ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ, ಬಹು ಸಂಖ್ಯಾತರ ಮೇಲೆ ಆರೋಪ ಬಂದರೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಇಲಾಖೆಗೆ ಸರ್ಕಾರದಿಂದ ನಿರ್ದೇಶನ ಹೋಗಿದೆ ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅರೋಪಿಸಿದರು.
ಬೆಂಗಳೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾಕಿಸ್ತಾನ ಪರ ಘೋಷಣೆಯ ಆರೋಪ ಸಾಬೀತಾದರೆ ಸರ್ಕಾರ ವಿಸರ್ಜನೆ ಮಾಡುತ್ತಾರೆಯೇ?” ಎಂದು ಸವಾಲು ಹಾಕಿದರು.
ಕೆಪೆ ಸ್ಪೋಟ ವಿಚಾರವಾಗಿ ಮಾತನಾಡಿ, “ಉದ್ಯಮ ಸಂಘರ್ಷದಿಂದ ದಾಳಿ ಎಂದು ಹೇಳಿದ್ದು ಯಾರು? ಹೀಗೆ ಹೇಳಿದರೆ ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮುಂದುವರಿಸುತ್ತಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಕಾಂಗ್ರೆಸ್ ಸರ್ಕಾರದ ಮನಸ್ಥಿತಿಗೆ ನೊಬೆಲ್ ಪ್ರಶಸ್ತಿಯನ್ನೇ ಕೊಡಬೇಕು. ಗೃಹ ಸಚಿವರು ಈಗ ಯಾರದ್ದೋ ಹಿತಾಸಕ್ತಿಯ ಕೈವಾಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಇಲ್ಲದಿದ್ದರೆ ಇದ್ದ ರಿಪೋರ್ಟ್ ಇದ್ದ ಹಾಗೆ ಅವರು ಕೊಡುತ್ತಿದ್ದರು. ಅವರ ಮೇಲೆ ಒತ್ತಡ ಇರುವುದು ಸತ್ಯ” ಎಂದರು.
“ಖಾಸಗಿ ಎಫ್ಎಸ್ಎಲ್ ರಿಪೋರ್ಟ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿದೆ. ಸರ್ಕಾರಕ್ಕೆ ಕೂಡ ಈಗಾಗಲೇ ಎಫ್ಎಸ್ಎಲ್ ವರದಿ ಬಂದಿದೆ. ಯಾರನ್ನೋ ಕಾಪಾಡಲು ರಾಜ್ಯ ಸರ್ಕಾರ ಮುಚ್ಚಿಡುವ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.
