ನಾವು ಇವಿಎಂಅನ್ನು ನಂಬಬಹುದೆ? ಇವಿಎಂ ಹ್ಯಾಕ್ ಮಾಡಲು ಸಾಧ್ಯವೇ? ಇವೆಲ್ಲ ಹಲವಾರು ವರ್ಷದಿಂದ ಜನರ ನಡುವೆ ಇರುವ ಪ್ರಶ್ನೆಗಳು. ಕೆಲವರು ಇವಿಎಂ ಸುರಕ್ಷಿತವೆಂದು ಹೇಳಿದರೆ, ಇನ್ನು ಕೆಲವರು ಇವಿಎಂ ಹ್ಯಾಕ್ ಮಾಡೋದು ಅತೀ ಸುಲಭ ಎಂದು ಹೇಳುತ್ತಾರೆ. ಅದರಲ್ಲೂ ಬಿಜೆಪಿ ನಾಯಕರಂತು ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ಗೊಂದಲಕ್ಕೆ ದೂಡುತ್ತಾರೆ.
ಬರೀ ಕಾಂಗ್ರೆಸ್, ಕಮ್ಯೂನಿಸ್ಟ್‌ನಂತ ವಿಪಕ್ಷಗಳು ಇವಿಎಂ ವಿರುದ್ಧ ಆರೋಪ ಮಾಡುತ್ತಿಲ್ಲ. ಬಿಜೆಪಿಯೂ ಈ ಹಿಂದೆ ಇವಿಎಂ ಅನ್ನು ವಿರೋಧಿಸಿತ್ತು. ಬಿಜೆಪಿಯ ಸಂಸದ ಎಂ.ಪಿ ನರಸಿಂಹ ರಾವ್ ಅವರ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ (Democracy at Risk) ಎಂಬ ಪುಸ್ತಕದಲ್ಲಿ ಬಿಜೆಪಿ ನಾಯಕ ಇವಿಎಂ ವಿರುದ್ದ ಬರೆದಿದ್ದಾರೆ. ಇದಕ್ಕೆ ಪ್ರಸ್ತಾವನೆಯನ್ನು ಭಾರತ ರತ್ನ ಪಡೆದಿರುವ ಬಿಜೆಪಿ ಮುಖಂಡ ಎಲ್.ಕೆ ಅಡ್ವಾಣಿ ಬರೆದಿದ್ದಾರೆ.
ಈ ಪುಸ್ತಕವನ್ನು 2010ರಲ್ಲಿ ಪ್ರಕಟಿಸಲಾಗಿದೆ. ಆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಈಗ ಬಿಜೆಪಿ ಸರ್ಕಾರವಿದೆ. ತಾನು ವಿರೋಧ ಪಕ್ಷದಲ್ಲಿದ್ದಾಗ ಇವಿಎಂ ವಿರೋಧ ಮಾಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದು ಅದನ್ನು ಸಮರ್ಥಿಸಿಕೊಳ್ಳುತ್ತಿದೆ. ವಿಪಕ್ಷದಲ್ಲಿದ್ದಾಗ ಮೋದಿ ಜಿಎಸ್‌ಟಿಯನ್ನು ವಿರೋಧಿಸಿ, ಈಗ ಅಧಿಕಾರಕ್ಕೆ ಬಂದು ಜಿಎಸ್‌ಟಿ ಜಾರಿ ಮಾಡಿದ್ದಾರಲ್ಲವೇ. ಅದೇ ರೀತಿ…
ಇದೇ ವರ್ಷದ ಫೆಬ್ರವರಿ 2ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ಇವಿಎಂ ವಿರುದ್ಧ ದೊಡ್ಡ ಪ್ರತಿಭಟನೆ ನಡೆದಿದೆ. ಆದರೆ, ಅದರ ಬಗ್ಗೆ ಯಾವುದೇ ಸುದ್ದಿಯೂ ಆಗಿಲ್ಲ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಇವಿಎಂ ಬಗ್ಗೆ ವಿಚಾರಣೆ ನಡೆಯುತ್ತಿದೆ. ಚಂಡೀಗಢ ಚುನಾವಣೆ ಮತ್ತು ಚುನಾವಣಾ ಬಾಂಡ್ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ, ಇವಿಎಂ ಪಾರದರ್ಶಕತೆ ವಿಚಾರದಲ್ಲೂ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಲೋಕಸಭೆ ಚುನಾವಣೆಗೂ ಮುನ್ನ ನೀಡುವ ನಿರೀಕ್ಷೆಯಿದೆ.
ಪೇಪರ್ ಬ್ಯಾಲೆಟ್ ಮತ್ತು ಇವಿಎಂ ನಡುವಿನ ವ್ಯತ್ಯಾಸ
ಈ ಹಿಂದೆ ವೋಟರ್ ಐಡಿ ಪರಿಶೀಲಿಸಿ ಬ್ಯಾಲೆಟ್ ಪೇಪರ್ ನೀಡಲಾಗುತ್ತಿತ್ತು. ಮತದಾರರು ಪೋಲಿಂಗ್ ಬೂತ್‌ಗೆ ಹೋಗಿ ತಾವು ಯಾರಿಗೆ ಮತ ಹಾಕಲು ಬಯಸುವರೋ, ಅವರ ಹೆಸರಿನ ಮುಂದೆ ಸ್ಟ್ಯಾಂಪ್ ಹಾಕಿ ಬಾಕ್ಸ್ ಒಳಗಡೆ ಪೇಪರ್ ಮಡಚಿ ಹಾಕಬೇಕಾಗಿತ್ತು. ಅಲ್ಲಿಂದ ಸ್ಟ್ರಾಂಗ್ ರೂಮ್‌ಗೆ ಬಾಕ್ಸ್ ಹೋಗುತ್ತಿತ್ತು. ಮತ ಎಣಿಕೆ ದಿನ ಅಭ್ಯರ್ಥಿಗಳ ಸಮ್ಮುಖದಲ್ಲೇ ಬಾಕ್ಸ್ ತೆರೆಯಲಾಗುತ್ತಿತ್ತು. ಏನಾದರೂ ಸಮಸ್ಯೆ ಇದ್ದರೆ ಅಧಿಕಾರಿಗಳ ಎದುರೇ ಪರಿಹರಿಸಲಾಗುತ್ತಿತ್ತು.
ಆದರೆ, ಈ ಪ್ರಕ್ರಿಯೆಯಿಂದ ಸಮಸ್ಯೆ ಆಗುತ್ತಿತ್ತು. ಸ್ಟ್ರಾಂಗ್ ರೂಮ್‌ನಲ್ಲಿ ಬಾಕ್ಸ್ ಬದಲಾವಣೆ ಆಗುತ್ತಿತ್ತು, ನಕಲಿ ವೋಟ್ ಹಾಕಾಲಾಗುತ್ತಿತ್ತು, ಈ ಸಮಸ್ಯೆಯೇ ಬೇಡವೆಂದು 1999ರ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು. ಅದಾದ ನಂತರ 2004 ರಿಂದ ಲೋಕ ಸಭಾ ಚುನಾವಣೆಯಲ್ಲಿ ಇವಿಎಂ ಬಳಸಲಾಗುತ್ತಿದೆ.
ಆದರೆ ಆರಂಭದಲ್ಲಿದ್ದ ಇವಿಎಂ ಹ್ಯಾಕ್ ಮಾಡುವುದು ಕಷ್ಟ ಆಗುತ್ತಿತ್ತು. ಯಾಕೆಂದರೆ ಅದರಲ್ಲಿ ರಿಪ್ರೋಗ್ರಾಮೆಬಲ್ ಚಿಪ್‌ಗಳು ಇರುತ್ತಿರಲಿಲ್ಲ. ಆದರೆ 2014ರಿಂದ ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರೇಲ್ ಅಂದ್ರೆ ವಿವಿಪ್ಯಾಟ್ ಆರಂಭಿಸಲಾಯಿತು. ಈಗ ನಾವು ಹೇಗೆ ವೋಟ್ ಹಾಕ್ತಿವೋ ಹಾಗೆ. ಇದರಲ್ಲಿ ನಾವು ಯಾರಿಗೆ ವೋಟ್ ಹಾಕಿದ್ದೀವಿ ಎಂದು ಖಚಿತಪಡಿಸಲು ಒಂದು ಚೀಟಿ ನಮಗೆ 7 ಸೆಂಕೆಂಟ್‌ಗಳ ಸಮಯ ಕಾಣಿಸುತ್ತದೆ. ಬಳಿಕ ಬಾಕ್ಸ್ ಒಳಗೆ ತಾನಾಗೆ ಬೀಳುತ್ತದೆ.
ಆದರೆ ಇಲ್ಲಿರುವ ಪ್ರಶ್ನೆ ಪ್ರಶ್ನೆ ಈ ಚೀಟಿ ನಮ್ಮ ಕೈಗೆ ಯಾಕೆ ಸಿಗಲ್ಲ? 7 ಸೆಂಕೆಂಡು ಮಾತ್ರ ಯಾಕೆ ನಮಗೆ ಈ ಚೀಟಿ ಕಾಣುತ್ತದೆ? ಅಷ್ಟಕ್ಕೂ ಈ ಚೀಟಿ ಡಬ್ಬದೊಳಗೆ ಬೀಳುತ್ತಾ? ಎಂಬುವುದಾಗಿದೆ. ಈ ಬಗ್ಗೆ ಚರ್ಚೆ ನಡೆಯಲೇಬೇಕಾಗಿದೆ. ಸ್ಪಷ್ಟನೆಯನ್ನು ಚುನಾವಣಾ ಆಯೋಗ ನೀಡಬೇಕಾಗಿದೆ.
ಇವಿಎಂನಲ್ಲಿ ವೋಟಿಂಗ್ ಮುಗಿದ ಬಳಿಕ ಸಾಮಾನ್ಯವಾಗಿಯೇ ಎಲ್ಲ ಪ್ರಕ್ರಿಯೆ ನಡೆಯುತ್ತದೆ. ಆದರೆ ಮತ ಎಣಿಕೆ ಮಾತ್ರ ಮಿಷನ್ ಮಾಡುತ್ತದೆ. ಯಾರಿಗೆ ಎಷ್ಟು ವೋಟ್ ಬಿದ್ದಿದೆ ಎನ್ನುವುದನ್ನು ಇವಿಎಂ ಮಿಷನ್‌ನಲ್ಲೇ ನೋಡಲಾಗುತ್ತದೆ. ಇಲ್ಲಿ ಒಟ್ಟು ಪೋಲಿಂಗ್ ಮತ್ತು ಮತ ಎಣಿಕೆ ಲೆಕ್ಕಾಚಾರದಲ್ಲಿ ವ್ಯತ್ಯಾಸವಾದ್ದಲ್ಲಿ ಮಾತ್ರ ಮತಚೀಟಿಯ ಎಣಿಕೆ ಮಾಡಲಾಗುತ್ತದೆ. ಇನ್ನು ಅಭ್ಯರ್ಥಿಗಳಿಗೆ ಶಂಕೆ ಇದ್ದು ಮರು ಎಣಿಕೆ ಮಾಡುವ ಬೇಡಿಕೆ ಇದ್ದರೆ ಅರ್ಜಿ ಹಾಕಬೇಕು. ಇಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆಯೋ, ತಿರಸ್ಕರಿಸಲಾಗುತ್ತದೆಯೋ ಎಂಬುವುದು ಬೇರೆಯೇ ವಿಚಾರ.
ವಂಚನೆ ತಡೆಗೆ ಆಯೋಗದ ತಂತ್ರ
ಚುನಾವಣೆಯಲ್ಲಿ ಆಗುವ ವಂಚನೆ ಕಡಿಮೆ ಮಾಡುವುದಕ್ಕೆ ಬೇರೆ ಬೇರೆ ತಂತ್ರಗಳನ್ನು ಚುನಾವಣಾ ಆಯೋಗ ಪಾಲಿಸುತ್ತದೆ. ಇವಿಎಂ ತಯಾರಿಯಲ್ಲಿ ಯಾವುದೇ ರಾಜಕೀಯ ಪ್ರಭಾವವಿರಲ್ಲ, ಎಲ್ಲ ಪರೀಕ್ಷೆ ಮಾಡಲಾಗುತ್ತದೆ, ಪ್ರತಿ ಮಿಷನ್‌ನಲ್ಲೂ ಜಿಪಿಎಸ್ ಚಿಪ್ ಇರುತ್ತದೆ ಎಂದು ಚುನಾವಣಾ ಆಯೋಗ ಹೇಳುತ್ತದೆ. ಚುನಾವಣೆಗೂ ಮುನ್ನ ಬೂತ್‌ನಲ್ಲಿ ಇವಿಎಂ ಅದಲು ಬದಲು ಮಾಡಲಾಗುತ್ತದೆ. ಯಾವುದೇ ಇವಿಎಂಗಳು ಕನೆಕ್ಟ್ ಆಗಿರಲ್ಲ, ಇದರಿಂದಾಗಿ ಹ್ಯಾಕ್ ಮಾಡುವವರು ಪ್ರತಿ ಇವಿಎಂ ಹ್ಯಾಕ್ ಮಾಡಬೇಕಾಗುತ್ತದೆ ಅಂತ ಹೇಳಲಾಗುತ್ತದೆ. ಇಷ್ಟೆಲ್ಲ ಸುರಕ್ಷತೆ ಇರುವಾಗ ಇವಿಎಂ ಹ್ಯಾಕ್ ಮಾಡುವುದು ಅಸಾಧ್ಯ ಎನ್ನುವುದು ಚುನಾವಣಾ ಆಯೋಗದ ವಾದ.
ಆದರೆ ಈ ಅಸಾಧ್ಯ ಅನ್ನುವುದು ಒಂದು ಸಂಶಯ ಹುಟ್ಟಿಸುತ್ತದೆ. ಏಕೆಂದರೆ ನಮ್ಮದು ಕೆಲವೇ ದಿನ, ಕ್ಷಣಗಳಲ್ಲಿ ಹ್ಯಾಕ್ ಮಾಡುವ ಎಷ್ಟೋ ಘಟನೆಗಳು ನಡೆದಿದೆ. ಅದಕ್ಕೆ ಪ್ರತಿ ದಿನ ನಡೆಯುವ ಸೈಬರ್ ವಂಚನೆ, ಆಧಾರ್ ಹ್ಯಾಕ್ ಉದಾಹರಣೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ವಂಚನೆ ಆಗಿತ್ತು, ಚುನಾವಣಾ ಆಯೋಗದ ಅಧಿಕಾರಿಯೇ ವಂಚನೆ ಮಾಡಿದ್ದರು. ಹಾಗಿರುವಾಗ ಆಯೋಗ ಹೇಗೆ ಇವಿಎಂನಲ್ಲಿ ಯಾವುದೇ ವಂಚನೆ ಇಲ್ಲ ಎಂದು ಹೇಳಲು ಸಾಧ್ಯ? ಅಷ್ಟಕ್ಕೂ ಇವಿಎಂ ಅಷ್ಟು ಸುರಕ್ಷಿತವಾಗಿದ್ದರೆ ಚುನಾವಣಾ ಆಯೋಗ ಸರಿಯಾದ ಉತ್ತರ ಯಾಕೆ ನೀಡಲ್ಲ, ಚುನಾವಣಾ ಆಯೋಗ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಬೇಕಾಗುತ್ತದೆ.
ಇವಿಎಂ ತಯಾರಿಕರು ನಂಬಿಕಸ್ಥರೇ?
ಈ ಸಮಸ್ಯೆ ಕಾಂಗ್ರೆಸ್ ವರ್ಸಸ್ ಬಿಜೆಪಿಯದ್ದೇನಲ್ಲ. ಯಾಕೆಂದರೆ ಬಿಜೆಪಿ ವಿಪಕ್ಷದಲ್ಲಿದಾಗಲೂ ಇವಿಎಂ ಅನ್ನು ವಿರೋಧಿಸಿದೆ. ಈಗ ಕಾಂಗ್ರೆಸ್ ವಿರೋಧಿಸುತ್ತಿದೆ. ಆದರೆ ಇಲ್ಲಿ ಸಮಸ್ಯೆ ಪಕ್ಷಗಳದ್ದಲ್ಲ, ಸಮಸ್ಯೆ ದೇಶದ ಪ್ರಜಾಪ್ರಭುತ್ವದ್ದಾಗಿದೆ. ಆದರೆ ಇಲ್ಲಿ ಪ್ರಶ್ನೆ ಬರುವುದು ಇವಿಎಂ ಮೇಲೆ ಅಲ್ಲ, ಇವಿಎಂ ತಯಾರಿಕರು ನಂಬಿಕಸ್ಥರೇ ಎನ್ನುವುದು. ದೇಶದಲ್ಲಿ ಈ ಮಿಷನ್ ತಯಾರಿಸುವುದು ಬಿಇಎಲ್ ಮತ್ತು ಇಸಿಐಎಲ್ ಎಂಬ ಎರಡು ಕಂಪನಿಗಳು. ಇದನ್ನು ಬಿಟ್ಟು ಇವಿಎಂ ತಯಾರಿಸುವುದಕ್ಕೆ ಯಾವುದೇ ಸಂಸ್ಥೆಗೂ ಪರವಾನಗಿ ಇಲ್ಲ.
ಆದರೆ ಇವಿಎಂ ತಯಾರಿಸುವ ಸಂಸ್ಥೆ ಬಿಇಎಲ್ ಬೋರ್ಡ್ ಮೆಂಬರ್ ಮಾತ್ರ ಬಿಜೆಪಿ ಪಕ್ಷದ ಬೆಂಬಲಿಗರು. ನಾಲ್ಕು ಬೋರ್ಡ್ ಮೆಂಬರ್‌ಗಳು ಬಹಿರಂಗವಾಗೇ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಈ ಹಿಂದೆ ಈ ನಾಲ್ಕು ಮಂದಿ ಬಿಜೆಪಿ ಪದಾಧಿಕಾರಿಗಳಾಗಿದ್ದರು. ಹಾಗಿರುವಾಗ ಹೇಗೆ ನಾವು ಈ ಇವಿಎಂ ಅನ್ನು ನಂಬುವುದು? ಈ ಬಗ್ಗೆ ಯಾಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಪ್ರಶ್ನೆ ಮೂಡುತ್ತದೆ.
ಇನ್ನೊಂದು ಪ್ರಶ್ನೆ ಬರುವುದು ಚುನಾವಣಾ ಆಯೋಗ ಹೇಳುವ ಈ ಎಲ್ಲ ಪರೀಕ್ಷೆಗಳು ನಂಬಿಕಾರ್ಹವೇ ಅನ್ನುವುದು. ಹಾಗಾದರೆ ಈ ಟೆಸ್ಟಿಂಗ್ ಹೇಗೆ ನಡೆಯುತ್ತದೆ ಎಂದು ತಿಳಿಯೋಣ.
ಟೆಸ್ಟಿಂಗ್ ಹೇಗೆ ನಡೆಯುತ್ತೆ, ಯಾರು ನಡೆಸ್ತಾರೆ?
ಮೊದಲ ಟೆಸ್ಟಿಂಗ್ standardization testing and quality certification directorate ಅಥವಾ ಎಸ್‌ಟಿಕ್ಯೂಸಿ ಟೆಸ್ಟಿಂಗ್ ಆಗಿದೆ. ಇದು ಐಟಿ ಮತ್ತು ಎಲೆಕ್ಟ್ರಾನಿಕ್ ಸಚಿವಾಲಯದ ಒಂದು ನಿರ್ದೇಶನಾಲಯ ಆಗಿದೆ. ಅಂದರೆ ಇದು ಸರ್ಕಾರಿ ಏಜೆನ್ಸಿ ಆಗಿದೆ. ಇವಿಎಂ ಮಾಡುವುದು ಕೇಂದ್ರದ ಸಂಸ್ಥೆ, ಟೆಸ್ಟಿಂಗ್ ಮಾಡುವುದು ಕೇಂದ್ರದ ಏಜೆನ್ಸಿ ಆಗಿರುವಾಗ ಇದು ಸ್ವತಂತ್ರ ತನಿಖೆ ಹೇಗೆ ಆಗುತ್ತದೆ?
ಎರಡನೇ ಟೆಸ್ಟಿಂಗ್ ಅನ್ನು ಇಸಿಯ ತಾಂತ್ರಿಕ ಸಂಸ್ಥೆ ಮಾಡುತ್ತದೆ. ಈ ಕಮೀಟಿಯಲ್ಲಿ ನಾಲ್ಕು ತನಿಖಾ ತಜ್ಞರು ಇದ್ದಾರೆ. ಆದರೆ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ನಾಯಕ್ ತನಿಖೆ ನಡೆಸಿದಾಗ ಈ ವಿವಿಪ್ಯಾಟ್ ಪೇಟೆಂಟ್ ದಾಖಲೆಯಲ್ಲಿ ಇವರು ಸಂಶೋಧಕರ ಪಟ್ಟಿಯಲ್ಲಿ ಕಾಣುತ್ತಾರೆ. ಅಂದರೆ ಯಾರು ವಿವಿಪ್ಯಾಟ್ ಅನ್ನು ತಯಾರಿಸಿದ್ದಾರೋ ಅವರೇ ಈ ವಿವಿಪ್ಯಾಟ್ ಸರಿಯಾಗಿದೆಯೇ ಇಲ್ಲವೇ ಎಂದು ಟೆಸ್ಟ್ ಮಾಡುವವರು. ಅಂದರೆ ಪರೀಕ್ಷೆ ಪತ್ರಿಕೆ ತಯಾರಿ ಮಾಡಿರುವವರು ನಾವೇ, ಉತ್ತರ ಬರೆಯುವವರು ನಾವೇ!
ಇವಿಎಂ ಸೋರ್ಸ್ ಕೋಡ್ ಬಹಿರಂಗ ಮಾಡಿ
ಇನ್ನು ಈ ಇವಿಎಂನ ಸೋರ್ಸ್ ಕೋಡ್ ಯಾರಿಗೂ ತಿಳಿದಿಲ್ಲ. ಜನರಿಂದ ಇದನ್ನು ಮುಚ್ಚಿಡಲಾಗುತ್ತಿದೆ. ಅಂದರೆ ನಾವು ಯಾರಿಗೆ ವೋಟ್ ಹಾಕಿದರೆ, ಏನ್ ಕೋಡ್ ಆಕ್ಟಿವೇಟ್ ಆಗುತ್ತದೆ ಅನ್ನುವುದು ಯಾರಿಗೂ ತಿಳಿದಿಲ್ಲ. ಈ ಕೋಡ್ ಜೆನರೇಟ್ ಮಾಡುವುದು ಪುನಃ ಸರ್ಕಾರದ ಅಧಿಕಾರಿಗಳು. ವಿಶ್ವದಲ್ಲೀಗ ಇವಿಎಂ ಬಳಸುವ ದೇಶಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಕೆಲವು ದೇಶಗಳು ಇವಿಎಂ ಬಳಸಿ ಮತ್ತೆ ಹಳೆ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಇವಿಎಂ ಬಳಸಲಾಗುತ್ತದೆ, ಆದರೆ ಅಲ್ಲಿ ಈ ಸೋರ್ಸ್ ಕೋಡ್ ಅನ್ನು ಬಹಿರಂಗವಾಗಿ ತಿಳಿಸಲಾಗುತ್ತದೆ. ಏನಾದರೂ ಸಮಸ್ಯೆ ಇದ್ದರೆ ಸರಿ ಮಾಡಿಕೊಳ್ಳುವ ಉದ್ದೇಶ ಇದರದ್ದಾಗಿದೆ.
ಈ ಹಿಂದೆ ಆಧಾರ್ ಡೇಟಾ ಹ್ಯಾಕ್ ಮಾಡುವುದು ಸಾಧ್ಯವಿಲ್ಲ ಕೇಂದ್ರ ಹೇಳಿತ್ತು. ಆದರೆ ಈಗ ಹ್ಯಾಕ್ ಮಾಡಲಾಗುತ್ತಿದೆ. ಒಂದು ಕೋಡ್ ಬರೀ ಸರ್ಕಾರಿ ಅಧಿಕಾರಿಗಳ ಬಳಿ ಇರುತ್ತದೆ ಎಂದಾದಾಗ ಅವರ ಬಾಸ್ ಆದ ಕೇಂದ್ರ ಸಚಿವರಿಗೆ ತಿಳಿಯುವುದಕ್ಕೆ ಯಾವ ಕಷ್ಟವಿದೆ. ಇದು ಬರೀ ನಮ್ಮ ಆರೋಪ ಅಲ್ಲ, ಬಿಜೆಪಿ ಸಂಸದ ತನ್ನ ಪುಸ್ತಕದಲ್ಲೇ ಈ ಆರೋಪ ಮಾಡಿದ್ದರು.
20 ಲಕ್ಷ ಇವಿಎಂ ಎಲ್ಲಿ ಹೋಯ್ತು?
ಸಾಫ್ಟ್‌ವೇರ್‌ನಲ್ಲಿ ಏನೂ ತೊಂದರೆ ಇಲ್ಲ ಅಂದುಕೊಳ್ಳೋಣ, ಹಾಗಿದ್ರೆ ಹಾರ್ಡ್‌ವೇರ್‌ನ ಪ್ರಶ್ನೆ ಇಲ್ಲಿ ಬರುತ್ತದೆ. ಬಿಇಎಲ್ ನಾವು 20 ಲಕ್ಷ ಇವಿಎಂ ಡೆಲಿವರಿ ಮಾಡಿದ್ದೇವೆ ಎಂದು ಹೇಳಿದೆ. ಇಸಿಐಎಲ್ ಕೂಡಾ ನಾವು 20 ಲಕ್ಷ ಇವಿಎಂ ನೀಡಿದ್ದೇವೆ ಎಂದು ಹೇಳಿದೆ. ಆದರೆ ಆರ್‌ಟಿಐ ಕಾರ್ಯಕರ್ತ ಚುನಾವಣಾ ಆಯೋಗದ ಬಳಿ ಇದೇ ಪ್ರಶ್ನೆ ಕೇಳಿದಾಗ ಉತ್ತರ ಬೇರೇಯೇ! ಇಸಿ ಪ್ರಕಾರ ಇಸಿಐನಿಂದ ಹತ್ತು ಲಕ್ಷ ಮತ್ತು ಬಿಇಎಲ್‌ನಿಂದ ಹತ್ತು ಲಕ್ಷ ಇವಿಎಂ ಪಡೆಯಲಾಗಿದೆ. ಅಂದರೆ 20 ಲಕ್ಷ ಇವಿಎಂ ನಾಪತ್ತೆ! ಅಷ್ಟಕ್ಕೂ ಈ ಇವಿಎಂಗಳು ಎಲ್ಲಿ ಹೋಗಿದೆ ಎಂದು ಯಾರಿಗೂ ತಿಳಿದಿಲ್ಲ.
ಈ ಇವಿಎಂ ಯಾವ ಸಂಸದರ ಗ್ಯಾರೇಜ್ ತಲುಪಿದೆ, ಯಾವ ಕ್ರಿಮಿನಲ್‌ಗೆ ಸಿಕ್ಕಿದೆ, ಅಲ್ಲ ಸ್ಪಷ್ಟನೆ ನೀಡುವುದರಲ್ಲಿ ತಪ್ಪಾಗಿದೆಯೇ ಅನ್ನುವುದಕ್ಕೆ ಇಸಿ ಯಾವುದೇ ಉತ್ತರ ಮಾತ್ರ ನೀಡಿಲ್ಲ. ಬರೀ ನಮ್ಮ ಸಿಸ್ಟಮ್ ಸರಿಯಾಗಿದೆ, ಯಾವುದೇ ತೊಂದರೆ ಇಲ್ಲ, ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ. ಇನ್ನು ಇವಿಎಂ ಸಮೀಪದಲ್ಲಿದ್ದರೆ ಸಾಕು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಸಿಟಿಷನ್ ಕಮಿಷನ್ ಆಫ್ ಎಲೆಕ್ಷನ್ ಹೇಳಿದೆ.
2019ರ ಚುನಾವಣೆ ಫಲಿತಾಂಶದ ಸಮಸ್ಯೆ
ನಮ್ಮ ಎಲ್ಲ ಇವಿಎಂಗಳು ಪರಸ್ಪರ ಕನೆಕ್ಟ್ ಆಗಿಲ್ಲ. ಹಾಗಾಗಿ ಒಂದೇ ಸಮಯದಲ್ಲಿ ಹಲವು ಇವಿಎಂ ಹ್ಯಾಕ್ ಸಾಧ್ಯವಿಲ್ಲ ಅಂತ ಚುನಾವಣಾ ಆಯೋಗ ಹೇಳುತ್ತದೆ. ಆದರೆ ಒಂದು ಹ್ಯಾಕ್ ಮಾಡಿದರೂ ಅದು ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಖಂಡಿತ ಅಲ್ವ?. ಇದಕ್ಕೆ ಸ್ಪಷ್ಟ ಉದಾಹರಣೆ 2019ರ ಚುನಾವಣೆ ಫಲಿತಾಂಶ. ಇದರಲ್ಲಿ ಒಟ್ಟು ಹಾಕಲಾದ ಮತ, ಒಟ್ಟು ಎಣಿಕೆಯಾದ ಮತದ ನಡುವೆ ವ್ಯತ್ಯಾಸವಿತ್ತು. 373 ಕ್ಷೇತ್ರದಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಕೆಲವು ಕಡೆಗಳಲ್ಲಿ 10 ಸಾವಿರಕ್ಕೂ ಅಧಿಕ ಮತಗಳ ವ್ಯತ್ಯಾಸ ಕಂಡುಬಂದಿದೆ. ಇದೇನು ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆ ಅಲ್ಲ.
ಇದಕ್ಕೆ ಹ್ಯಾಕ್, ತಾಂತ್ರಿಕ ಸಮಸ್ಯೆ ಇತರೆ ಕಾರಣ ಆಗಿರಬಹುದು. ಆದರೆ ಚುನಾವಣಾ ಆಯೋಗ ಒಂದು ಸ್ಪಷ್ಟಣೆಯನ್ನು ನೀಡಬೇಕಿತ್ತು, ತನಿಖೆ ನಡೆಯಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನೆ ಎತ್ತಿದಾಗ ಚುನಾವಣಾ ಆಯೋಗ ವೆಬ್‌ಸೈಟ್‌ನಿಂದ ಡೇಟಾವನ್ನೇ ತೆಗೆದುಹಾಕಿತ್ತು. ಇಲ್ಲಿ ನಾವು ಚುನಾವಣಾ ಆಯೋಗವನ್ನು ಪ್ರಶ್ನಿಸಲೇಬೇಕಾಗಿದೆ, ಆಯೋಗವು ಮೌನ ಮುರಿಯಬೇಕು.
ಚುನಾವಣಾ ಆಯೋಗದ ಅಧಿಕಾರಿಯೇ ಹ್ಯಾಕ್!
ಸರ್ಕಾರ ಚುನಾವಣಾ ಆಯೋಗದ ಅಧಿಕಾರಿಯನ್ನೇ ಹ್ಯಾಕ್ ಮಾಡಿದೆ. ಈ ಹಿಂದೆ ಚುನಾವಣೆಯಲ್ಲಿ ಮೂರು ಜನರು ಸೇರಿ ಆಯೋಗ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಪ್ರಧಾನಿ, ವಿಪಕ್ಷ ನಾಯಕ, ಸರ್ಕಾರದ ಮುಖ್ಯ ನ್ಯಾಯಾಧೀಶರು ಈ ಆಯೋಗದ ಅಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಬಿಜೆಪಿ ಒಂದು ಕಾಯ್ದೆ ಜಾರಿ ಮಾಡಿದೆ, ಇದರಿಂದಾಗಿ ಮುಖ್ಯ ನ್ಯಾಯಾಧೀಶರನ್ನು ಪ್ಯಾನೆಲ್‌ನಿಂದ ಹೊರಗಿಡಲಾಗಿದೆ, ಈಗ ವಿಪಕ್ಷ, ಪಿಎಂ ಮತ್ತು ಪ್ರಧಾನಿಗೆ ಬೇಕಾದ ಒಬ್ಬ ಕೇಂದ್ರ ಸಚಿವ ಈ ಪ್ಯಾನೆಲ್‌ನಲ್ಲಿರುತ್ತಾರೆ. ಅಂದರೆ ಬಿಜೆಪಿ ಸರ್ಕಾರಕ್ಕೆ ಯಾರು ಬೇಕೋ ಅವರು ಚುನಾವಣಾ ಆಯೋಗದಲ್ಲಿ ಇರುತ್ತಾರೆ.
ಹಾಗಾದ್ರೆ ಪರಿಹಾರವೇನು?
ಹಾಗಾದರೆ ನೀವು ಪರಿಹಾರವೇನು ಎಂದು ಕೇಳಬಹುದು. ಅದಕ್ಕೆ ಅತೀ ಸರಳವಾದ ಉತ್ತರವಿದೆ, ಚುನಾವಣಾ ಆಯೋಗವು ಮೊದಲನೆಯದಾಗಿ ಬಿಇಎಲ್‌ನಿಂದ ಬಿಜೆಪಿ ಬೆಂಬಲಿಗರನ್ನು ತೆಗೆದುಹಾಕಬೇಕು. ಟೆಸ್ಟ್ ಮಾಡಲು ಸಹಾಯವಾಗಲು ಇವಿಎಂನ ಸೋರ್ಸ್ ಕೋಡ್ ಅನ್ನು ಬಹಿರಂಗಪಡಿಸಬೇಕು. ಹ್ಯಾಕಾಥಾನ್‌ಗಳನ್ನು ಮಾಡಬೇಕು. ಎಲ್ಲ ಕಡೆ ಸಿಸಿಟಿವಿ ಇರಬೇಕು. ಇದಕ್ಕೆಲ್ಲ ಅಧಿಕ ಸಮಯ ಬೇಕಾಗುವುದಾದರೆ ವಿವಿಪ್ಯಾಟ್ ಸ್ಲಿಪ್ ಅನ್ನು ಸರಿಯಾಗಿ ಬಳಸುವಂತೆ ಆಗಬೇಕು. ವೋಟರ್‌ಗಳ ಕೈಗೆ ಚೀಟಿ ಸಿಗಬೇಕು, ವೋಟರ್‌ಗಳು ಖಚಿತಪಡಿಸಿಕೊಳ್ಳಲು ಸಾಧ್ಯವಾಗಬೇಕು ಎನ್ನುವ ಬೇಡಿಕೆಯಿದೆ. ಈಗ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿಗಾಗಿ ನಾವೆಲ್ಲರೂ ಕಾಯಬೇಕಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.