ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!

Date:

Advertisements
ಅತಿಥಿ ದೇವೋಭವ, ಅಂದರೆ ಅತಿಥಿಗಳು ದೇವರಿಗೆ ಸಮ ಎಂದು ಹೇಳುವ ಭಾರತ, ವಿದೇಶಿ ಅತಿಥಿಗಳಿಗೆ ಸಾಮೂಹಿಕ ಅತ್ಯಾಚಾರದ ʼಕ್ರೂರ ಆತಿಥ್ಯʼ ನೀಡುತ್ತಿದೆಯೇ ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ.

 

ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಭಾರತಕ್ಕೆ ಪ್ರವಾಸ ಬರುವ ವಿದೇಶಿ ಮಹಿಳೆಯರೂ ಇಲ್ಲಿ ಸುರಕ್ಷಿತರಲ್ಲ ಎಂಬುದಕ್ಕೆ ಆಗಾಗ ಬರುತ್ತಿರುವ ಅತ್ಯಾಚಾರದ ಸುದ್ದಿಗಳೇ ಸಾಕ್ಷಿ. ಕೆಲವು ದೇಶಗಳು ಭಾರತಕ್ಕೆ ಪ್ರವಾಸ ಹೋಗುವ ಒಂಟಿ ಮಹಿಳೆಯರಿಗೆ ಎಚ್ಚರಿಕೆ ನೀಡಿರುವುದು ವರದಿಯಾಗಿತ್ತು. ಭಾರತ ಮಹಿಳಾ ಪ್ರವಾಸಗರಿಗೆ ಸುರಕ್ಷಿತವಲ್ಲ ಎಂಬ ಭಾವನೆ ಗಟ್ಟಿಯಾಗುವಂತೆ ಮಾಡುತ್ತಿವೆ ಇಲ್ಲಿ ನಡೆಯುತ್ತಿರುವ ವಿದೇಶಿ ಪ್ರವಾಸಿಗರ ಅತ್ಯಾಚಾರ ಪ್ರಕರಣಗಳು.

ಮಾರ್ಚ್‌ 3 ರಂದು ಜಾರ್ಖಂಡ್‌ನಲ್ಲಿ ನಡೆದ ಸ್ಪೇನ್‌ನ ಪ್ರವಾಸಿ ಮಹಿಳೆಯ ಸಾಮೂಹಿಕ ಅತ್ಯಾಚಾರ ಇಡೀ ದೇಶವೇ ತಲೆ ತಗ್ಗಿಸಬೇಕಾದ ಸಂಗತಿ. ದೇಶವನ್ನಾಳುವ ನಾಯಕರಿಗೆ ಇದು ಅಂತಹ ಸುದ್ದಿಯೇ ಅಲ್ಲ. ಮುಖ್ಯವಾಹಿನಿಯ ಮಾಧ್ಯಮಗಳಿಗೆ ಇದು ಮಾಮೂಲಿ ಸುದ್ದಿ. ಭಾರತಕ್ಕೆ ಬೈಕ್‌ನಲ್ಲಿ ಪ್ರವಾಸ ಬಂದಿದ್ದ ಸ್ಪೇನ್‌ನ ಪ್ರವಾಸಿ ದಂಪತಿ ಜಾರ್ಖಂಡ್‌ನ ದುಮ್ಕಾ ಅರಣ್ಯ ಪ್ರದೇಶದ ಮೂಲಕ ಸಾಗುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಪತಿಯನ್ನು ಥಳಿಸಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಆ ದಂಪತಿ ಈ ಕೆಟ್ಟ ಘಟನೆಯ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಹಲವು ಪ್ರವಾಸಿಗರು ಭಾರತದ ಕೆಲವು ಪ್ರದೇಶಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಲೇಖಕ ಡೇವಿಡ್‌ ಜೋಸೆಫ್‌ ವೋಲೊರ್ಕೊ ಅವರು ತಾನು ಹಲವಾರು ವರ್ಷಗಳ ಕಾಲ ಭಾರತದಲ್ಲಿ ವಾಸವಾಗಿದ್ದಾಗ ಕಂಡಿದ್ದ ಲೈಂಗಿಕ ಆಕ್ರಮಣದ ಮಟ್ಟ ಇತರ ಯಾವುದೇ ದೇಶಗಳಲ್ಲಿಯೂ ನೋಡಿಲ್ಲ ಎಂದು ಬರೆದುಕೊಂಡಿದ್ದರು.

ಡೇವಿಡ್‌ ಅವರಿಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, “ನೀವು ಭಾರತದಲ್ಲಿ ವಿದೇಶಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ ಘಟನೆಗಳನ್ನು ಉಲ್ಲೇಖಿಸಿದ್ದೀರಿ. ಘಟನೆಯ ಬಗ್ಗೆ ಎಂದಾದರೂ ಪೋಲಿಸರಿಗೆ ದೂರು ಸಲ್ಲಿಸಿದ್ದೀರಾ? ಇಲ್ಲ ಎಂದಾದರೆ ನೀವು ಸಂಪೂರ್ಣ ಬೇಜವಾಬ್ದಾರಿ ವ್ಯಕ್ತಿ. ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ದೇಶದ ಮಾನ ತೆಗೆಯುವುದು ಉತ್ತಮ ಆಯ್ಕೆಯಲ್ಲ” ಎಂದು ಹೇಳುವ ಮೂಲಕ ಈ ದೇಶ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆದುಕೊಳ್ಳುತ್ತದೆ, ಅದನ್ನು ಬೆಟ್ಟು ಮಾಡಿ ತೋರಿಸಿದರೆ ಸಹಿಸಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

Advertisements

ನೀವ್ಯಾಕೆ ಪೊಲೀಸರಿಗೆ ದೂರು ನೀಡಿಲ್ಲ ಎಂದು ಪ್ರಶ್ನೆಸುವ ಇದೇ ರೇಖಾ ಶರ್ಮಾ, ಮಣಿಪುರದ ಕುಕಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ದೂರಿಗೆ ಹಾಗೂ ಕುಸ್ತಿಪಟುಗಳು ನೀಡಿದ ಲೈಂಗಿಕ ದೌರ್ಜನ್ಯದ ದೂರಿಗೆ ಯಾವ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂಬುದನ್ನು ದೇಶವೇ ನೋಡಿದೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರವಿದೆ, ಕುಸ್ತಿಪಟುಗಳು ಆರೋಪ ಮಾಡಿರುವುದು ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ವಿರುದ್ಧ. ಹೀಗಾಗಿ ಆಯೋಗದ ಅಧ್ಯಕ್ಷೆ ಸಂತ್ರಸ್ತರ ನೆರವಿಗೆ ಬಂದಿಲ್ಲ. ಈಗ ಈ ಪ್ರಕರಣದಲ್ಲೂ ಅಸೂಕ್ಷ್ಮರಾಗಿ ಮಾತನಾಡಿದ್ದಾರೆ. ರೇಖಾ ಶರ್ಮಾ ಒಂದು ಕ್ಷಣವೂ ಆ ಸ್ಥಾನದಲ್ಲಿ ಇರಲು ಯೋಗ್ಯರಲ್ಲ.

ಪ್ರಧಾನಿ ಮೋದಿ ಅವರು ಜಿ 20 ಶೃಂಗಸಭೆಯಲ್ಲಿ ಮಹಿಳೆಯರ ಪ್ರಗತಿಯೇ ದೇಶದ ಪ್ರಗತಿ ಎಂದಿದ್ದರು. ಮೋದಿ ಪ್ರಧಾನಿಯಾದ ನಂತರ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಆಗಿದೆ ಎಂಬುದು ಅವರ ಅಂಧ ಅಭಿಮಾನಿಗಳ ನಂಬಿಕೆ. ಅದನ್ನು ಬಲವಾಗಿ ಜನರ ತಲೆಗೆ ತುಂಬಲಾಗುತ್ತಿದೆ. ಎಷ್ಟೆಂದರೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಗಿಟ್ಟಿಸಿ, ಕೈ ತುಂಬ ಸಂಬಳ ಪಡೆದವರು, ನಿವೃತ್ತಿ ವೇತನ ಪಡೆಯುತ್ತ ನೆಮ್ಮದಿಯಾಗಿರುವವರೂ ಅದನ್ನೇ ಉರು ಹೊಡೆಯುತ್ತಿದ್ದಾರೆ. ಹಿಂದೆ ಭಾರತವೆಂಬ ದೇಶವೇ ಇರಲಿಲ್ಲ ಎಂಬ ಮಟ್ಟಿಗೆ ಮಾತನಾಡುತ್ತಿದ್ದಾರೆ. ಮೋದಿಯವರನ್ನು ವಿಶ್ವಗುರು ಎಂದು ಕರೆಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಪ್ರತಿ ವರ್ಷವೂ ಬರುವ ಬಡತನದ ಸೂಚ್ಯಂಕ, ಪ್ರತಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಹಿಳಾ ಸುರಕ್ಷತೆಯ ಸೂಚ್ಯಂಕದಲ್ಲಿ ಭಾರತ ನಿರಂತರವಾಗಿ ಕುಸಿಯುತ್ತಿದೆ. ಕಳಪೆ ಸಾಧನೆ ತೋರಿಸುತ್ತಿದೆ. ಆದರೆ ಎಲ್ಲ ಸೂಚ್ಯಂಕವನ್ನೂ ಮೋದಿ ಪರಿವಾರ ತಿರಸ್ಕರಿಸುತ್ತಿದೆ. ಸಾರಾಸಗಟಾಗಿ ಅದು ಸುಳ್ಳು ಅಂತಿವೆ. ಆ ಮೂಲಕ ಕುಸಿದಿರುವ ಕ್ಷೇತ್ರವನ್ನು ಮೇಲಕ್ಕೆತ್ತುವ ಪ್ರಯತ್ನಕ್ಕೇ ಕೈ ಹಾಕುತ್ತಿಲ್ಲ. ‘ಸಬ್ ಚಂಗಾ ಸೀ’ ಎಂದು ತಮಗೆ ತಾವೇ ಅಂದುಕೊಂಡು ಎಲ್ಲರೂ ಖುಷಿಯಿಂದ ಇದ್ದಾರೆ ಎಂಬಂತೆ ಉಡಾಫೆತನ ತೋರಿದ್ದರ ಪರಿಣಾಮವಾಗಿ ಭಾರತದ ಮರ್ಯಾದೆ ವಿದೇಶಗಳ ಮುಂದೆ ಹರಾಜಾಗುತ್ತಿದೆ.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರಗೈದು ಕೊಂದು ಬಿಸಾಕಿದ ಪ್ರಕರಣ ನಡೆದು ಮೂರು ತಿಂಗಳ ನಂತರ ಕಳೆದ ಜುಲೈನಲ್ಲಿ ಬೆಳಕಿಗೆ ಬಂದಿತ್ತು. ಆಗ ಮಹಿಳಾ ಮಂತ್ರಿಗಳಾದ ಸ್ಮೃತಿ ಇರಾನಿಯಾಗಲಿ, ನಿರ್ಮಲಾ ಸೀತಾರಾಮನ್‌ ಆಗಲಿ ಮಣಿಪುರ ಮಹಿಳೆಯರಿಗೆ ಸಾಂತ್ವನ ಹೇಳಲಿಲ್ಲ. ಅದರ ಬದಲಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ನಡೆದಿರುವ ಪ್ರಕರಣಗಳನ್ನು ಬೆಟ್ಟು ಮಾಡಿ ತೋರಿಸಿ ತಮ್ಮ ಸ್ತ್ರೀ ವಿರೋಧಿ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು. ಉತ್ತರ ಪ್ರದೇಶದ ಉನ್ನಾವ್‌, ಹತ್ರಾಸ್‌ ಘಟನೆಗಳಲ್ಲಿಯೂ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ ತೀರಾ ಅಮಾನವೀಯ. ಮಹಿಳಾ ಪ್ರತಿನಿಧಿಗಳೂ ಖಂಡಿಸಲಿಲ್ಲ. ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಲಿಲ್ಲ. ಅಷ್ಟು ಅಸೂಕ್ಷ್ಮ ನಾಯಕರೇ ಸರ್ಕಾರದಲ್ಲಿ ತುಂಬಿದ್ದಾರೆ.

ಎಫ್‌ಎಂ ಆನ್‌ ಮಾಡಿದರೆ ಸಾಕು ಹಾಡುಗಳಿಗಿಂತ ಹೆಚ್ಚು ಮೋದಿ ಸಾಧನೆಯ ಜಾಹೀರಾತು. ಪುಟ್ಟ ಮಕ್ಕಳಿಂದ ಮೋದಿ ಸಾಧನೆಯ ಉರುಹೊಡೆಯುವ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಇನ್ನು ಟಿ ವಿ ಮಾಧ್ಯಮಗಳ ಬಗ್ಗೆ ಹೇಳುವುದೇ ಬೇಡ. ಸುದ್ದಿ, ಚರ್ಚೆ, ವಿಶೇಷ ಬುಲೆಟಿನ್‌ ಎಲ್ಲವೂ ಮೋದಿ ಸರ್ಕಾರದ ಜಾಹೀರಾತಿನಂತಿವೆ. ಪೇಯ್ಡ್‌ ಕಾರ್ಯಕ್ರಮಗಳ ಜೊತೆ ಪೇಯ್ಡ್‌ ಜಾಹೀರಾತುಗಳಿಗೆ ಮೋದಿ ಸರ್ಕಾರ ನೂರಾರು ಕೋಟಿ ಸುರಿಯುತ್ತಿದೆ.

ಅಕ್ಕಿ ಚೀಲದಲ್ಲೂ ಮೋದಿ ಫೋಟೋ, ಎಲ್ಲೆಲ್ಲೂ ಮೋದಿ ಹವಾ. ಆದರೆ ಅದೇ ಮೋದಿಯವರ ದೇಶದಲ್ಲಿ ಈ ಹತ್ತು ವರ್ಷಗಳಲ್ಲಿ ಕಂಡು ಕೇಳರಿಯದ ಮಟ್ಟಿಗೆ ಹೆಣ್ಣುಮಕ್ಕಳ ಮೇಲೆ ಕ್ರೌರ್ಯ ನಡೆದಿದೆ. ಆ ಬಗ್ಗೆ ಅವರಿಗೆ ಏನೂ ಅನ್ನಿಸುತ್ತಿಲ್ಲ. ಅಂತಹ ಯಾವ ಘಟನೆಗಳೂ ಅವರನ್ನು ಆತಂಕಕ್ಕೆ ದೂಡುವುದಿಲ್ಲ. ರಾಜ್ಯಗಳ ಮೇಲೆ ರಾಜ್ಯ ಗೆಲ್ಲುವುದಷ್ಟೇ ಅವರ ಗುರಿ. ಪ್ರತಿ ತಿಂಗಳು ಕೋಟಿಗಟ್ಟಲೆ ವೆಚ್ಚದಲ್ಲಿ ಆಕಾಶವಾಣಿಯಲ್ಲಿ ಮನ್‌ ಕೀ ಬಾತ್‌ ಹೆಸರಿನಲ್ಲಿ ಏನೇನೋ ಮಾತನಾಡುವ ಪ್ರಧಾನಿ, ಮಹಿಳಾ ಸುರಕ್ಷತೆಯ ಬಗ್ಗೆ ಚುನಾವಣಾ ವೇದಿಕೆಯಲ್ಲಿ ಮಾತ್ರ ಬೊಗಳೆ ಬಿಡಲು ಮರೆಯುವುದಿಲ್ಲ.

ಅತಿಥಿ ದೇವೋಭವ, ಅಂದರೆ ಅತಿಥಿಗಳು ದೇವರಿಗೆ ಸಮ ಎಂದು ಹೇಳುವ ಭಾರತ, ವಿದೇಶಿ ಅತಿಥಿಗಳಿಗೆ ಸಾಮೂಹಿಕ ಅತ್ಯಾಚಾರದ ಕ್ರೂರ ಆತಿಥ್ಯ ನೀಡುತ್ತಿದೆಯೇ ಎಂದು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಭಾರತ ಸರ್ಕಾರ ವಿದೇಶಿ ಪ್ರವಾಸಿಗರಿಗೆ ವಿಶೇಷ ರಕ್ಷಣೆಯ ಅಭಯ ನೀಡದಿದ್ದರೆ ಮುಂದೊಂದು ದಿನ ವಿದೇಶಿ ಪ್ರವಾಸಿಗರ ಕೊರತೆಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಸೊರಗಿದರೂ ಅಚ್ಚರಿಯಿಲ್ಲ. ಅಷ್ಟೇ ಅಲ್ಲ ಭಾರತಕ್ಕೆ ಅಳಿಸಲಾರದ ಕಳಂಕವೊಂದು ಅಂಟಲಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X