ನಮ್ಮದೇ ಬದುಕು ಬಿಂಬಿಸುವ ‘ಬನೇಲ್ ಅಂಡ್ ಆಡಮ್’- ನೋಡಬೇಕಾದ ಚಿತ್ರ

Date:

Advertisements
ಸೆನೆಗಲ್ಲಿನ ಯಾವುದೋ ಮೂಲೆಯ ಪುಟ್ಟ ಸಮುದಾಯವನ್ನು ಸಮಕಾಲೀನ ವಿಷಯಗಳೊಂದಿಗೆ ಬೆಸೆಯುವ, ಪ್ರಚಂಚದ ಆಗುಹೋಗುಗಳೊಂದಿಗೆ ಸಮೀಕರಿಸಿರುವ ರೀತಿ ಭಿನ್ನವಾಗಿದೆ. ಆ ಕಾರಣಕ್ಕಾಗಿ ‘ಬನೇಲ್ ಅಂಡ್ ಆಡಮ್’ ಚಿತ್ರವನ್ನು ಮಿಸ್ ಮಾಡದೇ ನೋಡಬೇಕಾಗಿದೆ.

15ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೆಚ್ಚೂಕಡಿಮೆ ಬಡವರ, ಶೋಷಿತರ, ದನಿ ಇಲ್ಲದವರ ಬದುಕನ್ನು ಬಿಂಬಿಸುವ ಚಿತ್ರಗಳೇ ಹೆಚ್ಚಾಗಿವೆ. ಅವು ಮನುಷ್ಯತ್ವಕ್ಕಾಗಿ ತುಡಿವ ಮನಸ್ಸುಗಳಿಗೆ ಹತ್ತಿರವಾಗುತ್ತವೆ. ಆಪ್ತವೆನಿಸುತ್ತವೆ. ನಮ್ಮದೇ ಕತೆಯನ್ನು ಮತ್ತೊಬ್ಬರು ತೆರೆಯ ಮೇಲೆ ತಂದಿದ್ದಾರಲ್ಲ ಎನಿಸುತ್ತದೆ.

ಅಂಥದ್ದೇ ಒಂದು ಚಿತ್ರ ‘ಬನೇಲ್ ಅಂಡ್ ಆಡಮ್’. ಸೆನೆಗಲ್ ದೇಶದ ಈ ಚಿತ್ರ ಒಂದು ಬುಡಕಟ್ಟಿನ ಕತೆಯನ್ನು ಹೇಳುತ್ತದೆ. ಹತ್ತಾರು ಮುಸ್ಲಿಂ ಮನೆಗಳ ಆಚಾರ-ಆಹಾರ ಪದ್ಧತಿಯನ್ನು ಅರಹುತ್ತದೆ. ನೀರು-ನೆರಳಿಲ್ಲದ ಬರಡು ಬದುಕನ್ನು ಬಿಡಿಸಿಡುತ್ತದೆ. ಅವರ ನಡುವೆಯೇ ಇರುವ ಇಬ್ಬರು ಯುವ ಪ್ರೇಮಿಗಳ ತುಡಿತ ತಲ್ಲಣಗಳನ್ನೂ ತೆರೆದಿಡುತ್ತದೆ.

ಬನೇಲ್ ಮತ್ತು ಆಡಮ್– ಯುವ ದಂಪತಿಗಳು. ಒಬ್ಬರನ್ನೊಬ್ಬರು ಬಿಟ್ಟು ಬದುಕದ ಪ್ರೇಮಿಗಳು. ಚಿಕ್ಕಂದಿನಿಂದಲೂ ಒಟ್ಟೊಟ್ಟಿಗೇ ಆಡಿಕೊಂಡು ಬೆಳೆದವರು. ಇಬ್ಬರೂ ಪ್ರೀತಿಸಿ ಮದುವೆಯಾಗಿ, ಎಲ್ಲರಿಂದಲೂ ಬೇರೆಯಾಗಿ ಬದುಕಲು ಆಸೆಪಟ್ಟವರು. ಅವರಿಗೆ ಕೌಟುಂಬಿಕ ಕಟ್ಟುಪಾಡುಗಳ ಹಂಗಿಲ್ಲ. ಹಿರಿಯರ ಉಪದೇಶಕ್ಕೆ ಕಿವಿಗೊಡುವುದಿಲ್ಲ. ಮೌಲ್ವಿಯ ಮಾತು ಕೇಳುವುದಿಲ್ಲ.

Advertisements

ಆಡಮ್- ಹೆಚ್ಚು ಮಾತನಾಡದ ಅಂತರ್ಮುಖಿ. ಅವನಿಗೆ ದನ ಕಾಯುವ ಕೆಲಸ. ಬಿಡುವಾದಾಗ ತಮ್ಮದೇ ಆದ ಪುಟ್ಟ ಮನೆ ಕಟ್ಟಿಕೊಳ್ಳುವ ಆಸೆ. ಆತನೊಂದಿಗೆ ಕೈ ಜೋಡಿಸುವ ಬನೇಲ್, ಎಲ್ಲದರಲ್ಲೂ ಒಂದಾಗುವ ಮಹದಾಸೆ. ತಮ್ಮದೇ ಒಂದು ಪುಟ್ಟ ಪ್ರಪಂಚದಲ್ಲಿ ಹಕ್ಕಿಗಳಂತೆ ಹಾರಾಡಬೇಕು ಎಂಬ ಮಹತ್ವಾಕಾಂಕ್ಷಿ. ಅತ್ತೆ ಮಾತು ಕೇಳದ ಬನೇಲ್ ಬಂಡಾಯಗಾರ್ತಿ. ಇದ್ದುದನ್ನು ಇದ್ದಂತೆ ಹೇಳುವ ನೇರ ಮಾತಿನ ಧೈರ್ಯಸ್ಥೆ. ಇಬ್ಬರ ನಡುವೆ ಮಗು ಬಂದು ಪ್ರೀತಿ ಹಂಚಿಕೆಯಾಗುವುದನ್ನು ಸಹಿಸದ ಸ್ವಾರ್ಥಿ. ಒಂದು ರೀತಿಯಲ್ಲಿ ಆಧುನಿಕ ಚಿಂತನೆಯ ಮಹಿಳೆ.

ಇದನ್ನು ಓದಿದ್ದೀರಾ?: ’ಪ್ಯಾರಡೈಸ್’ ಚಿತ್ರ ವಿಮರ್ಶೆ: ಶ್ರೀಲಂಕಾ ಬಿಕ್ಕಟ್ಟಿನೊಳಗೆ ಎಷ್ಟೊಂದು ಪದರ!

ಆದರೆ ಅವರು ಬದುಕುತ್ತಿರುವ ಹಳ್ಳಿ, ಆಚರಣೆ, ಸಂಪ್ರದಾಯಗಳೇ ಬೇರೆ. ಸ್ಥಿತಿಗತಿಯೂ ಬೇರೆ. ಅದಕ್ಕೆ ಒಗ್ಗಿಹೋಗಿರುವ ಅತ್ತೆ, ಮೌಲ್ವಿಗಳ ಮಾತಿಗೆ ಮಣೆ ಹಾಕಿ, ಮೌಢ್ಯಕ್ಕೆ ಕಟ್ಟುಬಿದ್ದು ಮಗನನ್ನು ಹಳ್ಳಿಯ ನಾಯಕನನ್ನಾಗಿ ಮಾಡಿ, ಕೌಟುಂಬಿಕ ವ್ಯವಸ್ಥೆಗೆ ಒಗ್ಗಿಸಲು ನೋಡುತ್ತಾಳೆ. ಬನೇಲ್ ಅದನ್ನು ವಿರೋಧಿಸಿ ಬಂಡಾಯವೇಳುತ್ತಾಳೆ. ಹಳ್ಳಿಯ ಹೆಂಗಸರೆಲ್ಲ ಕೂಡಿ ಮಾಡುವ ನಾಟಿ ಕೆಲಸಕ್ಕೆ, ಮಳೆ ಬಾರದಿದ್ದಾಗ ನೀರು ಹಾಕಲಿಕ್ಕೆ ಮುಂದಾದಾಗ, ಬನೇಲ್ ನಿರಾಕರಿಸುತ್ತಾಳೆ.

ಮನುಷ್ಯರ ವಿವೇಚನೆಗೆ ಮೀರಿದ ಪ್ರಕೃತಿ, ತಾನೊಲಿದಂತೆ ಆಡುತ್ತದೆ. ಮಳೆ ಬರದೆ ಬೆಳೆ ಒಣಗಿ ಹೋಗುತ್ತದೆ. ಮೇವಿಲ್ಲದೆ ಹಸುಗಳು ಅಸುನೀಗುತ್ತವೆ. ಬಿಸಿ ಗಾಳಿ ಹೆಚ್ಚಾಗಿ, ನೀರು-ಆಹಾರದ ಕೊರತೆಯಾಗಿ ಮಕ್ಕಳು-ಮುದುಕರ ಸಾಲು ಸಾಲು ಸಾವು ಸಾಮಾನ್ಯವಾಗುತ್ತದೆ. ಎಲ್ಲೆಂದರಲ್ಲಿ ಹಸುಗಳ ಕಳೇಬರ, ಮನುಷ್ಯರ ಸಮಾಧಿ-ಬರಡು ಬದುಕನ್ನು ಬಗೆದು ತೋರುತ್ತವೆ.

ಪ್ರಕೃತಿಯ ಮುನಿಸು, ನೆರೆ-ಹೊರೆಯವರ ಹೊಟ್ಟೆಕಿಚ್ಚು, ಚುಚ್ಚುಮಾತುಗಳ ನಡುವೆಯೇ, ಮದುವೆಯಾಗಿ ವರ್ಷವಾದರೂ ಮಕ್ಕಳಾಗದಿರುವುದು, ಅತ್ತೆಗೆ ಕಾಲ ಕೂಡಿ ಬಂದಂತಾಗುತ್ತದೆ. ಆಡಮ್‌ಗೆ ಮತ್ತೊಂದು ಮದುವೆ ಮಾಡುವುದಾಗಿ ಪ್ರಸ್ತಾಪಿಸುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಆಡಮ್ ಕೂಡ ಪ್ರಕೃತಿಯ ಮುನಿಸಿಗೆ ತನ್ನ ನಿಲುವು ಕೂಡ ಕಾರಣವಾಗಿರಬಹುದೇ ಎಂಬ ಅನುಮಾನಕ್ಕೆ ಬೀಳುತ್ತಾನೆ. ಜೊತೆಗೆ ಬೆಳೆ ನಾಶ, ಹಸುಗಳು-ಮಕ್ಕಳು-ಮುದುಕರ ಸಾವಿಗೆ ಕಂಗೆಟ್ಟು, ಮೌಲ್ವಿಯ ಮಾತಿಗೆ ಮನ ಕರಗಿ, ಅಮ್ಮನೇ ಸರಿ ಎನ್ನುವಲ್ಲಿಗೆ ಬಂದು ನಿಲ್ಲುತ್ತಾನೆ. ಬನೇಲ್‌ಳ ಬಿಗಿ ಅಪ್ಪುಗೆಯಿಂದ ವಿಮುಖನಾಗುತ್ತಾನೆ. ಮೌನಕ್ಕೆ ಜಾರುತ್ತಾನೆ.

ಬನೇಲ್ ಮತ್ತು ಆಡಮ್- ಇಬ್ಬರನ್ನು ಒಂದುಮಾಡಿದ ಹಳ್ಳಿ, ಕುಟುಂಬ, ಕಾಯಕ, ಪ್ರಕೃತಿ ಎಂಬ ವ್ಯವಸ್ಥೆಯೇ ಈಗ ಅವರ ಪ್ರೀತಿಗೆ ವಿರುದ್ಧವಾಗಿದೆ. ಆ ವ್ಯವಸ್ಥೆಯಿಂದ ಬಿಡಿಸಿಕೊಳ್ಳಲು ಬಂಡಾಯವೇಳುವ ಆ ಜೋಡಿ, ಮತ್ತದೇ ವ್ಯವಸ್ಥೆಗೆ ಸಿಕ್ಕು ನಲುಗುವಂತಾಗುತ್ತದೆ. ಆ ನರಳಾಟದಿಂದ ಆ ಜೋಡಿ ಹೊರಬಂದೀತೆ- ಅದನ್ನು ಚಿತ್ರ ನೋಡಿಯೇ ನಾಭಿಗಿಳಿಸಿಕೊಳ್ಳಬೇಕು.

Banel and Adama1

ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಆ ಜೋಡಿಯ ಮನಸ್ಸಿನ ಮರ್ಮರವನ್ನು ಬಿರುಗಾಳಿಗೆ ಹೋಲಿಸುವ ನಿರ್ದೇಶಕಿ ರಮತಾ, ಬಿರುಗಾಳಿಯ ರೌದ್ರವತಾರವನ್ನು ತೆರೆಗೆ ತಂದ ರೀತಿ ವಿಭಿನ್ನವಾಗಿದೆ. ಚಿತ್ತದಲ್ಲಿ ಚಿರಕಾಲ ಉಳಿಯುತ್ತದೆ.

ನಿರ್ದೇಶಕಿ ರಮಟಾ, ಮೂಲತಃ ಚಿತ್ರಕಥೆಗಾರ್ತಿ. ಇದು ಆಕೆಯ ಮೊದಲ ಚಿತ್ರ. ಫ್ರೆಂಚ್ ಭಾಷೆಯ ಈ ಚಿತ್ರ ಈಗಾಗಲೇ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಬನೇಲ್ ಪಾತ್ರದ ಖಾಡಿ ಮನೆ, ಆಡಮ್ ಪಾತ್ರದ ಮಮದೋ ದಿಯಾಲೋ, ನಟಿಸಿಲ್ಲ ಬದುಕಿದ್ದಾರೆ. ಸೆನೆಗಲ್ಲಿನ ಬೆಟ್ಟ, ಬಯಲು, ಬಿರುಗಾಳಿ, ಜಾಲಿ ಮರಗಳನ್ನು ಯಥಾವತ್ತಾಗಿ ಚಿತ್ರಿಸಿರುವ ಕ್ಯಾಮರಾಮನ್ ಕೆಲಸ ಹಾಗೂ ಎಷ್ಟು ಬೇಕೋ ಅಷ್ಟು ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತೊಂದು ಮಟ್ಟಕ್ಕೊಯ್ದಿದೆ.

ಸೆನೆಗಲ್ಲಿನ ಯಾವುದೋ ಮೂಲೆಯ ಪುಟ್ಟ ಸಮುದಾಯವನ್ನು ಸಮಕಾಲೀನ ವಿಷಯಗಳೊಂದಿಗೆ ಬೆಸೆಯುವ, ಪ್ರಚಂಚದ ಆಗುಹೋಗುಗಳೊಂದಿಗೆ ಸಮೀಕರಿಸಿರುವ ರೀತಿ ಭಿನ್ನವಾಗಿದೆ. ಆ ಕಾರಣಕ್ಕಾಗಿ ಚಿತ್ರವನ್ನು ಮಿಸ್ ಮಾಡದೇ ನೋಡಬೇಕಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X