- ಪಶ್ಚಿಮ ಬಂಗಾಳ ರಾಜ್ಯದಲ್ಲಿ ಗರಿಷ್ಠ 40 ಡಿಗ್ರಿ ತಾಪಮಾನ
- ಸಂಜೆಯವರೆಗೂ ಹೊರಗೆ ಬರದಂತೆ ಆರೆಂಜ್ ಅಲರ್ಟ್
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಗರಿಷ್ಠ 40 ಡಿಗ್ರಿ ತಾಪಮಾನ ದಾಖಲಾಗಿದೆ.
ರಾಜ್ಯದಲ್ಲಿ ಏಪ್ರಿಲ್ 17ರಿಂದ ವಾರದ ಮಟ್ಟಿಗೆ ಎಲ್ಲ ಶಾಲಾ ಕಾಲೇಜುಗಳಿಗೆ ಸರ್ಕಾರ ಭಾನುವಾರ (ಏಪ್ರಿಲ್ 16) ರಜೆ ಘೋಷಿಸಿದೆ.
ಗರಿಷ್ಠ 40 ಡಿಗ್ರಿ ತಾಪಮಾನ ದಾಖಲಾಗಿ ಶಾಖದ ಅಲೆಗಳ ತೀವ್ರತೆ ಹೆಚ್ಚಾಗಿರುವುದರಿಂದ ಮುಂದಿನ ಆದೇಶದವರೆಗೂ ರಜೆ ಮುಂದುವರಿಯಲಿದೆ ಎಂದು ಬಂಗಾಳ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಶಾಖದ ಅಲೆಗಳ ಪರಿಣಾಮ ಏಪ್ರಿಲ್ 19ರವರೆಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮುಂದುವರಿಯಲಿದೆ.
ಕೋಲ್ಕತ್ತದಲ್ಲಿ ಭಾನುವಾರ (ಏಪ್ರಿಲ್ 16) ಕನಿಷ್ಠ 29.6 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
“ಈಗಿರುವ ಶಾಖದ ಅಲೆಗಳ ಪರಿಸ್ಥಿತಿ ಪರಿಗಣಿಸಿ ಏಪ್ರಿಲ್ 17ರಿಂದ ಅನ್ವಯವಾಗುವಂತೆ ವಾರದ ಮಟ್ಟಿಗೆ ರಾಜ್ಯದಲ್ಲಿರುವ ಎಲ್ಲ ಸ್ವಾಯತ್ತ, ರಾಜ್ಯ, ಕೇಂದ್ರ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲು ಸರ್ಕಾರ ನಿರ್ಧರಿಸಲಾಗಿದೆ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ. ಡಾರ್ಜಲಿಂಗ್ ಮತ್ತು ಕಾಲೀಮ್‌ಜಂಗ್ ಜಿಲ್ಲೆಗಳ ಬೆಟ್ಟ ಪ್ರದೇಶದಲ್ಲಿರುವ ಶಾಲಾ ಕಾಲೇಜುಗಳಿಗೆ ಇದು ಅನ್ವಯವಾಗುವುದಿಲ್ಲ” ಎಂದು ಬಂಗಾಳ ಸರ್ಕಾರ ಹೊರಡಿಸಿದ ಅಧಿಸೂಚನೆ ಹೇಳಿದೆ.
“ಶಾಲೆಗಳು ಪುನರಾರಂಭ ಆಗುವವರೆಗೂ ಬೋಧಕ ಮತ್ತು ಬೋಧಕೇತರ ವರ್ಗದವರಿಗೂ ರಜೆ ಇರಲಿದೆ” ಎಂದು ಆದೇಶ ಹೇಳಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ ಶಿಕ್ಷಣ ಸಂಸ್ಥೆಗಳ ಮುಚ್ಚುವ ಬಗ್ಗೆ ನಿರ್ಧರಿಸಿದ್ದರು.
“ಪ್ರಸ್ತುತ ಸ್ಥಿತಿಯಲ್ಲಿ ಜನರು ಶಾಖದ ಅಲೆಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕಿದೆ. ಬಿಸಿಲಿನ ತಾಪ ಹೆಚ್ಚಿರುವ ಮಧ್ಯಾಹ್ನದಿಂದ ಸಂಜೆ 4 ಗಂಟೆಗಳವರೆಗೂ ಜನರು ಮನೆಯಿಂದ ಹೊರಗೆ ಬರುವುದನ್ನು ತಪ್ಪಿಸಬೇಕು” ಎಂದು ಅವರು ಹೇಳಿದರು.
ರಾಜ್ಯದಲ್ಲಿ ಆರೆಂಜ್ ಅಲರ್ಟ್
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ (ಏಪ್ರಿಲ್ 17) ಆರೆಂಜ್ ಅಲರ್ಟ್ ಘೋಷಿಸಿದೆ.
ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಬಿಹಾರ, ಸಿಕ್ಕಿಂ, ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಐಎಂಡಿ ಶಾಖದ ಅಲೆಗಳ ಎಚ್ಚರಿಕೆ ನೀಡಿದೆ.
“ದೇಶದ ವಾಯುವ್ಯ ಭಾಗದ ರಾಜ್ಯಗಳಲ್ಲಿ ತಾಪಮಾನ ಹೆಚ್ಚಳದ ಹಿನ್ನೆಲೆ ಇನ್ನು ಎರಡು ದಿನ ಶಾಖದ ಅಲೆಗಳ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ” ಎಂದು ಐಎಂಡಿ ಅಧಿಕಾರಿ ನರೇಶ್ ಕುಮಾರ್ ಹೇಳಿದರು.
“ಭಾರತದ ವಾಯುವ್ಯ ಮತ್ತು ಪೂರ್ವ ಭಾಗ ಹಾಗೂ ಮಧ್ಯಪ್ರದೇಶದಲ್ಲಿ ಗರಿಷ್ಠ 40 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ” ಎಂದು ಐಎಂಡಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ ಸರ್ಕಾರ ಸಮಾರಂಭದಲ್ಲಿ ಬಿಸಿಲಿನ ಝಳಕ್ಕೆ 11 ಮಂದಿ ಸಾವು
“ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ಭಾರತದಲ್ಲಿ ಇನ್ನು ನಾಲ್ಕು ದಿನ ಶಾಖದ ಅಲೆಗಳ ಸ್ಥಿತಿ ಇರಲಿದೆ. ಅದಕ್ಕಾಗಿ ರಾಜ್ಯದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ” ಎಂದು ಐಎಂಡಿ ತಿಳಿಸಿದೆ.
ಬಿಹಾರದ ಬಹುತೇಕ ಜಿಲ್ಲೆಗಳು ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಲಿವೆ. ಏಪ್ರಿಲ್ 19 ಮತ್ತು 20 ತಾಪಮಾನ ಗರಿಷ್ಠ 42-44 ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.