ರಷ್ಯಾ-ಉಕ್ರೇನ್ ಗಡಿಯಲ್ಲಿ ಸಿಲುಕಿರುವ ಏಳು ಭಾರತೀಯರು ಭಾರತಕ್ಕೆ ಮರಳಲು ಸರ್ಕಾರದ ಸಹಾಯವನ್ನು ಕೋರಿದ್ದಾರೆ. ತಾವು ಗಡಿಯಲ್ಲಿ ಸಿಲುಕಿರುವ ಬಗ್ಗೆ ವಿಡಿಯೋ ಮಾಡಿ ಅವರು ಹಂಚಿಕೊಂಡಿದ್ದಾರೆ.
ಗಡಿಯಲ್ಲಿ ಸಿಲುಕಿರುವವರನ್ನು ಗಗನ್‌ದೀಪ್ ಸಿಂಗ್ (24), ಲವ್‌ಪ್ರೀತ್ ಸಿಂಗ್ (24), ನರೈನ್ ಸಿಂಗ್ (22), ಗುರುಪ್ರೀತ್ ಸಿಂಗ್ (21), ಗುರುಪ್ರೀತ್ ಸಿಂಗ್ (23), ಹರ್ಷ್ ಕುಮಾರ್ (20) ಮತ್ತು ಅಭಿಷೇಕ್ ಕುಮಾರ್ (21) ಎಂದು ಗುರುತಿಸಲಾಗಿದೆ. ಅವರಲ್ಲಿ, ಐವರು ಕಾರ್ಮಿಕರು ಪಂಜಾಬ್ ಮೂಲದವರಾಗಿದ್ದು, ಇನ್ನಿಬ್ಬರು ಹರಿಯಾಣದವರು ಎಂದು ‘ದಿ ಹಿಂದು’ ವರದಿ ಮಾಡಿದೆ.
ವಿಡಿಯೋದಲ್ಲಿ ಕಾಣಸಿಗುವ ಈ ಏಳು ಮಂದಿ ಮಿಲಿಟರಿ ಚಳಿಗಾಲದ ಜಾಕೆಟ್‌ಗಳನ್ನು ಧರಿಸಿದ್ದಾರೆ. ಮಂದ ಬಳಕಿನ ಅಸ್ತವ್ಯಸ್ತವಾಗಿರುವ ಕೋಣೆಯ ಮೂಲೆಯಲ್ಲಿರುವುದು ಕಂಡುಬಂದಿದೆ.
ಹೊಸ ವರ್ಷಾಚರಣೆಗಾಗಿ ಡಿಸೆಂಬರ್ 27 ರಂದು ಆ ಏಳು ಮಂದಿ ಪ್ರವಾಸಿ ವೀಸಾ ಪಡೆದು ರಷ್ಯಾಕ್ಕೆ ತೆರಳಿದ್ದಾಗಿ ಏಳು ಮಂದಿಯಲ್ಲಿ ಒಬ್ಬನಾದ ಹರ್ಷಕುಮಾರ್ ವಿಡಿಯೋದಲ್ಲಿ ಹೇಳಿದ್ದಾರೆ. ರಷ್ಯಾದ ಪ್ರವಾಸಿ ವೀಸಾ 90 ದಿನಗಳ ಮಾನ್ಯತೆ ಹೊಂದಿದ್ದರೂ, ಅವರು ಬೆಲಾರಸ್‌ಗೆ ತೆರಳಿದ್ದರಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
“ಒಬ್ಬ ಏಜೆಂಟ್ ನಮ್ಮನ್ನು ಬೆಲಾರಸ್‌ಗೆ ಕರೆದೊಯ್ಯಲು ಮುಂದಾದರು. ಬೆಲಾರಸ್‌ಗೆ ಹೋಗಲು ಅಲ್ಲಿನ ವೀಸಾ ಕೂಡ ಬೇಕೆಂದು ನಮಗೆ ತಿಳಿದಿರಲಿಲ್ಲ. ನಾವು ಬೆಲಾರಸ್‌ಗೆ ಹೋದ ಬಳಿಕ, ಆ ಏಜೆಂಟ್ ನಮ್ಮ ಬಳಿ ಹೆಚ್ಚು ಹಣ ಕೇಳಿದರು. ನಾವು ಕೊಡಲಿಲ್ಲ. ಆತ ನಮ್ಮನ್ನು ಬಿಟ್ಟು ಹೋದ. ಅಲ್ಲಿನ ಪೊಲೀಸರು ನಮ್ಮನ್ನು ಹಿಡಿದು, ನಮ್ಮ ದಾಖಲೆಗಳಿಗೆ ಸಹಿ ಮಾಡಿದ ರಷ್ಯಾದ ಅಧಿಕಾರಿಗಳಿಗೆ ಒಪ್ಪಿಸಿದರು” ಎಂದು ಹರ್ಷ ವಿವರಿಸಿದ್ದಾರೆ.
”ಪೊಲೀಸರು ನಮ್ಮನ್ನು ಬಂಧಿಸಿದ್ದ ಕಾರಣ, ಅಧಿಕಾರಿಗಳು ನಮ್ಮನ್ನು ರಷ್ಯಾ ಸೇನೆಗೆ ಸೇರುವಂತೆ ಒತ್ತಾಯಿಸಿದರು. ಇಲ್ಲವಾದಲ್ಲಿ, 10 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಬೆದರಿಸಿದರು” ಎಂದು ಆತ ಆರೋಪಿಸಿದ್ದಾರೆ.
“ನಾವು ಒಂದು ವರ್ಷದ ನಂತರ ಮಾತ್ರವೇ ಭಾರತಕ್ಕೆ ಮರಳಬಹುದೆಂದು ರಷ್ಯಾ ಸೇನೆ ಹೇಳುತ್ತಿದೆ. ಅವರು ಯುದ್ಧವನ್ನು ಗೆಲ್ಲಲು ಸಹಾಯ ಮಾಡಲು ನಮ್ಮನ್ನು ಕೇಳುತ್ತಿದ್ದಾರೆ. ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ನಮಗೆ ತಿಳಿದಿಲ್ಲ. ಸಹಾಯ ಮಾಡದಿದ್ದರೆ, ನಾವು ಉಳಿಯುವುದಿಲ್ಲ” ಎಂದು ಮತ್ತೊಬ್ಬ ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾರೆ.
ಭಾರತೀಯ ಪ್ರಜೆಗಳು ತಮಗೆ ಸಹಾಯ ಮಾಡುವಂತೆ ರಾಯಭಾರ ಕಚೇರಿ ಮತ್ತು ಸರ್ಕಾರವನ್ನು ವಿನಂತಿಸಿದ್ದಾರೆ. “ಇದು ನಮ್ಮ ಕೊನೆಯ ವೀಡಿಯೊ ಆಗಿರಬಹುದು. ಅವರು ನಮ್ಮನ್ನು ಉಕ್ರೇನ್‌ನ ಯುದ್ಧ ಪ್ರದೇಶಕ್ಕೆ ಕಳುಹಿಸುತ್ತಿದ್ದಾರೆ” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಕಳೆದ ವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ”ರಷ್ಯಾದ ಸೈನ್ಯಕ್ಕೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸುಮಾರು 20 ಭಾರತೀಯ ಪ್ರಜೆಗಳ ‘ಬಿಡುಗಡೆ’ಗಾಗಿ ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ” ಎಂದು ಹೇಳಿಕೊಂಡಿದೆ.
“20 ಭಾರತೀಯರು ಸಹಾಯಕ ಸಿಬ್ಬಂದಿಯಾಗಿ ಅಥವಾ ರಷ್ಯಾದ ಸೈನ್ಯದಲ್ಲಿ ಸಹಾಯಕರಾಗಿ ಕೆಲಸ ಮಾಡಲು ಅಲ್ಲಿಗೆ ಹೋಗಿದ್ದಾರೆ ಎಂಬುದು ನಮ್ಮ ತಿಳಿವಳಿಕೆಯಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಭಾರತೀಯರನ್ನು ದೇಶಕ್ಕೆ ಮರಳಿ ತರಲು ಭಾರತವು ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಕ್ತಾರರು ಹೇಳಿದ್ದಾರೆ.
”ರಷ್ಯಾದ ಮಿಲಿಟರಿಯಲ್ಲಿ ಭದ್ರತಾ ಸಹಾಯಕರಾಗಿ ಅನೇಕ ಭಾರತೀಯಕರು ನೇಮಕಗೊಂಡಿದ್ದಾರೆ. ಅವರನ್ನು ಉಕ್ರೇನ್ ವಿರುದ್ಧ ಹೋರಾಟದ ರಷ್ಯಾದ ಗಡಿಯುದ್ದಕ್ಕೂ ನಿಯೋಜಿಸಲು ಒತ್ತಾಯಿಸಲಾಗುತ್ತಿದೆ” ಎಂದು ಮಾಧ್ಯಮಗಳು ವರದಿ ಮಾಡಿವೆ.