ಉಸ್ಮಾನೀಯ ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿ ರೈತರ ಮತ್ತು ವ್ಯಾಪಾರಸ್ಥರಿಂದ ಕರ ವಸೂಲಿಗೆ ಟೆಂಡರ್ ಕರೆದಿದ್ದಾರೆ. ಕಾನೂನು ಬಾಹಿರ ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಿದ ಮೇಲೆ ಟೆಂಡರ್ ಕರೆಯುವುದು ಸೂಕ್ತವಾಗಿದೆ. ರಾಯಚೂರು ನಗರಸಭೆಯು ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘನೆ ಮಾಡಿದಲ್ಲಿ ಗುತ್ತೆದಾರರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಮಹಾವೀರ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ನಗರದ ಉಸ್ಮಾನೀಯ ತರಕಾರಿ ಮಾರುಕಟ್ಟೆ ಹಿಂಭಾಗದ ರೈತ ಮಾರುಕಟ್ಟೆಯಲ್ಲಿ ರೈತರಿಂದ ಹಾಗೂ ವ್ಯಾಪಾರಸ್ಥರಿಂದ ಕರವಸೂಲಿ ಮಾಡಲು ನಗರಸಭೆ ಟೆಂಡರ್ ಕರೆದಿದೆ. ರೈತ ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರ ವಹಿವಾಟು ನಡೆಸುತ್ತಿಲ್ಲ. ಹಾಗೂ ತರಕಾರಿ ವ್ಯಾಪಾರಸ್ಥರು ರೈತ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿಲ್ಲ. ಕರವಸೂಲಿ ಗುತ್ತಿಗೆ ಪಡೆದ ಗುತ್ತೆದಾರರು ಯಾರಿಂದ ಕರ ವಸೂಲಿ ಮಾಡಬೇಕು” ಎಂದರು.
“ಕಳೆದ 9 ತಿಂಗಳುಗಳಿಂದ ಅನಧಿಕೃತ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಿ ಎಂದು ಜಿಲ್ಲಾಧಿಕಾರಿಗೆ, ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಹಿಂದಿನ ನಗರಸಭೆ ಪೌರಾಯುಕ್ತರು, ಎರಡು ತಿಂಗಳ ಹಿಂದೆ ಅನಧಿಕೃತ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ರೈತರನ್ನು ಉಸ್ಮಾನೀಯ ಮಾರುಕಟ್ಟೆ ಹಿಂಭಾಗದಲ್ಲಿ ಕುಳಿತು ವ್ಯಾಪಾರ ಮಾಡಲು ಪ್ರಕಟಣೆ ನೀಡಿದ್ದರು. ಗುತ್ತೆದಾರರು ಹಾಗೂ ರೈತರು ಮತ್ತು ವ್ಯಾಪಾರಸ್ಥರು ನಗರಸಭೆ ಪೌರಾಯುಕ್ತರ ಆದೇಶಕ್ಕೆ ಮನ್ನಣೆ ನೀಡದೆ ಧಿಕ್ಕರಿಸಿದ್ದಾರೆ” ಎಂದು ದೂರಿದರು.
“ಮಾರ್ಚ್ 6ರಂದು ನಡೆಯುವ ಟೆಂಡರ್ನಲ್ಲಿ ನಿಯಮ ಷರತ್ತುಗಳನ್ನು ಪಾಲಿಸುವ ಗುತ್ತೇದಾರರಿಗೆ ಟೆಂಡರ್ ನೀಡಲಿ ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುತ್ತದೆ. ಲೀಜ್ ಕಂ ನಿವೇಶನ ಹಂಚಿಕೆ ಪ್ರಕ್ರಿಯಲ್ಲಿ ತರಕಾರಿ ಮಾರಾಟಗಾರರು ನಿವೇಶನ ಹಂಚಿಕೆಗಾಗಿ ಮುಂಗಡ ಹಣ ಶೇ.25ರಷ್ಟು ಹಣ ಕಟ್ಟಲಾಗಿತ್ತು. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಲೀಜ್ ಕಂ ನಿವೇಶನ ಹಂಚಿಕೆ ತಡೆ ಹಿಡಿದಿದ್ದು ಸಮಂಜಸವಲ್ಲ” ಎಂದರು.
“6 ತಿಂಗಳ ಹಿಂದೆ ಕಾನೂನಾತ್ಮಕವಾಗಿ ನಿವೇಶನ ಹಂಚಿಕೆಯಾಗಿದೆ. 2004ರಲ್ಲಿ ಚದರ ಅಡಿಗೆ ₹80ರಂತೆ ನಿಗಧಿಪಡಿಸಿ ಅಂದು ನಿವೇಶನ ಹಂಚಿಕೆ ಮಾಡಿದೆ. 200 ಚದರ ಅಡಿಗೆ ನಿವೇಶನ ಹಂಚಿಕೆಗೆ ಅಂದಿನ ಕೃಷಿ ನಿರ್ದೇಶಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಜನಾಂಗದ ನ್ಯಾಯಾಲಯದಲ್ಲಿ ನಿವೇಶನ ಹಂಚಿಕೆಗೆ ಒಪ್ಪಿಕೊಂಡಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ಕುತಂತ್ರ ನಡೆಸುತ್ತಿದೆ: ಮುಖ್ಯಮಂತ್ರಿ ಚಂದ್ರು
“ಸಚಿವರು ಕೂಡಲೇ ಪ್ರತಿ ಚದರ ಅಡಿಗೆ ₹200ರಂತೆ ಒಪ್ಪಿಗೆ ಸೂಚಿಸಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಿಗೆ ಕಾರ್ಯದರ್ಶಿಗೆ ನಿವೇಶನ ಹಂಚಿಕೆಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರಭು ನಾಯಕ, ರಿಜ್ವಾನ್, ಬಸವರಾಜ, ಉದಯ ಕುಮಾರ ಇದ್ದರು.
ವರದಿ : ಹಫೀಜುಲ್ಲ
