ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿದೆ. ಈ ಮೆಟ್ರೋ ರೈಲು ಮಾರ್ಗವು ಆರ್‌ವಿ ರೋಡ್ ಮತ್ತು ಬೊಮ್ಮಸಂದ್ರ ನಡುವೆ ಸಂಪರ್ಕ ಒದಗಿಸುತ್ತದೆ. ಆದರೆ, ಈ ಮಾರ್ಗದ ಮೆಟ್ರೋ ಸಂಚಾರ ಆರಂಭ ದಿನಾಂಕ ಅಥವಾ ಉದ್ಘಾಟನೆಯನ್ನು ಮುಂದೂಡಲಾಗಿದೆ.
ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಜುಲೈ ವೇಳೆಗೆ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಜನರಿಗೆ ತೆರೆಯಲಾಗುತ್ತದೆ ಎಂದು ಹೇಳಿತ್ತು. ಆದರೆ, ಕೆಲವು ಕಾರ್ಯಗಳು ಇನ್ನೂ ಬಾಕಿ ಉಳಿದಿರುವುದರಿಂದಾಗಿ ಡಿಸೆಂಬರ್ ಕೊನೆಯಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಸುಮಾರು 19.15 ಕಿಲೋ ಮೀಟರ್‌ನ ಮೆಟ್ರೋ ಮಾರ್ಗವಾಗಿದೆ. ಈ ಮೆಟ್ರೋ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಂಚರಿಸಲಿದ್ದು, ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸಲಿದೆ. ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರಯಾಣ ಸುಲಭವಾಗುವ ನಿರೀಕ್ಷೆಯಿದೆ.
ಬಿಎಂಆರ್‌ಸಿಎಲ್‌ನ ರೋಲಿಂಗ್ ಸ್ಟಾಕ್‌ನ ಪ್ರಾಜೆಕ್ಟ್ ಮ್ಯಾನೇಜರ್ ಜಿತೇಂದ್ರ ಝಾ, “ಹಳದಿ ಮಾರ್ಗದಲ್ಲಿ ನಿಯೋಜಿಸಲಾಗುವ ಎಲ್ಲ ರೈಲುಗಳ ಪರೀಕ್ಷೆ ನಡೆಯಬೇಕಿದೆ. ಮೆಟ್ರೋ ರೈಲಿನ ಸುಗಮ ಸಂಚಾರಕ್ಕಾಗಿ 37 ಪರೀಕ್ಷೆಗಳನ್ನು ಮುಂದಿನ ನಾಲ್ಕು ತಿಂಗಳುಗಳ ಅವಧಿಯಲ್ಲಿ ಮಾಡಲಾಗುತ್ತದೆ,” ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಯೋಗವನ್ನು ನಡೆಸುವ 45 ದಿನಕ್ಕೂ ಮುನ್ನವೇ ಸಿಗ್ನಲಿಂಗ್, ಟೆಲಿಕಮ್ಯೂನಿಕೇಷನ್, ವಿದ್ಯುತ್ ಸರಬರಾಜು ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಜೂನ್‌ನಲ್ಲಿ ಚೀನಾದಿಂದ ಇನ್ನೊಂದು ರೈಲು ಬರಲಿದೆ. ಇದರೊಂದಿಗೆ ಟಿಆರ್‌ಎಸ್‌ಎಲ್‌ನಿಂದ ಎರಡು ಹೆಚ್ಚುವರಿ ರೈಲುಗಳು ಬರಲಿದೆ. ಈ ಮೂರು ರೈಲುಗಳ ಮೂಲಕ ಬಿಎಂಆರ್‌ಸಿಎಲ್ ಎಲ್ಲ ಪರೀಕ್ಷೆಗಳನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.
ಇನ್ನು ಸಿಗ್ನಲಿಂಗ್ ಟೆಸ್ಟ್ ಪ್ರಸ್ತುತ ನಡೆಯುತ್ತಿದೆ. ಬೊಮ್ಮಸಂದ್ರ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ಜಿತೇಂದ್ರ ಝಾ ಪ್ರಕಾರ ಬಿಎಂಆರ್‌ಸಿಎಲ್‌ಗೆ ಇನ್ನು ಹೆಚ್ಚುವರಿ ಏಳು ರೈಲುಗಳ ಅಗತ್ಯವಿದೆ.
ಎಲ್ಲ ಪರೀಕ್ಷೆ ಮುಗಿದು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ಈ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿದೆ. ಮುಂದಿನ ವರ್ಷ ಹೆಚ್ಚುವರಿ ಎಂಟು ರೈಲುಗಳು ಲಭ್ಯವಾದ ಬಳಿಕ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೊಂದು ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ.