“ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದ ಘನತೆ ಹಾಳು ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ತನಿಖೆಯ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಬೆಂಗಳೂರಿನ ಗೌರವ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ತಿಳಿಸಿದರು.
“ಬಿಜೆಪಿ ನಾಯಕರು ಈ ವಿಚಾರವಾಗಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಘನತೆಗೆ ಧಕ್ಕೆ ತರುತ್ತಿದ್ದಾರೆ. ಆಮೂಲಕ ತಮ್ಮ ಗೌರವವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರ ಕಾಲದಲ್ಲಿ ಏನೆಲ್ಲಾ ಆಗಿದೆ ಎಂದು ಮರೆತಿದ್ದಾರೆ. ಅವರು ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ. ಈ ವಿಚಾರವಾಗಿ ರಾಜಕೀಯ ಮಾಡಲು ನನಗೆ ಇಚ್ಛೆ ಇಲ್ಲ. ಈ ಸಮಯದಲ್ಲಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಬಗ್ಗೆ ಅರಿವಿರಬೇಕು” ಎಂದು ಬಿಜೆಪಿಯವರ ವಿರುದ್ಧ ಕಿಡಿಕಾರಿದರು.
ಇದನ್ನು ಓದಿದ್ದೀರಾ? ರಾಮೇಶ್ವರ ಕೆಫೆ ಬಾಂಬ್ ಪ್ರಕರಣ | ಅಗತ್ಯ ಬಿದ್ದರೆ ತನಿಖೆ ಎನ್ಐಎಗೆ ವಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ಇದು ಬ್ರ್ಯಾಂಡ್ ಬೆಂಗಳೂರು. ಅಲ್ಲ ಬಾಂಬ್ ಬೆಂಗಳೂರು ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಸಮಯ ಪ್ರಜ್ಞೆ, ತಮ್ಮ ಜವಾಬ್ದಾರಿಯ ಅರಿವು ಇಲ್ಲದವರು ಈ ರೀತಿ ಮಾತನಾಡುತ್ತಾರೆ” ಎಂದು ತಿರುಗೇಟು ನೀಡಿದರು.
