ಚುನಾವಣೆ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಂದರ್ಭೋಚಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸಲಹೆ ನೀಡಿದರು.
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ (ಮಾ.4) ನಡೆದ ಲೋಕಸಭಾ ಚುನಾವಣೆ ಪೂರ್ವ ಸಿದ್ದತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳು ಬರುವುದರಿಂದ ಮುಂಬರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಅಧಿಕಾರಿಗಳು ಮತ್ತು ಕೋಲಾರ ಜಿಲ್ಲೆಯ ಅಧಿಕಾರಿಗಳು ಪರಸ್ಪರ ಸಹಕಾರ, ಸಮನ್ವಯತೆಯೊಂದಿಗೆ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು” ಎಂದರು.
ಪ್ರತೀ ಚುನಾವಣೆಗೂ ಚುನಾವಣಾ ಕರ್ತವ್ಯ, ನೀತಿ, ನಿಯಮ, ಸುಧಾರಣಾ ಕ್ರಮಗಳನ್ನರಿತು ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯನಿರ್ವಹಿಸಬೇಕು ಎಂದರು.
ಯಾವಾಗ ಬೇಕಾದರೂ ಚುನಾವಣೆ ನೀತಿ ಸಂಹಿತೆ ಘೋಷಣೆ ಆಗಬಹುದು, ನೀತಿ ಸಂಹಿತೆ ಆರಂಭದಿಂದ ಕೊನೆಯವರೆಗೆ ಚಿಂತಾಮಣಿ-ಶಿಡ್ಲಘಟ್ಟ ಕ್ಷೇತ್ರದಲ್ಲಿ ಅಧಿಕಾರಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಆಗಿರುವ, ಮುಂದೆ ನಿಯೋಜನೆ ಆಗುವ ಅಧಿಕಾರಿಗಳು, ಸಿಬ್ಬಂದಿ ತಮ್ಮ ಚಲನವಲನದ ಮೇಲೆ ತಾವೇ ನಿಗಾ ಇಡಬೇಕು. ಚುನಾವಣಾ ನೀತಿ ಸಂಹಿತೆ ಘೋಷಣೆ ಆದ ಮೇಲೆ ತಾವು ಯಾವುದೇ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಗ್ರೂಪ್‌ಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿದ್ದರೆ ಅದರಿಂದ ಕೂಡಲೆ ಹೊರಬರಬೇಕು. ಆಡಳಿತಾತ್ಮಕ, ಕೌಟುಂಬಿಕ ಗ್ರೂಪ್ ಗಳಿದ್ದರೆ ಅಡ್ಡಿಯಿಲ್ಲ. ಆದರೆ ರಾಜಕೀಯ ಪ್ರೇರಿತ ತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ತಟಸ್ಥ ದೋರಣೆ ಅನುಸರಿಸಬೇಕು ಎಂದು ಎಚ್ಚರಿಸಿದರು.
ಚುನಾವಣಾ ಆಯೋಗ ಈ ಹಿಂದಿನಿಂದ ಚುನಾವಣಾ ಕಾರ್ಯಗಳನ್ನು, ಚುನಾವಣೆಗಳನ್ನು ಸಮರ್ಪಕವಾಗಿ ಪರಿಣಾಮಕಾರಿಯಾಗಿ ಕಾಲಕಾಲಕ್ಕೆ ನಡೆಸುತ್ತಾ ಬಂದಿದೆ. ಆಯೋಗವು ಚುನಾವಣೆಯಿಂದ ಚುನಾವಣೆಗೆ ಅತಿಯಾದ ಪಾರದರ್ಶಕತೆಯನ್ನು ಬಯಸುತ್ತದೆ. ಆದ್ದರಿಂದ ಕಾಲೋಚಿತವಾಗಿ ಆಯೋಗವು ನೀಡುವ ನಿರ್ದೇಶನಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾನತಾಡಿ, ಈ ಎರಡು ಕ್ಷೇತ್ರಗಳಲ್ಲಿ ಒಟ್ಟು 4,30,422 ಮತದಾರರಿದ್ದು, ಈ ಪೈಕಿ 2,12,955 ಪುರುಷರು, 2,17,418 ಮಹಿಳೆಯರು, 49 ತೃತೀಯ ಲಿಂಗಿಗಳು ಇದ್ದಾರೆ. ಆಯೋಗದ ನಿರ್ದೇನದಂತೆ ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಭಾರಿ 9,464 ಯುವ ಮತದಾರರು ಈ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್‌ಪಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿಗಳಾದ ಡಾ.ಎನ್.ತಿಪ್ಪೇಸ್ವಾಮಿ, ಡಾ.ಶಂಕರ್ ವಣಿಕ್ಯಾಳ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಸೇರಿದಂತೆ ಚಿಂತಾಮಣಿ-ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಅಧಿಕಾರಿಗಳು ಇದ್ದರು.