ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ನರೇಂದ್ರ ಮೋದಿಯಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಅವರು ದೇಶದ ಜನತೆ ಜೈ ಶ್ರೀರಾಮ್ ಎಂದು ಪಠಿಸುತ್ತ ಉಪವಾಸದಿಂದಿರಿ ಎಂದು ಬಯಸುತ್ತಾರೆ ಎಂದು ಹೇಳಿದ್ದಾರೆ.
ಮಧ್ಯ ಪ್ರದೇಶದ ಸರಂಗಪುರ್‌ನಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಿ ಮಾತನಾಡಿದರು. ಪ್ರಧಾನಿಯ ನಿರುದ್ಯೋಗ ನೀತಿಯಿಂದಾಗಿ ಕೆಲಸ ಸಿಗದ ನಿರುದ್ಯೋಗ ಯುವಕರು ದಿನಪೂರ್ತಿ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್‌ಗಳನ್ನು ನೋಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
“ಜೈ ಶ್ರೀರಾಮ್ ಘೋಷಣೆ ಮಾಡುತ್ತಾ ಉಪವಾಸದಿಂದ ಇದ್ದು, ದಿನವಿಡಿ ನಿಮ್ಮ ಫೋನ್‌ಗಳನ್ನು ನೋಡುತ್ತಿರಿ ಎಂಬುದನ್ನು ಪ್ರಧಾನಿ ಬಯಸುತ್ತಾರೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
“ಆರಂಭದಲ್ಲಿ ಸೇನಾ ಪಡೆಗಳು ಯುವಕರಿಗೆ ಕೆಲವು ಗ್ಯಾರಂಟಿಗಳನ್ನು ನೀಡುತ್ತಿದ್ದವು. ಯುವಕರು ಪಿಂಚಣಿ ಪಡೆಯುತ್ತಿದ್ದರು ಹಾಗೂ ಒಂದು ವೇಳೆ ಹುತಾತ್ಮರಾದಾಗ ಗೌರವ ಸಿಗುತ್ತಿತ್ತು. ಈಗ ಅಗ್ನಿವೀರ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ನಾಲ್ಕು ಜನರು ಆಯ್ಕೆಯಾದರೆ ಮೂವರನ್ನು ವಾಪಸ್ ಕಳಿಸಲಾಗುತ್ತಿದೆ. ಆ ಮೂರು ಯುವಕರು ಎಸ್‌ಸಿ ಎಸ್‌ಟಿ ಹಾಗೂ ಒಬಿಸಿ ಸಮುದಾಯದವರಾಗಿರುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
ನಿರುದ್ಯೋಗದ ಬಗ್ಗೆ ಕಳೆದ ಮೂರು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿ. ಭಾರತದಲ್ಲಿ ನಿರುದ್ಯೋಗ ಪ್ರಮಾಣ ದುಪ್ಪಟ್ಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ವಾಲಿಯರ್‌ನಲ್ಲಿ ನ್ಯಾಯ ಯಾತ್ರೆಯಲ್ಲಿ ಸಾರ್ವಜನಿಕ ಭಾಷಣ ಮಾಡಿದ ರಾಹುಲ್ ಗಾಂಧಿ, “ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ನಿರುದ್ಯೋಗ ಪ್ರಮಾಣ ದುಪ್ಪಟ್ಟಾಗಿದೆ. ಇಲ್ಲಿ ಶೇ.23 ರಷ್ಟು ನಿರುದ್ಯೋಗವಿದ್ದರೆ ಪಾಕ್‌ನಲ್ಲಿ ಶೇ.12ರಷ್ಟು ನಿರುದ್ಯೋಗ ಪ್ರಮಾಣವಿದೆ” ಎಂದು ರಾಹುಲ್ ಹೇಳಿದರು.
ಕಳೆದ 40 ವರ್ಷಗಳಲ್ಲಿ ಭಾರತದ ನಿರುದ್ಯೋಗ ಪ್ರಮಾಣ ತೀವ್ರಗೊಂಡಿದೆ.ಬಾಂಗ್ಲಾದೇಶ ಹಾಗೂ ಭೂತಾನ್‌ಗಿಂತ ಹೆಚ್ಚಿನ ಸಂಖ್ಯೆಯ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
