ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ರೈತ ಸಾಲ ಮನ್ನಾಕ್ಕಾಗಿ ಆಗ್ರಹಿಸಿದ ನಡೆಯುತ್ತಿರುವ ‘ದೆಹಲಿ ಚಲೋ’ ರೈತ ಹೋರಾಟ 20ನೇ ದಿನಕ್ಕೆ ಕಾಲಿಟ್ಟಿದೆ. ರೈತರು ದೆಹಲಿ ತಲುಪದಂತೆ ತಡೆಯಲು ಹರಿಯಾಣ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಭಾರೀ ಪ್ರಯತ್ನ ನಡೆಸುತ್ತಿವೆ. ರೈತರ ಮೇಲೆ ಟಿಯರ್ ಗ್ಯಾಸ್, ರಬ್ಬರ್ ಗುಂಡಿನ ದಾಳಿಗಳೂ ನಡೆದಿವೆ. ಈವರೆಗೆ, ಆರು ಮಂದಿ ರೈತರು ಸಾವನ್ನಪ್ಪಿದ್ದಾರೆ. ಆದರೂ, ಸರ್ಕಾರದ ದಮನಕ್ಕೆ ಬಗ್ಗದ ರೈತರು ಹೋರಾಟ ಮುಂದುವರೆಸಿದ್ದಾರೆ.
ರೈತರ ಹೋರಾಟದಲ್ಲಿ ಕರ್ನೈಲ್ ಸಿಂಗ್ (62), ಜ್ಞಾನ್ ಸಿಂಗ್ (63), ಮಂಜಿತ್ ಸಿಂಗ್ (72), ನರಿಂದರ್‌ಪಾಲ್ ಸಿಂಗ್ (43), ಶುಭಕರನ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ (23) ಅವರು ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಅಲ್ಲದೆ, ಸುಮಾರು 100ಕ್ಕೂ ಹೆಚ್ಚು ಮಂದಿ ರೈತರು ಗಾಯಗೊಂಡಿದ್ದಾರೆ. ಕಲವರು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದ್ದಾರೆ.
ಸಾವನ್ನಪ್ಪಿದ ರೈತರಿಗೆ ಹೋರಾಟದ ಸ್ಥಳದಲ್ಲೇ ಪ್ರತಿಭಟನಾನಿರತ ರೈತರು ಭಾನುವಾರ ಅಂತಿಮ ನಮನ ಸಲ್ಲಿಸಲು ಸಭೆ ನಡೆಸುತ್ತಿದ್ದಾರೆ. ಸಭೆಯ ನಂತರ ಹೋರಾಟದ ಮುಂದಿನ ರೂಪುರೇಷೆಗಳನ್ನು ನಿರ್ಧರಿಸಿ, ತಿಳಿಸುವುದಾಗಿ ರೈತ ಮುಖಂಡರು ಹೇಳಿದ್ದಾರೆ.
“ಇದು ಕೇವಲ ಅಶ್ರುವಾಯು ಅಥವಾ ಲಘು ಲಾಠಿ ಪ್ರಹಾರದ ಪ್ರಶ್ನೆಯಲ್ಲ… ಅವರು (ಪೊಲೀಸರು) ವಿಷಕಾರಿ ಅನಿಲಗಳನ್ನು ಬಳಸಿದ್ದನ್ನು ನಾವು ನೋಡಿದ್ದೇವೆ. ಯುವ ರೈತ ಶುಭಕರನ್ ಅವರನ್ನು ಹೇಗೆ ಕಳೆದುಕೊಂಡಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಜಾಪ್ರಭುತ್ವದಲ್ಲಿ ಬುಲೆಟ್‌ಗಳನ್ನು ಹಾರಿಸುವುದು ಸಮರ್ಥನೆಯ ಸಂಗತಿಯೇ? ನಮ್ಮ ಆಂದೋಲನ ಮುಂದುವರಿಯುತ್ತದೆ. ಅದು ವಿಜಯದತ್ತ ಸಾಗುತ್ತದೆ” ಎಂದು ರೈತ ಮುಖಂಡ ಜಸ್ವಿಂದರ್ ಸಿಂಗ್ ಲೊಂಗೊವಾಲ್ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಕರೆ ಕೊಟ್ಟು ಆರಂಭಿಸಿದ ರೈತ ಹೋರಾಟಕ್ಕೆ, ಈಗ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬೆಂಬಲ ನೀಡಿವೆ. ಅನೇಕ ಸಂಘಟನೆಗಳು ಜೊತೆಗೂಡಿವೆ.
ರೈತರು 23 ಬೆಳೆಗಳಿಗೆ ಎಂಎಸ್‌ಪಿಯನ್ನು ಕಾನೂನಿ ಮೂಲಕ ಖಾತರಿಪಡಿಸಬೇಕು. ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕಿಂತ 50% ಲಾಭದೊಂದಿಗೆ ಎಂಎಸ್‌ಪಿ ನಿಗದಿಯಾಗಬೇಕು. 2020ರಲ್ಲಿ ಒಂದು ವರ್ಷಗಳ ಕಾಲ ನಡೆದ ರೈತ ಹೋರಾಟದಲ್ಲಿ ಸಾವನ್ನಪ್ಪಿದ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಹಕ್ಕೊತ್ತಾಯಗಳನ್ನು ರೈತರು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. ಈವರೆಗೆ, ರೈತರು ಮತ್ತು ಸರ್ಕಾರದ ನಡುವೆ 4 ಸುತ್ತಿನ ಸಭೆ ನಡೆದಿದ್ದು, ನಾಲ್ಕೂ ಸಭೆಗಳು ವಿಫಲವಾಗಿವೆ.