ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಹಭಾಗಿತ್ವ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಚಿ ನಿ ಪುರುಷೋತ್ತಮ್ ತಿಳಿಸಿದರು.
ತುಮಕೂರು ನಗರದ ಶಾಂತಸದನದಲ್ಲಿ ಸರಸ್ಪತಿ ಮಹಿಳಾ ಸ್ವಸಹಾಯ ಸಂಘದ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಹೆಣ್ಣನ್ನು ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ವನದೇವತೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದ್ದು, ದೇವತೆಯ ಮತ್ತೊಂದು ರೂಪವೇ ಹೆಣ್ಣು. ಈ ಸೃಷ್ಟಿಯಲ್ಲಿ ಹೆಣ್ಣಿಗೆ ಒಂದು ವಿಶೇಷ ಸ್ಥಾನಮಾನವಿದೆ. ಹೆಣ್ಣು ಈ ಜಗದ ಕಣ್ಣು ಎನ್ನುತ್ತಾರೆ. ಸಮಾಜದಲ್ಲಿ ಮಹಿಳೆಯ ಪಾತ್ರ ಅನನ್ಯ. ತಾಯಿಯಾಗಿ, ತಂಗಿಯಾಗಿ, ಮಡದಿಯಾಗಿ, ಹೆಣ್ಣು ಸಕಲರಾಶಿಗಳ ಅಧಿದೇವತೆಯಾಗಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಆಕೆಗೆ ಅವಕಾಶ ನೀಡಿದರೆ ಅದ್ಭುತ ಸಾಧನೆ ಮಾಡುವ ಮನಸ್ಸುಳ್ಳವಳಾಗಿದ್ದಾಳೆ” ಎಂದರು.
“ಈ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯಲ್ಲಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಬೇಕಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ಹೆಣ್ಣು ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದಾಳೆ. ಆಟೋ ರೀಕ್ಷಾದಿಂದ ಹಿಡಿದು ಬಾಹ್ಯಾಕಾಶದವರೆಗೂ ತನ್ನ ಸಾಧನೆ ವಿಸ್ತರಿಸಿದ್ದಾಳೆ. ಆದ್ದರಿಂದ ಹೆಣ್ಣನ್ನು ಎಂದಿಗೂ ಕಡೆಗಣಿಸದೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲೆ ಟಿ ಆರ್ ಲೀಲಾವತಿ ಮಾತನಾಡಿ, “ಮಹಿಳಾ ಸ್ವಸಹಾಯ ಸಂಘಗಳು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ. ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಮಾತ್ರ ಎನ್ನುವ ಕಾಲ ದೂರವಾಗಿದೆ. ಇಂದು ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ನಮಗೂ ಪುರುಷರಿಗೆ ಸರಿಸಮಾನವಾಗಿ ನಿಲ್ಲುವ ಶಕ್ತಿ ಇದೆ ಎನ್ನುವುದನ್ನು ಇಂದು ಅನೇಕ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಇಂದು ಸ್ವಾವಲಂಬನೆ ಬದುಕಿನತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯ” ಎಂದರು.
“ಸರಸ್ವತಿ ಪುರಂನ ಮಹಿಳೆಯರೆಲ್ಲ ಸೇರಿ ಸರಸ್ವತಿ ಮಹಿಳೆಯರು ಮಹಿಳಾ ಸ್ವಸಹಾಯ ಸಂಘ ಮಾಡಿಕೊಂಡು ಕಳೆದ 9 ವರ್ಷಗಳಿಂದ ಸಂಘವನ್ನು ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ. ಬ್ಯಾಂಕುಗಳಿಂದ ಆರ್ಥಿಕ ಸಹಾಯ ಪಡೆಯದೆ ತಮ್ಮ ಉಳಿತಾಯದ ಹಣದಿಂದಲೇ ಸಾಲ ಸೌಲಭ್ಯ ನೀಡುತ್ತಾ ಮಹಿಳೆಯರ ಬದುಕಿಗೆ ಸಹಕಾರಿಯಾಗಿದೆ. ಈ ಸಂಘ ಮತ್ತಷ್ಟು ಹೆಸರನ್ನು ಗಳಿಸಲಿ, ಆರ್ಥಿಕವಾಗಿ ಸದೃಢವಾಗಲಿ” ಎಂದು ನುಡಿದರು.
ಚೆಸ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಟಿ ಎನ್ ಮಧುಕರ್ ಮಾತನಾಡಿ, “ಮಹಿಳೆಯರು ಆರ್ಥಿಕವಾಗಿ ಸದೃಢವಾಗಬೇಕು. ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು. ಮನೆಯ ಕೆಲಸ ಸಂಸಾರ ಇದಕ್ಕೆ ಮಾತ್ರ ಸೀಮಿತವಾಗಬಾರದು. ಅದರ ನಡುವೆಯೂ ತಮ್ಮ ಬದುಕನ್ನ ಕಟ್ಟಿಕೊಳ್ಳಬೇಕು. ಮಹಿಳೆಯರಲ್ಲೂ ಕೂಡ ಸಾಕಷ್ಟು ಪ್ರತಿಭೆಗಳು ಇರುತ್ತವೆ. ಆದರೆ ಆ ಪ್ರತಿಭೆಗಳು ಹೊರಬರುತ್ತಿಲ್ಲ. ಹಾಗಾಗಿ ಸಂಸಾರದ ಜವಾಬ್ದಾರಿಗಳ ನಡುವೆಯೂ ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಗೊತ್ತಾಗುವಂತೆ ಮಾಡಬೇಕು. ಸಾಧಕರಾಗಿ ಸ್ಪೂರ್ತಿದಾಯಕ ಬದುಕು ಕಟ್ಟಿಕೊಳ್ಳಬೇಕು” ಎಂದರು.
ಡಯಟ್ ಉಪನ್ಯಾಸಕ ಶ್ರೀರಂಗರಾಜು ಮಾತನಾಡಿ, “ಈ ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘ ಮಾಡಿರುವುದು ಖುಷಿ ವಿಚಾರ. ಇವತ್ತಿನ ಕಾಲಘಟ್ಟದಲ್ಲಿ ಮಹಿಳೆಯರ ಪಾತ್ರ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟಿದೆ. ಹಾಗಾಗಿ ಮಹಿಳೆಯರು ಇಂತಹ ಸಂಘ ಸಂಸ್ಥೆಗಳ ಮೂಲಕವೂ ಕುಟುಂಬದ ಅಭಿವೃದ್ಧಿ ಜತೆಗ ದೇಶದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ; ಡಿಸಿ ಕಚೇರಿಗೆ ಮುತ್ತಿಗೆ ಯತ್ನ
ಶಾಂತಪುರುಷೋತ್ತಮ್ ಮಾತನಾಡಿ, “ಕಳೆದ ಒಂಬತ್ತು ವರ್ಷಗಳ ಹಿಂದೆ ಆರಂಭವಾದ ಸರಸ್ವತಿ ಮಹಿಳಾ ಸ್ವಸಹಾಯ ಸಂಘ ಯಾವುದೇ ಸಣ್ಣ ಕಪ್ಪುಚುಕ್ಕಿಯಿಲ್ಲದಂತೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ₹10 ಲಕ್ಷಕ್ಕೂ ಅಧಿಕ ಆರ್ಥಿಕ ವಹಿವಾಟು ಮಾಡುತ್ತಿರುವ ಸಂಘ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್, ದಿನಮಣಿ, ಗಿರಿಜಾರಾಜು, ವಾಣಿ ಸೇರಿದಂತೆ ಸಂಘದ ಸದಸ್ಯರು ಇದ್ದರು.
