ಬಿಜೆಪಿಯ ಎಲ್ಲ ಕೆಲಸಗಳಿಂದ ತಮ್ಮನ್ನ ಮುಕ್ತಗೊಳಿಸುವಂತೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ, ಬಿಜೆಪಿಯ ಮತ್ತೊಬ್ಬ ಸಂಸದ ಜಯಂತ್ ಸಿನ್ಹಾ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಸಿನ್ಹಾ, ತಾವು ಹವಾಮಾನ ಬದಲಾವಣೆ ಸಂಬಂಧವಾಗಿ ಕೆಲಸ ಮಾಡಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ, ಚುನಾವಣೆಗೆ ಸ್ಪರ್ಧಿಸಲು ಮನಸ್ಸಿಲ್ಲ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶನಿವಾರ ಪೋಸ್ಟ್ ಮಾಡಿರುವ ಸಿನ್ಹಾ, “ನಾನು ಚುನಾವಣಾ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದಾಗಿ ನಾನು ಭಾರತ ಮತ್ತು ಪ್ರಪಂಚದಾದ್ಯಂತ ಜಾಗತಿಕ ಹವಾಮಾನ ಬದಲಾವಣೆಯನ್ನು ಎದುರಿಸುವ ಕೆಲಸಗಳಲ್ಲಿ ನನ್ನ ಪ್ರಯತ್ನಗಳನ್ನು ಕೇಂದ್ರೀಕರಿಸುತ್ತೇನೆ” ಎಂದು ಹೇಳಿದ್ದಾರೆ.
“ಖಂಡಿತವಾಗಿಯೂ, ನಾನು ಆರ್ಥಿಕ ಮತ್ತು ಆಡಳಿತ ವಿಷಯಗಳಲ್ಲಿ ಪಕ್ಷದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ಕಳೆದ ಹತ್ತು ವರ್ಷಗಳಿಂದ ಭಾರತ ಮತ್ತು ಹಜಾರಿಬಾಗ್ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಮೇಲಾಗಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕತ್ವವು ನನಗೆ ಒದಗಿಸಿದ ಅನೇಕ ಅವಕಾಶಗಳಿಗೆ ನಾನು ಅಬಾರಿಯಾಗಿದ್ದೇನೆ. ಅವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಹೇಳಿದ್ದಾರೆ.