ಪ್ರೇಮಿಗಳಿಬ್ಬರು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಕ್ಕೆ ಯುವಕನ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಜಾತಿ ದೌರ್ಜನ್ಯದ ಘಟನೆ ಕೊಪ್ಪಳದ ಭಾಗ್ಯ ನಗರದಲ್ಲಿ ಬೆಳಕಿಗೆ ಬಂದಿದೆ.
ಭಾಗ್ಯ ನಗರದ ನಿವಾಸಿ ಶಂಕ್ರಪ್ಪ ಎಂಬವರ ಕುಟುಂಬಕ್ಕೆ ಗ್ರಾಮದವರು ಒಂದೂವರೆ ವರ್ಷದ ಹಿಂದೆ ಬಹಿಷ್ಕಾರ ಹಾಕಿದ್ದು, ಅಂದಿನಿಂದಲೂ ಕುಟುಂಬವನ್ನು ದೂರ ಇಡಲಾಗಿದೆ. ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಶಂಕ್ರಪ್ಪ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ. ಅವರ ಪುತ್ರ ಲಿಂಗಾಯತ ಸಮುದಾಯದ ಯುವತಿಯನ್ನು ವಿವಾಹವಾಗಿದ್ದ. ಕಾರಣಕ್ಕಾಗಿ, ಮಾಲ್ಮೀಕಿ ಸಮುದಾಯದ ಮುಖಂಡರು ಶಂಕ್ರಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ ಎಂದು ಹೇಳಲಾಗಿದೆ.
ಕುಟುಂಬಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸುವವರೆಗೂ ಸಮುದಾಯದೊಂದಿಗೆ ಬರೆಯುವಂತಿಲ್ಲ. ಯಾವುದೇ ಸಭೆ, ಸಮಾರಂಭಗಳಿಗೂ ಕುಟುಂಬವನ್ನು ಆಹ್ವಾನಿಸುವುದಿಲ್ಲ. ಯಾವುದೇ ಮನೆಯ ಕಾರ್ಯಕ್ರಮಗಳಲ್ಲಿಯೂ ಭಾಗಿಯಾವುದಂತಿಲ್ಲ ಎಂದು ಸಮುದಾಯದ ಮುಖಂಡರು ತಾಕೀತು ಮಾಡಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ಬಹಿಷ್ಕಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಪೊಲೀಸರು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಲಾಗಿದೆ.