ಮಂಗಳೂರಿನ ಜೀವನದಿ ಪಲ್ಗುಣಿಯನ್ನು ಸೇರುವ ತೋಕೂರು ಹಳ್ಳಕ್ಕೆ ಜೋಕಟ್ಟೆ ಹಾಗೂ ಬೈಕಂಪಾಡಿ ಕೈಗಾರಿಕಾ ವಲಯದ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ತ್ಯಾಜ್ಯ ಹರಿಯಬಿಡಲಾಗುತ್ತಿದೆ ನದಿ ನೀರು ಕಲುಷಿತವಾಗುತ್ತಿದೆ.
ರುಚಿಗೋಲ್ಡ್, ಅಧಾನಿ ವಿಲ್ಮರ್, ಯು.ಬಿ.ಬಿಯರ್, ಟೋಟಲ್ ಗ್ಯಾಸ್, ಫಿಷ್ ಮಿಲ್ ಮುಂತಾದ ಮಧ್ಯಮ ಕೈಗಾರಿಕೆಗಳು ಇರುವ ಭಾಗಾದಿಂದ ಈ ಮಾಲಿನ್ಯ ಕೈಗಾರಿಕಾ ಘಟಕಗಳಿಂದ ಶುದ್ದೀಕರಣ ಇಲ್ಲದೇ ನೇರವಾಗಿ ತೋಕೂರು ಹಳ್ಳ ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ತೋಕೋರು, ಕುಡಂಬೂರು, ಜೋಕಟ್ಟೆ ಸಹಿತ ಸುತ್ತಲ ಗ್ರಾಮಗಳ ಅಂತರ್ಜಲ, ಕೃಷಿಯ ಮೂಲ ಆಗಿರುವ ತೋಕೂರು ಹಳ್ಳ ಈಗ ಕೊಳೆತು ಅಸಹ್ಯವಾಗಿ ನಾರುತ್ತಿದೆ. ತೋಕೂರು ಹಳ್ಳದ ಮೂಲಕ ಕೈಗಾರಿಕಾ ತ್ಯಾಜ್ಯ ನೀರು ಜೀವನದಿ ಪಲ್ಗುಣಿಯನ್ನು ಸೇರುತ್ತಿದೆ. ಇದರಿಂದ ಈ ಭಾಗದ ನದಿಯೂ, ನದಿ ದಂಡೆಯ ಜನರಿಗೆ ಬಳಕೆಗೆ ಯೋಗ್ಯವಾಗಿ ಉಳಿದಿಲ್ಲ.
ಈ ಹಿಂದೆಯೂ ಹಲವು ಭಾರಿ ಇಂತಹದ್ದೇ ಸ್ಥಿತಿ ನಿರ್ಮಾಣಗೊಂಡಿತ್ತು. ಡಿವೈಎಫ್ಐ ಹಾಗೂ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆಗಳನ್ನೂ ಸಂಘಟಿಸಿತ್ತು. ಮಾಧ್ಯಮಗಳಲ್ಲಿ ಇದು ಸುದ್ದಿಯಾಗಿ ಸುಪ್ರೀಂ ಕೋರ್ಟ್ ನ ಹಸಿರು ಪೀಠ ಸುಮಟೊ ಮೊಕದ್ದಮೆಯನ್ನೂ ದಾಖಲಿಸಿ ತನಿಖೆಗೆ ಆದೇಶಿಸಿತ್ತು. ಈಗ ಮತ್ತೆ ಯಥಾ ಪ್ರಕಾರ ಕೈಗಾರಿಕೆಗಳು ತಮ್ಮ ವಿಷಯುಕ್ತ ಮಾಲಿನ್ಯವನ್ನು ಪಲ್ಗುಣಿಗೆ ಯಾವ ಅಂಜಿಕೆಯೂ ಇಲ್ಲದೆ ಹರಿಯಬಿಟ್ಟಿವೆ. ಮಾಲಿನ್ಯ ನಿಯಂತ್ರಣ ಮಂಡಳಿ ಈಗ ಮೌನವಾಗಿದೆ ಎಂದು ಸ್ಥಳೀಯರು ಬೇಸರ ಹೊರಹಾಕುತ್ತಾರೆ.
ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಇಂತಹ ಪ್ರಶ್ನೆಗಳ ಕುರಿತು ಸಣ್ಣ ಕಾಳಜಿಯನ್ನೂ ತೋರದಿರುವುದು ಮಾಲಿನ್ಯಕಾರಕ ಕೈಗಾರಿಕೆಗಳು ಯಾರ ಭಯವೂ ಇಲ್ಲದೆ ಇಂತಹ ಅನಾಹುತಗಳನ್ನು ಎಸಗಲು ಧೈರ್ಯ ಬಂದಿದೆ ಎಂದು ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅಪಾದಿಸಿದ್ದಾರೆ.
ಈಗ ಆಗಿರುವ ಮಾಲಿನ್ಯವನ್ನು ಸರಿಪಡಿಸಲು, ತಪ್ಪಿತಸ್ಥ ಕೈಗಾರಿಕೆಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕರಿಗಳು ತಕ್ಷಣವೇ ಮುಂದಾಗಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿ ಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ಖಾಲಿ, ಖಾಲಿ
ಕೈಗಾರಿಕಾ ನಗರ, ಕ್ವಾರಿಗಳು ತುಂಬಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿಶೇಷ ಮಹತ್ವ ಇದೆ. ಕೆಲಸದ ಒತ್ತಡವೂ ಸಾಕಷ್ಟಿದೆ. ನೂರಾರು ಕೈಗಾರಿಕೆಗಳು, ಕ್ವಾರಿಗಳು ಇರುವ ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಬಹುತೇಕ ಹುದ್ದೆಗಳು ಖಾಲಿ ಬಿದ್ದಿವೆ. ಕೇವಲ ಒಂದೆರಡು ಅಧಿಕಾರಿಗಳು ಎಲ್ಲಾ ಜವಾಬ್ದಾರಿ ನಿರ್ವಹಿಸುವ ಅಸಾಧ್ಯ ಸ್ಥಿತಿ ನಿರ್ಮಾಣಗೊಂಡಿದೆ.
ಪ್ರಾದೇಶಿಕ ಅಧಿಕಾರಿಯಾಗಿದ್ದ ಡಾ. ರವಿ ಕೆಲಸದ ಒತ್ತಡದ ಮಧ್ಯೆಯೇ ಮೆದುಳು ಆಘಾತಕ್ಕೊಳಗಾಗಿ ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಹುದ್ದೆಗೂ ಸರ್ಕಾರ ಅಧಿಕಾರಿಯನ್ನು ನೇಮಿಸಿಲ್ಲ. ಖಾಲಿ ಹುದ್ಡೆಗಳನ್ನೂ ಭರ್ತಿ ಮಾಡುತ್ತಿಲ್ಲ. ಇರುವ ಒಂದೆರಡು ಅಧಿಕಾರಿಗಳು, ಗುತ್ತಿಗೆ ನೌಕರರನ್ನೇ ಹಗಲು ರಾತ್ರಿ ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದೆ. ಈ ಪರಿಸ್ಥಿತಿ ಶುದ್ದೀಕರಿಸದೆ ವಿಷಕಾರಿ ತ್ಯಾಜ್ಯ ಹರಿಯ ಬಿಡುವ ಕೈಗಾರಿಕೆಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟಿದೆ ಎನ್ನುವುದು ಸ್ಥಳೀಯರ ಮಾತು.