿದ್ದಾರೆ.