ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಒಟ್ಟು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗಾಗಲೇ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಸ್ಪೋಟದ ಬಗ್ಗೆ ಸರಿಯಾದ ಕಾರಣ ಏನು ಎಂಬುದು ಸದ್ಯಕ್ಕೆ ಇನ್ನು ತಿಳಿದುಬಂದಿಲ್ಲ. ಸದ್ಯ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹೇಳಿದರು.
“ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸದ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಂದ ವರದಿ ಬಂದ ನಂತರ ಸ್ಪಷ್ಟ ಮಾಹಿತಿ ತಿಳಿಯಲಿದೆ. ರಾಮೇಶ್ವರಂ ಕೆಫೆಗೆ ಗ್ರಾಹಕರು ಏನಾದರೂ ತಂದಿದ್ದರಾ? ಅಥವಾ ಈ ಸ್ಪೋಟಕ್ಕೆ ಬೇರೆಯೇ ಕಾರಣ ಇದೇಯಾ ಎಂಬುದನ್ನು ಸದ್ಯಕ್ಕೆ ಹೇಳಲಾಗದು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಮೇಶ್ವರಂ ಕೆಫೆ ಸ್ಪೋಟ; ಎಲ್ಲ ಆಯಾಮಗಳಲ್ಲಿ ತನಿಖೆಗೆ ಮುಂದಾದ ಪೊಲೀಸರು
“ಈ ಘಟನೆಗೆ ಕಾರಣನಾದ ಆರೋಪಿಯನ್ನ ನಾವು ಖಂಡಿತ ಪತ್ತೆ ಮಾಡುತ್ತೇವೆ. ಸದ್ಯಕ್ಕೆ ಯಾರ ಮೇಲೂ ಅನುಮಾನ ಇಲ್ಲ. ತನಿಖೆ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ, ಕೇಂದ್ರ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ” ಎಂದು ಡಿಜಿಪಿ ಅಲೋಕ್ ಮೋಹನ್ ಮಾಹಿತಿ ನೀಡಿದ್ದಾರೆ.
“ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಎಂ ಮತ್ತು ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದ್ದು, ಎಫ್ಎಸ್ಎಲ್ ಟೀಮ್ ಪರಿಶೀಲನೆ ನಡೆಸುತ್ತಿದೆ. ಎಫ್ಎಸ್ಎಲ್ ತಂಡ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ನೀಡುತ್ತೇವೆ” ಎಂದು ಅಲೋಕ್ ಮೋಹನ್ ಹೇಳಿದ್ದಾರೆ.