ಕಲ್ಯಾಣ ಕರ್ನಾಟಕ ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳ ಪೈಕಿ, ಒಂದು ಕ್ಷೇತ್ರದಲ್ಲಾದರೂ ಜೆಡಿಎಸ್ ಸ್ಪರ್ಧಿಸಬೇಕು. ರಾಯಚೂರು-ಯಾದಗಿರಿ ಕ್ಷೇತ್ರವನ್ನು ಜೆಡಿಎಸ್ ತನ್ನ ಪಾಲಿಗೆ ಪಡೆದು, ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೆಗೌಡರಿಗೆ ಮನವಿ ಮಾಡಿರುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷಿ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. “ಜೆಡಿಎಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಮತಬ್ಯಾಂಕ್ ಇದ್ದು, ಪ್ರತಿ ಬಾರಿಯೂ ಇಬ್ಬರ ಶಾಸಕರನ್ನು ಜಿಲ್ಲೆಯ ಜನತೆ ಗೆಲ್ಲಿಸುತ್ತಾ ಬಂದಿದ್ದಾರೆ. ಇಬ್ಬರು ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಶಾಸಕಿ ಕರಿಯಮ್ಮ ನಾಯಕ ಸೇರಿದಂತೆ ಪಕ್ಷದ ಹಿರಿಯ ಮುಖಂಡರೊಂದಿಗೆ ಸೇರಿ ಪಕ್ಷದ ವರಿಷ್ಟರಲ್ಲಿ ಮನವಿ ಮಾಡಲಾಗಿದೆ. ಮಾನ್ವಿ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಎಂಬುವವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ. ಪಕ್ಷದ ನಾಯಕರು ಮನವಿಯನ್ನು ಆಲಿಸಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ” ಎಂದರು.
ಈ ಸುದ್ದಿ ಒದಿದ್ದೀರಾ? ಹಾವೇರಿ | ಹಲವು ಬೇಡಿಕೆ ಈಡೇರಿಸುವಂತೆ ರೈತ ಸಂಘ ಆಗ್ರಹ
“ಲೋಕಸಭಾ ಕ್ಷೇತ್ರದದ ಎಲ್ಲ ವಿಧಾನಸಭಾ ಕ್ಷೇತ್ರಗಗಳಿಗೆ ಈಗಾಗಲೇ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬಿಜೆಪಿ ಕ್ಷೇತ್ರವಾರು ಜೆಡಿಎಸ್ ಉಸ್ತುವಾರಿಗಳು ಸಭೆ ನಡೆಸಿ ಚುನಾವಣಾ ಸಿದ್ದತೆ ನಡೆಸಲೂ ಕೂಡ ಪಕ್ಷದ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ” ಎಂದರು.
ಈ ಸಂದರ್ಬದಲ್ಲಿ ಎನ್ ಶಿವಶಂಕರ್, ಬಿ ತಿಮ್ಮಾರೆಡ್ಡಿ, ನರಸಿಂಹನಾಯಕ, ವಿಶ್ವನಾಥ ಪಟ್ಟಿ, ಜಂಬುನಾಥ ಯಾದವ, ಹಂಪಯ್ಯನಾಯಕ, ನಾಗರಾಜಗೌಡ ಇದ್ದರು.
ವರದಿ : ಹಫೀಜುಲ್ಲ