ಕನ್ನಡದ ಮಹತ್ವದ ಬರಹಗಾರ್ತಿಯರಲ್ಲಿ ಶೈಲಜಾ ಉಡಚಣ ಅವರೂ ಒಬ್ಬರು. ಆದರೆ ಅವರ ಗಟ್ಟಿ ಬರಹಗಳಿಗೆ ಸೂಕ್ತ ಅವಕಾಶಗಳು ಸಿಗಲಿಲ್ಲ. ಶೈಲಜಾ ಉಡಚಣ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ ಸಿಗಬೇಕಿತ್ತು ಎಂದು ನಾಡೋಜ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಮನು ಬಳಿಗಾರ ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆದ ಶೈಲಜಾ ಉಡಚಣ ಅವರ ಸಾಹಿತ್ಯ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
” ರಾಜಧಾನಿ ಕೇಂದ್ರಿತವಾದ ಮತ್ತು ವಿದ್ವತ್ತಿನೊಳಗಿನ ರಾಜಕಾರಣ ಮೊದಲಾದ ಕಾರಣಗಳಿಂದ ಶೈಲಜಾ ಉಡಜಣ ಅವರಿಗೆ ಹೆಚ್ಚಿನ ಸ್ಥಾನಮಾನಗಳು ದೊರೆಯಲಿಲ್ಲ. ಶೈಲಜಾ ಉಡಚಣ ಸೇರಿದಂತೆ ಈ ಭಾಗದ ಅನೇಕ ಬರಹಗಾರರು ಇದ್ದರು. ಈ ಭಾಗದಲ್ಲಿ ಹೆಚ್ಚಿನ ಸಾಹಿತ್ಯ ಸಮ್ಮೇಳನಗಳು, ವಿಚಾರ ಸಂಕಿರಣಗಳು ನಡೆಸುವ ಮೂಲಕ ಯುವ ತಲೆಮಾರಿಗೆ ಅವರ ಬರಹಗಳನ್ನು ತಲುಪಿಸುವಂತಾಗಬೇಕು” ಎಂದರು.
ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಆಶಯ ನುಡಿ ಮಾತನಾಡಿ, “ಕಾಲಮಾನಕ್ಕೆ ಎದುರಾಗಿ ಈಜುವ ತಾಕತ್ತನ್ನು ಒಳಗೊಂಡಿದ್ದ ಗಟ್ಟಿ ಬರಹಗಾರ್ತಿ ಉಡಚಣ ಅವರಾಗಿದ್ದರು. ನಿಜಾಂ ಆಡಳಿತ ಕಾಲದಲ್ಲಿ ಉರ್ದು ಭಾಷೆಯಲ್ಲಿ ಕಲಿತ ಸ್ತ್ರೀಯೊಬ್ಬಳು ಬೆಳೆದದ್ದು ಬಹುದೊಡ್ಡ ಸಾಹಸಮಯ. ಅದರಲ್ಲೂ ಪುರುಷ ಕೇಂದ್ರಿತವಾದ ಸಮಾಜದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಎಲ್ಲರೊಂದಿಗೆ ಬೆರೆಯುವ ಮನಸ್ಸಿನ ಶೈಲಜಾ ಪ್ರತಿಭಾವಂತ ಬರಹಗಾರ್ತಿಯಾಗಿದ್ದರು” ಎಂದು ನುಡಿದರು.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, “ಹಿರಿಯ ತಲೆಮಾರಿನವರಾದ ಶೈಲಜಾ ಉಡಚಣ ಮತ್ತು ಅಂತ ಇನ್ನೂ ಹಲವರ ಬರಹಗಳನ್ನು ಅಧ್ಯಯನ ಮಾಡಬೇಕು, ಅವರ ಭಾಷಾ ಪ್ರಯೋಗ, ಅವರ ವ್ಯಾಕರಣ, ಅವರ ಸಾಹಿತ್ಯದ ತುಲನಿಕ ಅಧ್ಯಯನ ಮಾಡಬೇಕು ಮತ್ತು ಅದರಿಂದ ಸಮಾಜದ ಬೆಳವಣಿಗೆಗೆ ಅವಶ್ಯವಾಗಿರುವುದನ್ನು ಪಡೆದುಕೊಳ್ಳಬೇಕು” ಎಂದು ಹೇಳಿದರು.
ಮಧ್ಯಾಹ್ನದ ವಿಚಾರ ಗೋಷ್ಟಿಯಲ್ಲಿ ಶೈಲಜಾ ಉಡಚಣ ಅವರ ಬರಹದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಡಾ.ಚಿತ್ಕಲಾ ಮಠಪತಿ ಅವರು ಶೈಲಜಾ ಉಡಚಣ ಅವರ ಕಾವ್ಯ, ಡಾ. ಗವಿಸಿದ್ದಪ್ಪ ಪಾಟೀಲ್ ಅವರು ಗದ್ಯ ಹಾಗೂ ಡಾ. ಶೈಲಜಾ ಕೊಪ್ಪರ ಅವರು ಶೈಲಜಾ ಉಡಚಣ ಅವರ ಸಂಶೋಧನೆ ಕುರಿತು ವಿಶೇಷ ಉಪನ್ಯಾಸ ಮಂಡಿಸಿದರು. ವಿಭಾಗದ ಡಾ.ರಾಜಣ್ಣ ತಗ್ಗಿ ವಿಚಾರ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಡಾ. ಅಪ್ಪಗೆರೆ ಸೋಮಶೇಖರ ಅವರು ಪ್ರತಿಕ್ರಿಯೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾಂಗ್ರೆಸ್‌ನಿಂದ ಮಾದಿಗ ಸಮುದಾಯದ ಕಡೆಗಣನೆ: ಫರ್ನಾಂಡಿಸ್ ಹಿಪ್ಪಳಗಾಂವ್
ಕಾರ್ಯಕ್ರಮದಲ್ಲಿ ಮಾನವಿಕ ಮತ್ತು ಭಾಷಾ ನಿಕಾಯದ ಡೀನ ಪ್ರೊ. ವಿಕ್ರಮ್ ವಿಸಾಜಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಗಂಗಾ ರುಮ್ಮಾ ಮತ್ತು ಕಾರ್ಯಕ್ರಮ ಸಂಯೋಜಕರಾದ ಪ್ರೊ. ಬಸವರಾಜ ಕೋಡಗುಂಟಿ ಅವರು ಉಪಸ್ಥಿತರಿದ್ದರು. ಡಾ. ವಿಜಯಕುಮಾರ್ ಅವರು ವಂದಿಸಿದರು. ಶ್ರೀ ಗದ್ದೆಪ್ಪ ನಿರೂಪಿಸಿದರು.
