ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳ (ಸಿಸಿಬಿ)ಗೆ ವರ್ಗಾವಣ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ.
ಈ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ, ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಸಿಬಿಗೆ ವರ್ಗಾಯಿಸಿದೆ. ತನಿಖಾಧಿಕಾರಿಯಾಗಿ ಎಸಿಪಿ ನವೀನ್ ಕುಲಕರ್ಣಿ ನೇಮಕಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, “ರಾಮೇಶ್ವರಂ ಕೆಫೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ. ಇದೊಂದು ಭದ್ರತಾ ವಿಷಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಎಲ್ಲರೂ ಸಹಕರಿಸಬೇಕು” ಎಂದು ಕೋರಿದ್ದಾರೆ.
“ಹಾಗೆಯೇ, ಈ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ” ಎಂದು ತಿಳಿಸಿದ್ದಾರೆ.
ಸದ್ಯ ಘಟನಾ ಸ್ಥಳದಲ್ಲಿ ನಾನಾ ತನಿಖಾ ತಂಡಗಳು ಮೊಕ್ಕಾಂ ಹೂಡಿದ್ದು, ರಾತ್ರಿಯೆಲ್ಲ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಸ್ಥಳದಲ್ಲಿ ಬಾಂಬ್ ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಲಾಗಿದೆ. ಸ್ಫೋಟದ ಬಗ್ಗೆ ತನಿಖೆ ಮುಂದುವರಿಸಿರುವ ಎನ್‌ಐಎ ಹಾಗೂ ಸಿಸಿಬಿ ಅಧಿಕಾರಿಗಳು ಆರೋಪಿಯ ಬೆನ್ನು ಬಿದ್ದಿದ್ದಾರೆ. ಜತೆಗೆ, ಘಟನಾ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದುದಿಲ್ಲ. https://t.co/sle7T39aSg
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) March 2, 2024
ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ಕೆಫೆ ಒಳಗೆ ಹಾಗೂ ಹೊರಗಿನ ಭಾಗದಲ್ಲಿ ಶೋಧ ನಡೆಸಿದ್ದರು. ಮೊಬೈಲ್ ಸರ್ಕಿಟ್, ತಂತಿಗಳು, ಬೋಲ್ಟ್, ಬ್ಯಾಟರಿ ಹಾಗೂ ಮೊಳೆಗಳು ಪತ್ತೆಯಾಗಿರುವುದಾಗಿ ಮೂಲಗಳು ಹೇಳಿವೆ.
“ಮೊಬೈಲ್ ಸರ್ಕಿಟ್ ಬಳಸಿಕೊಂಡು ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದ ದುಷ್ಕರ್ಮಿ, ಅದನ್ನೇ ಕೆಫೆಯಲ್ಲಿ ಇರಿಸಿ ಹೋಗಿದ್ದಾನೆ” ಎಂದು ಮೂಲಗಳು ತಿಳಿಸಿವೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡ 9 ಜನರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ವೈದೇಹಿ ಆಸ್ಪತ್ರೆ, ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈವರೆಗೆ ಇಬ್ಬರು ಡಿಸ್ಚಾರ್ಜ್ ಆಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ | ನಾಲ್ವರು ಶಂಕಿತರು ಪೊಲೀಸ್ ವಶಕ್ಕೆ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀಸರು ರಾಜ್ಯದ ನಾನಾ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರು ನಗರದ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಭದ್ರತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರಯಾಣಿಕರ ಬ್ಯಾಗ್‌ಗಳನ್ನು ಹೋಮ್ ಗಾರ್ಡ್ಸ್ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ಟರ್ಮಿನಲ್ ಆವರಣಗಳಲ್ಲಿ ಕ್ಯಾಬ್ ಮತ್ತು ಪ್ರಯಾಣಿಕರನ್ನು ಕರೆದೊಯ್ಯುವ ಇತರ ವಾಹನಗಳ ಕಾಯುವಿಕೆ ಅವಧಿಯನ್ನು ಕಡಿಮೆ ಮಾಡಲಾಗಿದೆ. ವಿಮಾನ ನಿಲ್ದಾಣ ಮಾತ್ರವಲ್ಲದೆ, ಪ್ರಮುಖ ಪ್ರದೇಶಗಳಲ್ಲಿಯೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.