ದಾವಣಗೆರೆ ಜಿಲ್ಲೆಯ ಹೆಬ್ಬಾಳು ಗ್ರಾಮದ ವಿರಕ್ತ ಮಠದ ಆವರಣದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಪ್ರಾರಂಭವಾಗಿದ್ದು, ಇತ್ತ ಕಡೆ ನಗರದಲ್ಲಿ ಕರ್ನಾಟಕ ವೇದಿಕೆ ಕಾರ್ಯಕರ್ತರು ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಆಂಗ್ಲ ಭಾಷೆಯ ನಾಮಫಲಕ ಹಾಗೂ ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಆಗಹಿಸಿ ಪ್ರತಿಭಟನೆಗಿಳಿದಿದ್ದರು.
ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ ನೇತೃತ್ವದಲ್ಲಿ ಪಾಲಿಕೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು, ಈ ವೇಳೆ ಆಂಗ್ಲ ಭಾಷೆಯ ನಾಮಫಲಕಗಳ ತೆರವಿಗೆ ಆಗ್ರಹಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ಕಳೆದ 25ವರ್ಷಗಳಿಂದ ನಾಡು, ನುಡಿ, ಭಾಷೆ, ಸಂಸ್ಕೃತಿ, ಸಂಸ್ಕಾರ ಕನ್ನಡಿಗರ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ತನ್ನದೇ ಆದಂತ ಹೋರಾಟ ಮಾಡುತ್ತಾ ಬಂದಿದೆ ಎಂದರು.
ಇತ್ತೀಚಿಗೆ ಮಹಾನಗರ ಪಾಲಿಕೆ ಸಭೆಯಲ್ಲಿ ಕರವೇ ಎಚ್ಚರಿಕೆ ನೀಡಿ, ಸಾರ್ವಜನಿಕರಿಗೆ ಗುಲಾಬಿ ಹೂವು ಕೊಟ್ಟು ಕನ್ನಡದ ಜಾಗೃತಿ ಮೂಡಿಸುವಂತಹ ಕೆಲಸ ಮಾಡಿತ್ತು. ಆದರೂ, ಕಾಟಾಚಾರದ ಕನ್ನಡಿಗರು ಆಂಗ್ಲ ನಾಮ ಫಲಕಗಳನ್ನು ಇಟ್ಟುಕೊಂಡಿದ್ದರು. ಪಾಲಿಕೆಗೆ ಒತ್ತಡ ತಂದಾಗ ನಗರದಲ್ಲಿ ಸುಮಾರು ಶೇ.60ರಷ್ಟು ನಾಮಫಲಕಗಳಿಗೆ ಮಸಿ ಬಳಿದು ಕಿತ್ತು ಹಾಕಲಾಗಿತ್ತು. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮಾಡಿ ಸರ್ಕಾರ 60:40 ಅನುಪಾತದಲ್ಲಿ, ಅಂದರೆ ಅಂಗಡಿಯ ಮಾಲೀಕರು ಅಥವಾ ಸಂಸ್ಥೆಯ ಮಾಲೀಕರು ಅವರು ಹಾಕುವ ಜೋಡಿ ಬೋರ್ಡಿನ ಅನುಸಾರ ಶೇ.60ರಷ್ಟು ದೊಡ್ಡದಾಗಿ ಕನ್ನಡದ ನಾಮಫಲಕಗಳನ್ನು ಹಾಕಬೇಕೆಂದು ಆದೇಶಿಸಿದೆ ಎಂದು ಹೇಳಿದ ಅವರು,
ಪಾಲಿಕೆ ಆಯುಕ್ತರು ನಾಮಫಲಕ ವಿಚಾರವಾಗಿ ಉಸ್ತುವಾರಿಯನ್ನಾಗಿ ಪಾಲಿಕೆಯ ವೈದ್ಯಾಧಿಕಾರಿ ಡಾ. ಚಂದ್ರಮೋಹನ್ ಅವರನ್ನು ನೇಮಿಸಿತ್ತು ನಾವು ಅವರಿಗೆ ಸುಮಾರು 300ಜಾಹೀರಾತು ಫಲಕ ಮತ್ತು ಅಂಗಡಿ-ಮುಗ್ಗಟ್ಟು, ಶಾಲಾ-ಕಾಲೇಜು, ಪೆಟ್ರೋಲ್ ಬಂಕ್‌ಗಳ 20 ಆಂಗ್ಲಭಾಷೆಯ ಜಾಹೀರಾತು ಫಲಕಗಳನ್ನು ಛಾಯಾ ಚಿತ್ರಗಳನ್ನು ಕಳುಹಿಸಿದ್ದೆವು. ಆದರೆ, ಅವರು ಇತ್ತೀಚೆಗೆ ಕಾಟಾಚಾರಕ್ಕೆ ನೋಟಿಸ್ ಕೊಟ್ಟು ಸುಮ್ಮನೆ ಕೂತಿರುವುದು ನೋಡಿದರೆ ಅವರ ಜೊತೆ ಶಾಮೀಲಾಗಿದ್ದಾರೆ ಎಂದು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಜಿಲ್ಲೆಗಳಲ್ಲಿ ಆಯುಕ್ತರು ಮತ್ತು ಸಿಬ್ಬಂದಿ ವರ್ಗದವರು ಆಂಗ್ಲ ನಾಮಫಲಕಗಳಿರುವ ಅಂಗಡಿಗಳಿಗೆ ಬೀಗ ಹಾಕಿಸಿ, ಆಂಗ್ಲ ನಾಮಫಲಕಗಳನ್ನು ಕಿತ್ತು ಹಾಕುವ ಕೆಲಸ ಮಾಡಿದೆ. ಆದರೆ, ದಾವಣಗೆರೆ ಮಹಾನಗರ ಪಾಲಿಕೆ ಮೌನ ವಹಿಸಿರುವುದನ್ನು ಕರವೇ ಸಹಿಸುವುದಿಲ್ಲ. ತಕ್ಷಣ ಆಂಗ್ಲ ನಾಮಫಲಕಗಳನ್ನು ಹಾಗೂ ಜಾಹೀರಾತು ಫಲಕಗಳನ್ನು ಕಿತ್ತು ಹಾಕುವಂತೆ ಕರವೇ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಸರ್ಕಾರ ಮಾರ್ಚ್ 13ರ ಒಳಗಾಗಿ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂದು ಆದೇಶಿಸಿದೆ. ಆದರೆ, ಮಹಾನಗರ ಪಾಲಿಕೆ ಮಹಾಪೌರರಾಗಲಿ, ಆಯುಕ್ತರಾಗಲಿ ಯಾವುದೇ ಸಭೆ ಕರೆದಿಲ್ಲ. ತಕ್ಷಣ ಸಭೆ ನಡೆಸಿ ಪಾಲಿಕೆ ಆಯುಕ್ತರು ಪ್ಲೆಕ್ ಪ್ರಿಂಟರ್ ಡಿಸೈನ್ ಮಾಡುವವರಿಗೆ ಖಡಕ್ ಸೂಚನೆ ನೀಡಬೇಕು. ಇಲ್ಲವಾದರೆ ಅವರ ಲೈಸೆನ್ಸ್‌ಗಳನ್ನ ರದ್ದುಪಡಿಸಬೇಕು ಇಲ್ಲವೇ ಅಂಗಡಿಗಳ ಬೀಗ ಹಾಕುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೂರಾರು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.
