- ಸುಪ್ರೀಂ ಕೋರ್ಟ್‌ನಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದು: ಡಿಸಿಎಂ ಖುಷಿ
- ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಸಾಷ್ಟಾಂಗ ನಮನಗಳು
ತಮ್ಮ ವಿರುದ್ಧದ ಇಡಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, “ನನ್ನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನನಗೆ ರಿಲೀಫ್ ಕೊಟ್ಟಿದೆ. ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ. ಸಿಬಿಐನವರು ಈಗಲೂ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದನ್ನು ಸದ್ಯದಲ್ಲೇ ಬಹಿರಂಗಪಡಿಸುವೆ” ಎಂದು ತಿಳಿಸಿದ್ದಾರೆ.
“ಸುಪ್ರೀಂ ಕೋರ್ಟ್ ನ್ಯಾಯ ಪೀಠದಿಂದ ಅನ್ಯಾಯ ಆಗುವುದಿಲ್ಲ ಎಂದು ನಂಬಿದ್ದೆ. ಅದರಂತೆ ನ್ಯಾಯ ಸಿಕ್ಕಿದ್ದು ಸಂತೋಷವಾಗಿದೆ. ನನ್ನ ಪರವಾಗಿ ನಿಂತ ನಮ್ಮ ನಾಯಕರು, ಸ್ನೇಹಿತರು, ದೇಶದಾದ್ಯಂತ ನನಗೆ ಒಳ್ಳೆಯದನ್ನು ಬಯಸಿದ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
“ನ್ಯಾಯಾಲಯದ ಆದೇಶ ಪ್ರತಿ ಸಿಕ್ಕ ನಂತರ ಪೂರ್ಣಪ್ರಮಾಣದ ಹೇಳಿಕೆ ನೀಡುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ಸಿಕ್ಕ ಅತ್ಯಂತ ಸಂತೋಷದ ದಿನ ಇಂದು. ಸಿಬಿಐನವರು ಈಗಲೂ ಏನೆಲ್ಲಾ ಮಾಡುತ್ತಿದ್ದಾರೆ ಎಂದು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಯತ್ನ ನಡೆಯುತ್ತಿದೆಯಂತೆ. ಅವರು ಮೇಲ್ಮನವಿ ಹಾಕಲಿ. ಅವರು ಎಲ್ಲ ರೀತಿಯ ಹೋರಾಟ ಮಾಡಲಿ. ನಾನು ಸಿದ್ಧನಿದ್ದೇನೆ” ಎಂದು ತಿಳಿಸಿದರು.
ಈ ತೀರ್ಪಿನಿಂದ ನಿಮಗೆ ಬಲ ದೊಡ್ಡ ಬಲ ಸಿಕ್ಕಿದೆಯೇ ಎಂದು ಕೇಳಿದಾಗ, “ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನ್ನ ಮನೆ ಮೇಲೆ ಐಟಿ ದಾಳಿ ನಡೆದ ಮೊದಲ ದಿನದಿಂದಲೂ ನಾನು ಆತ್ಮವಿಶ್ವಾಸದಿಂದ ಎದುರಿಸಿದ್ದೆ. ಈಗಲೂ ಆತ್ಮವಿಶ್ವಾಸದಲ್ಲಿ ಇದ್ದೇನೆ, ಮುಂದೆಯೂ ಇರುತ್ತೇನೆ. ಅವರು ನನಗೆ ಎಷ್ಟು ತೊಂದರೆ ಕೊಡಲು ಪ್ರಯತ್ನಿಸುತ್ತಾರೋ ನಾನು ರಾಜಕೀಯವಾಗಿ ಅಷ್ಟೇ ಎತ್ತರಕ್ಕೆ ಬೆಳೆಯುತ್ತೇನೆ ಎಂಬ ವಿಶ್ವಾಸವಿದೆ. ಸರ್ಕಾರ ತನಿಖೆಯ ಅನುಮತಿ ಹಿಂಪಡೆಡಿದ್ದರೂ ಸಿಬಿಐ ನನ್ನ ಆಪ್ತರಿಗೆ ಕಿರುಕುಳ ಮುಂದುವರಿಸಿದೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಪ. ಬಂಗಾಳ | ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿದ ಅಭಿಜಿತ್ ಗಂಗೋಪಾಧ್ಯಾಯ: ಬಿಜೆಪಿ ಸೇರುವುದಾಗಿ ಘೋಷಣೆ
ನಿಮ್ಮ ವಿರೋಧಿಗಳಿಗೆ ಏನು ಹೇಳುತ್ತೀರಿ ಎಂದಾಗ, “ನನಗೆ ಯಾರೂ ವಿರೋಧಿಗಳಿಲ್ಲ. ಇದು ಪ್ರಕೃತಿ ನಿಯಮ. ನಮಗೆ ತೊಂದರೆ ಕೊಡುವವರೆಲ್ಲರೂ ನಮಗೆ ಒಂದು ರೂಪ ನೀಡುತ್ತಿರುತ್ತಾರೆ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನಮಗೆ ಇಂತಹ ಏಟು ಬಿದ್ದಾಗ ನಾವು ಉತ್ತಮ ರೂಪ ಪಡೆಯುತ್ತೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
