ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಘಟಕದಲ್ಲಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗಳ ಕೆಲಸ ಕಿತ್ತುಕೊಂಡು ವೇತನ ನೀಡದೆ ಬೀದಿ ಪಾಲು ಮಾಡಿದ ಸಿಡಿಪಿಒ ಮಹೇಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಹಲವು ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಜಮಾಯಿಸಿದ ಸಂತ್ರಸ್ತ ಮಹಿಳಾ ಸಿಬ್ಬಂದಿ ಹಾಗೂ ನೊಂದ ಮಹಿಳೆಯರ ಪರ ನಿಂತ ಹಲವು ಸಂಘದ ಪದಾಧಿಕಾರಿಗಳು ಸಿಡಿಪಿಒ ಮಹೇಶ್ ಅವರ ದೌರ್ಜನ್ಯ ನಡೆ ಖಂಡನೀಯ ಎಂದು ಘೋಷಣೆ ಕೂಗಿದರು. ಮಹಿಳೆಯ ಅನ್ನಕ್ಕೆ ಕುತ್ತು ತಂದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
“ಹತ್ತಾರು ವರ್ಷಗಳಿಂದ ಈ ಉದ್ಯೋಗ ನಂಬಿ ಬದುಕು ಕಟ್ಟಿಕೊಂಡ ಮಹಿಳೆಯರು ಆಹಾರ ತಯಾರಿಕಾ ಘಟಕದಲ್ಲಿ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಆದರೆ ದಿಢೀರ್ ಕೆಲ ಬದಲಾವಣೆ ಮುಂದಿಟ್ಟು ರಾಜ್ಯ ಮಟ್ಟದಲ್ಲಿ ಟೆಂಡರ್ ಬದಲಾಗಿದೆ. ಆಹಾರ ಪದಾರ್ಥ ಸರಬರಾಜು ಬೇಡಿಕೆ ಪತ್ರ ಅವಶ್ಯವಿದೆ ಎಂದು ಹೇಳಿ ಎಲ್ಲ ಮಹಿಳಾ ಸಿಬ್ಬಂದಿಗಳಿಂದ ಬಲವಂತವಾಗಿ ಸಹಿ ಸಂಗ್ರಹ ಮಾಡಿ ಅದನ್ನು ವಿಡಿಯೋ ಮಾಡಿದ ಅಧಿಕಾರಿ ಮಹೇಶ್ ಕಳೆದ ಮೂರು ತಿಂಗಳಿಂದ ನಮಗೆ ಕೆಲಸವೇ ಇಲ್ಲದಂತೆ ಮಾಡಿದ್ದಾರೆ. ವೇತನವನ್ನೂ ನೀಡಿಲ್ಲ” ಎಂದು ಆರೋಪಿಸಿದರು.
ಒಕ್ಕೂಟದ ಅಧ್ಯಕ್ಷೆ ಪ್ರಿಯಾಂಕಾ ಮಾತನಾಡಿ, “ಏಕಾಏಕಿ ಕೆಲಸವಿಲ್ಲದಂತೆ ಮಾಡಿದ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದ ನಮ್ಮನ್ನು ಹೀಗೆ ಬೀದಿಗೆ ತಂದ ಅಧಿಕಾರಿಯ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ಕೂಗಿಗೆ ಬೆಲೆ ಸಿಗದ ಈ ಸಂದರ್ಭದಲ್ಲಿ ಹಲವು ಸಂಘಟನೆಗಳು ನಮ್ಮ ಬೆಂಬಲಕ್ಕೆ ನಿಂತಿವೆ. ತೊಂದರೆ ನೀಡಿದ ಅಧಿಕಾರಿಯನ್ನು ಅಮಾನತುಗೊಳಿಸಿ ನಮ್ಮ ಒಕ್ಕೂಟದ ಕೆಲಸ ಪುನರಾರಂಭ ಮಾಡಬೇಕು” ಎಂದು ಒತ್ತಾಯಿಸಿದರು.
“ಆಹಾರ ತಯಾರಿಸುವ ಘಟಕದಲ್ಲಿ ಸಿಡಿಪಿಒ ವಿಚಾರಣೆ ಮಾಡುವಂತಿಲ್ಲ. ಆದರೆ ಅಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದರು. ಆಹಾರ ಪೂರೈಕೆ ಮಾಡುವ ಟೆಂಡರ್ ರಾಜ್ಯದಲ್ಲಿ ನಡೆದಿದ್ದರೆ, ಹಲವು ವರ್ಷಗಳಿಂದ ಕೆಲಸ ಮಾಡುವ ಮಹಿಳೆಯರನ್ನು ಕೆಲಸದಿಂದ ತೆಗೆಯುವ ಹಕ್ಕು ಯಾರಿಗೆ ನೀಡಿದ್ದಾರೆ. ಒಮ್ಮೆ ಸಂಧಾನ ಮಾತನಾಡುವ ಅಧಿಕಾರಿಗಳು ಏಕಾಏಕಿ ಅಸಭ್ಯ ವರ್ತನೆ ತೋರಿದ್ದಾರೆ. ಇಲ್ಲಸಲ್ಲದ ನಿಯಮ ಮಾತನಾಡುವ ಇಲಾಖೆಯ ಅಧಿಕಾರಿಗಳು ಹತ್ತಾರು ವರ್ಷಗಳಿಂದ ಇರುವ ಸಿಬ್ಬಂದಿಗಳ ಬದುಕಿನ ಕುರಿತು ಮಾನವೀಯತೆಯಿಂದ ಯೋಚಿಸಬೇಕಿತ್ತು. ರಾಜ್ಯ ಮಟ್ಟದ ಟೆಂಡರ್ ಪಡೆದ ರೇಣುಕಾ ಎಲ್ಲಮ್ಮ ಸಂಸ್ಥೆಯ ಜೊತೆ ಮಾತುಕತೆ ಮಾಡಿಸದೆ ಅಧಿಕಾರಿಗಳೇ ಏಕ ನಿರ್ಧಾರ ಕೈಗೊಂಡಿದ್ದಾರೆ. ಮನ ಬಂದಂತೆ ದರ್ಪ ಮೆರೆಯುವ ಸಿಡಿಪಿಒ ಮಹೇಶ್ ಅವರನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕೆ ಧಾವಿಸಿದ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಆರ್ ಎಂ ದಿನೇಶ್ ಮಾತನಾಡಿ, “ಪೌಷ್ಠಿಕ ಆಹಾರ ತಯಾರಿಸುವ ಟೆಂಡರ್ ರಾಜ್ಯ ಮಟ್ಟದಲ್ಲಿ ಆಗಿದೆ. ಇಲಾಖೆಯ ಸಂಬಂಧ ಕೇವಲ ಆಹಾರ ಬೇಡಿಕೆಯ ಅಂಕಿ ಅಂಶ ನೀಡುವುದು, ಟೆಂಡರ್ ಪಡೆದ ಸಂಸ್ಥೆಯ ಜೊತೆ ಮಾತುಕತೆ ನಡೆಸಬೇಕು. ಇಲ್ಲಿ ನಮ್ಮ ಪಾತ್ರ ಏನಿಲ್ಲ” ಎಂದರು.
ಕೂಡಲೇ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸಿಡಿಪಿಒ ಮಹೇಶ್ ವರ್ತನೆ ವಿರುದ್ದ ಕಿಡಿಕಾರಿದರು. ಹಾರಿಕೆ ಉತ್ತರ ಬೇಕಿಲ್ಲ. ಸಂಬಂಧಪಟ್ಟ ಸಂಸ್ಥೆಯ ಪ್ರತಿನಿಧಿಗಳು ಬರಲಿ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ
ಪ್ರತಿಭಟನೆಯಲ್ಲಿ ಒಕ್ಕೂಟದ ಖಜಾಂಚಿ ಜಯಲಕ್ಷ್ಮಿ, ಕಾರ್ಯದರ್ಶಿ ಉಷಾರಾಣಿ, ಪ್ರತಿಭಟನೆ ಬೆಂಬಲಿಸಿದ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಸಿ ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಮುಖಂಡರುಗಳಾದ ಶಿವಾಜಿರಾವ್, ಸೋಮಶೇಖರ್, ಶಶಿಧರ್, ಸತೀಶ್, ಚನ್ನಬಸವಯ್ಯ, ಶಿವಪ್ಪ, ಮಧು ಸೇರಿದಂತೆ ಇತರರು ಇದ್ದರು.
