ಯೂತ್ ಕಾಂಗ್ರೆಸ್‌ನ ಹೆಸರಿನಡಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದೊಂದಿಗೆ ಅವ್ಯವಹಾರ ಪ್ರಕರಣಗಳಲ್ಲಿ ಸಿಲುಕಿ ದೇಶ ತೊರೆದ ಉದ್ಯಮಿಗಳಾದ ನೀರವ್ ಮೋದಿ, ವಿಜಯ್ ಮಲ್ಯ ಮುಂತಾದವರ ಚಿತ್ರಗಳಿರುವ ಪೋಸ್ಟರ್‌ಗಳು ದಿಲ್ಲಿಯ ಹಲವೆಡೆ ಕಂಡುಬಂದ ಬಳಿಕ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ.
ಈ ವಿವಾದಾತ್ಮಕ ಪೋಸ್ಟರ್‌ಗಳಲ್ಲಿ ನರೇಂದ್ರ ಮೋದಿ ಮತ್ತು ದೇಶ ತೊರೆದ ಕೆಲವು ಉದ್ಯಮಿಗಳು, ಲೈಂಗಿಕ ದೌರ್ಜನ್ಯದ ಬಿಜೆಪಿ ಮುಖಂಡರೊಂದಿಗೆ “ಮೋದಿ ಕಾ ಅಸ್ಲಿ ಪರಿವಾರ್”(ಮೋದಿಯ ನಿಜವಾದ ಪರಿವಾರ) ಎಂಬ ಶೀರ್ಷಿಕೆಯೊಂದಿಗೆ ಭಾರತೀಯ ಯುವ ಕಾಂಗ್ರೆಸ್ ಎಂದು ಬರೆದಿರುವ ಫ್ಲೆಕ್ಸ್ ಅನ್ನು ಹಲವಡೆ ಹಾಕಲಾಗಿತ್ತು.
◆ Rapists
◆ Terrorist
◆ Hate Mongers
◆ Absconders
◆ Murderers𝗦𝗮𝗯𝗸𝗮 𝗦𝗮𝘁𝗵 – 𝗦𝗮𝗯𝗸𝗮 𝗩𝗶𝘀𝗵𝘃𝗮𝘀#ModiKaAsliParivar pic.twitter.com/l8skf2XqcY
— Indian Youth Congress (@IYC) March 5, 2024
ಈ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ದಿಲ್ಲಿ ಪ್ರಿವೆನ್ಶನ್ ಆಫ್ ಡಿಫೇಸ್‌ಮೆಂಟ್ ಆಫ್ ಪ್ರಾಪರ್ಟಿ ಆ್ಯಕ್ಟ್‌ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆ ಬಳಿಕ ಖುದ್ದು ಪೊಲೀಸರೆ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ.
ಹೊಸದಿಲ್ಲಿ ಮುನಿಸಿಪಲ್ ಕೌನ್ಸಿಲ್‌ನ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ವಿವಾದಿತ ಪೋಸ್ಟರ್‌ನಲ್ಲಿ ದೇಶ ತೊರೆದ ಉದ್ಯಮಿಗಳಲ್ಲದೇ, ಗೌತಮ್ ಅದಾನಿ, ಭೋಪಾಲ್‌ನ ಬಿಜೆಪಿ ಸಂಸದೆ, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯದ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸೇರಿದಂತೆ ಒಟ್ಟು 13 ಜನಗಳ ಫೋಟೋಗಳನ್ನು ಹಾಕಲಾಗಿತ್ತು. ಇವರೆಲ್ಲರೂ ಮೋದಿಯವರ ನೈಜ ಕುಟುಂಬ ಎಂದು ಬರೆಯಲಾಗಿತ್ತು.
ಹಿನ್ನೆಲೆ ಏನು?
ಪಾಟ್ನಾದಲ್ಲಿ ಕಳೆದ ರವಿವಾರ ನಡೆದ ಸಮಾವೇಶದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರು, ಪ್ರಧಾನಿ ಮೋದಿಗೆ ಕುಟುಂಬವಿಲ್ಲ. ನೈಜ ಹಿಂದೂ ಅಲ್ಲ. ನೈಜ ಹಿಂದೂ ತಾಯಿ ಮರಣ ಹೊಂದಿದಾಗ ಕೇಶಮುಂಡನ ಮಾಡುತ್ತಿದ್ದರು” ಎಂದು ಹೇಳಿದ್ದಕ್ಕೆ ಬಿಜೆಪಿ ಪಾಳಯ ಆಕ್ರೋಶಗೊಂಡಿತ್ತು.
ಇದಕ್ಕೆ ಪ್ರತಿಯಾಗಿ ಸೋಮವಾರ ನಡೆದ ಸಾರ್ವಜನಿಕ ಸಮಾವೇಶದ ಭಾಷಣದ ವೇಳೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, 140 ಕೋಟಿ ದೇಶವಾಸಿಗಳು ತಮ್ಮ ಪರಿವಾರ ಎಂದಿದ್ದರು. ಇದರ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳ ಬಯೋದಲ್ಲಿ ʼಮೋದಿ ಕಾ ಪರಿವಾರ್’ ಎಂದು ಸೇರಿಸಿದ್ದರು.
ಇದಕ್ಕೆ ಕೌಂಟರ್ ಆಗಿ ಯೂತ್ ಕಾಂಗ್ರೆಸ್, “ಮೋದಿ ಕಾ ಅಸ್ಲಿ ಪರಿವಾರ್” ಎಂದು ಹೇಳುವ ಮೂಲಕ ಅತ್ಯಾಚಾರ ಆರೋಪಿಗಳು, ದೇಶ ತೊರೆದ ಉದ್ಯಮಿಗಳ ಫೋಟೋ ಇರುವ ಫ್ಲೆಕ್ಸ್ ಹಾಕಿತ್ತು. ಅಲ್ಲದೇ, ಅದನ್ನೇ ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿತ್ತು.
