ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸುವ ಅವಕಾಶ ಸಿಕ್ಕಿದೇ ನನ್ನ ಸೌಭಾಗ್ಯ. ಇದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಸಲ್ಲುವ ಗೌರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಶ್ವ ಬಸವ ಧರ್ಮ ಟ್ರಸ್ಟ್, ಬಸವಕಲ್ಯಾಣ ಅನುಭವ ಮಂಟಪ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಬಸವಕಲ್ಯಾಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
“ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕೆಂಬ ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು ಸೇರಿದಂತೆ ನಾಡಿನ ಅನೇಕ ಪೂಜ್ಯರು ನನಗೆ ಸೂಚಿಸಿದ ಬೆನ್ನಲೇ ಹಿಂದೆ ಮುಂದೆ ಯೋಚಿಸದೇ ಮನಸ್ಸಿನಲ್ಲಿ ತೀರ್ಮಾನಿಸಿದೆ. ಇದಕ್ಕೆ ಸಚಿವ ಸಂಪುಟದ ಎಲ್ಲಾ ಸಚಿವರು ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ಇಡೀ ದೇಶದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕೆಂದು ಒಕ್ಕೊರಲಿನಿಂದ ಒಪ್ಪಿಗೆ ನೀಡಿದರು. ಕನ್ನಡಿಗರ, ಭಾರತೀಯರ ಅಭಿಮಾನದ ಸಂಕೇತವಾಗಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿದ್ದೇವೆ” ಎಂದರು.
“ವಿಶ್ವಗುರು ಬಸವಣ್ಣನವರ ಭಾವಚಿತ್ರ ನೋಡಿದ ತಕ್ಷಣ ನಮಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಬೇಕೆಂಬ ನಿಟ್ಟಿನಲ್ಲಿ ʼವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕʼ ಎಂಬ ಭಾವಚಿತ್ರವನ್ನು ರಾಜ್ಯ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ನಮ್ಮ ಸರ್ಕಾರ ಆದೇಶಿಸಿದೆ” ಎಂದು ನುಡಿದರು.
ನಾನು ಬಸವಾದಿ ಶರಣರ ಅನುಯಾಯಿ ಎಂದ ಸಿದ್ದರಾಮಯ್ಯ
ನಾನು ಬಸವಾದಿ ಶರಣರ ಅನುಯಾಯಿ, ಆ ಕಾರಣಕ್ಕೆ ನಾನು 2023 ಮೇ 13 ರಂದು ವಿಶ್ವಗುರು ಬಸವಣ್ಣನವರ ಜಯಂತಿ ದಿನವೇ ಬಸವಣ್ಣನವರ ಮೂರ್ತಿಗೆ ಹೂಮಾಲೆ ಹಾಕಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಅದಕ್ಕೆ ಲಕ್ಷಾಂತರ ಜನತೆ ಸಾಕ್ಷಿಯಾಗಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರ ನೇತ್ರತ್ವದಲ್ಲಿ ಸಾಮಾಜಿಕ ಬದಲಾವಣೆಗಾಗಿ ಜಾತಿ, ವರ್ಗ, ವರ್ಣ, ಮೌಢ್ಯ, ಕಂದಾಚಾರ ರಹಿತವಾದ ಮಾನವೀಯತೆ ಹಾಗೂ ಮನುಷ್ಯರ ಸಮಾಜ ನಿರ್ಮಿಸಲು ಬಸವಾದಿ ಶರಣರು ಕ್ರಾಂತಿ ನಡೆಸಿದರು. ನನಗೆ ಬುದ್ದ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿ ಪ್ರೇರಣೆ ಹಾಗೂ ಸ್ಪೂರ್ತಿ, ಅವರ ವಿಚಾರಗಳು ಅಂದು, ಇಂದು ಹಾಗೂ ಎಂದೆಂದಿಗೂ ಪ್ರಸ್ತುತ” ಎಂದು ಸಿದ್ದರಾಮಯ್ಯ ಹೇಳಿದರು.

“12ನೇ ಶತಮಾನದಲ್ಲಿ ಅನುಭವ ಮಂಪಟ ಮೂಲಕ ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಹಾಗೂ ಸಂಸತ್ತು ಹಾಕಿಕೊಟ್ಟ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆ. ಸಾಮಾಜಿಕ, ಆರ್ಥಿಕ ವ್ಯವಸ್ಥೆ ಪರಿಹಾರ ಸೂಚಿಸುವ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಬಸವಾದಿ ಶರಣರ ನುಡಿದ ಅಂಶಗಳು ಅಡಕವಾಗಿವೆ. ಸಮಾಜದಲ್ಲಿ ಪ್ರತಿಯೊಬ್ಬರೂ ದುಡಿಮೆ ಮಾಡಬೇಕು, ಅದನ್ನು ಹಂಚಬೇಕು ಎಂಬ ಸರ್ವರಿಗೂ ಸಮಪಾಲು-ಸಮಬಾಳು ಎಂಬ ತತ್ವ ಪ್ರತಿಪಾದಿಸಿದ ಬಸವಾದಿ ಶರಣರು ಈ ದೇಶಕ್ಕೆ ಕೊಟ್ಟ ಕೊಡುಗೆ ಹಾಗೂ ಮೌಲ್ಯಗಳು ಎಂದರೆ ಕಾಯಕ ಮತ್ತು ದಾಸೋಹ” ಎಂದರು.
ರಾಜಕೀಯ ಸ್ವಾತಂತ್ರ್ಯ ಜತೆಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನತೆ ಬಂದರೆ ಮಾತ್ರ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದಕ್ಕೆ ಸಾರ್ಥಕ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯನ್ನು ಬಸವಾದಿ ಶರಣರು ಅಂದಿನ ಕಾಲದಲ್ಲೇ ಹೇಳಿದರು ಎಂಬ ವಿಚಾರಗಳು ಮರೆಯಲು ಸಾಧ್ಯವಿಲ್ಲ.
ವಿದ್ಯಾವಂತರಲ್ಲಿ ವೈಚಾರಿಕತೆ ಕೊರತೆ :
“ಸಮಾಜದಲ್ಲಿ ಜಾತಿ, ವರ್ಗ, ವರ್ಣ, ಮೌಢ್ಯ ಹಾಗೂ ಕಂದಾಚಾರ ಅಳಿದು ಪ್ರತಿಯೊಬ್ಬರಲ್ಲೂ ವೈಚಾರಿಕ ಪ್ರಜ್ಞೆ ಬೆಳೆಯಬೇಕೆಂದು ಬಸವಾದಿ ಶರಣರ ಆಶಯವಾಗಿತ್ತು. ಆದರೆ ಇಂದಿನ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆದಿಲ್ಲ, ಅನೇಕ ಜನ ವಿದ್ಯಾವಂತರೇ ಕಂದಾಚಾರ, ಮೌಢ್ಯ, ಗೊಡ್ಡು ಸಂಪ್ರಾದಾಯಗಳಿಗೆ ಜೋತು ಬಿದ್ದಿರುವ ಪರಿಸ್ಥಿತಿ ಕಾಣುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಹೋಗಲಾಡಿಸಿ ಸಮಸಮಾಜ ನಿರ್ಮಿಸುವ ಕನಸು ಕಂಡಿದ್ದರು. ಆದರೆ ಇನ್ನೂ ಸಮ-ಸಮಾಜ ಆಗಿಲ್ಲ, ಎಲ್ಲರಿಗೂ ಸಮಾನತೆ ಸಿಕ್ಕಿಲ್ಲ. ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತ್ರತ್ವ ಎಂಬ ಅಂಶಗಳು ಅಂದಿನ ಬಸವಾದಿ ಶರಣರು ಅನುಭವ ಮಂಟಪದಲ್ಲಿ ಎಲ್ಲಾ ಜಾತಿ, ಸಮುದಾಯದವರಿಗೆ, ಅದರಲ್ಲೂ ಸ್ತ್ರೀಯರಿಗೆ ಸಮಾನತೆ ಕಲ್ಪಿಸಿದರು. ಅನುಭವ ಮಂಟಪದಲ್ಲಿ ಎಲ್ಲರೊಂದಿಗೆ ಕೆಳ ಸಮುದಾಯದ ಜನರು ಸಹ ವಚನಗಳು ರಚಿಸಿ ಸಮಾಜಕ್ಕೆ ನೀತಿ ಪಾಠ ಬೋಧಿಸಿದ ಮಹತ್ವದ ಕಾರ್ಯ ಮಾಡಿದರು. ಆದರೆ ಶರಣರ ಕನಸು ಕನಸಾಗಿಯೇ ಉಳಿದಿದೆ” ಎಂದರು.

“ಬಸವಾದಿ ಶರಣರು ʼಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೆ ಹೊನ್ನ ಕಳಸವಯ್ಯ, ಕೂಡಲಸಂಗಮ ದೇವಾʼ ಎಂದು ನಮ್ಮ ಆತ್ಮದಲ್ಲಿಯೇ ದೇವರನ್ನು ಕಾಣುವಂತೆ ನುಡಿದಿದ್ದರು. ದೇವರಿಗೆ ವಂಚಿಸಿ ತೀರ್ಥಯಾತ್ರೆ ಮಾಡಿದರೆ ಎಲ್ಲವೂ ಪರಿಹಾರ ಆಗುತ್ತದೆ ಎಂಬುದು ಅತೀ ಮೂರ್ಖತನ. ʼಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕʼ ಎಂಬ ಶರಣರು ನುಡಿದಂತೆ ಸ್ವರ್ಗ-ನರಕ ಎಂಬುದು ನಡೆ-ನುಡಿಯಲ್ಲೇ ಇದೆ. ದಯವೇ ಧರ್ಮದ ಮೂಲವ ಎಂದು ಧರ್ಮ ಸತ್ವ ದಯೆದಲ್ಲಿದೆ ಎಂಬ ಮಹತ್ತರವಾದ ಸಂದೇಶ ನೀಡಿದವರು ಶರಣರು” ಎಂದು ನುಡಿದರು.
ಕನ್ನಡ ಸಾಹಿತ್ಯಕ್ಕೆ ಮಹಾನ್ ಕೊಡುಗೆ ವಚನ ಸಾಹಿತ್ಯ :
ಧರ್ಮ, ಭಾಷೆ ಹಾಗೂ ಸಂಸ್ಕೃತಿ ಎಂಬುದು ಜನರ ಆಡುಭಾಷೆಯಲ್ಲೇ ಇರಬೇಕೆಂಬ ನಿಟ್ಟಿನಲ್ಲಿ ಬಸವಾದಿ ಶರಣರು ತಮ್ಮ ಅನುಭಾವದ ನುಡಿಗಳಾಗಿ ಪರಿವರ್ತನೆಯಾದ ವಚನಗಳು ಆಡು ಭಾಷೆಯಲ್ಲೇ ರಚಿಸಿ ಎಲ್ಲರಿಗೂ ಸರಳವಾಗಿ ಅರ್ಥವಾಗುವಂತೆ ಧರ್ಮ ಬೋಧಿಸಿದರು.
“ಇಂದಿನ ಕೆಲ ರಾಜಕಾರಣಿಗಳು ನುಡಿದಂತೆ ನಡೆಯುವುದಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆಯಲು ಪ್ರಯತ್ನಿಸುತ್ತಿದ್ದೇವೆ. 2013ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಜನರಿಗೆ ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ಜನರ ವಿಶ್ವಾಸ, ಪ್ರೀತಿ ಗಳಿಸಿದ್ದೇವೆ. 2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಐದು ಗ್ಯಾರಂಟಿಗಳನ್ನು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಾವು 8 ತಿಂಗಳಲ್ಲಿ ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಇದಕ್ಕಾಗಿ 35 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಮುಂದಿನ 2024-25 ಸಾಲಿನಲ್ಲಿ 56 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ. ಬಡವರು, ರೈತರು, ಶ್ರಮಿಕರು, ದಲಿತರು, ಹಿಂದುಲಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ನಮ್ಮ ಮಾಲಿಕರು, ಅವರು ಆರ್ಥಿಕ, ಸಾಮಾಜಿಕವಾಗಿ ಸಬಲಗೊಳಿಸಲು ನಾವು ನುಡಿದಂತೆ ನಡೆಯುತ್ತಿದ್ದೇವೆ” ಎಂದರು.
ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ:
“ಇಂದು ನಡೆದ ಅಭಿನಂದನೆ ನನ್ನ ಜೀವನದಲ್ಲಿ ಚಿರಸ್ಮರಣೆ ಘಟನೆಯಾಗಿದೆ, ಇದು ನಾಡಿನ ಏಳು ಕೋಟಿ ಜನರಿಗೆ ಅರ್ಪಿಸುತ್ತೇನೆ ಎಂದರು. ಕೆಲವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಮುಂದಿನ ಐದು ವರ್ಷಗಳ ಕಾಲ ಎಲ್ಲ ಗ್ಯಾರಂಟಿ ಮುಂದುವರೆಯುತ್ತವೆ ಎಂದರು. ಭಾಲ್ಕಿ ಶ್ರೀಗಳ ಮನವಿಯಂತೆ ಮುಂದಿನ ವರ್ಷ ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಎಲ್ಲ ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ, ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ , ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಪೌರಾಡಳಿತ, ಹಜ್ ಸಚಿವರಾದ ರಹೀಖಾನ್, ಮಾಜಿ ಸಚಿವರಾದ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ವಿಜಯ್ ಸಿಂಗ್, ಶಾಸಕ ಚನ್ನಾರೆಡ್ಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ | ಸಿಎಂ ಸಿದ್ದರಾಮಯ್ಯಗೆ 160 ಮಠಾಧೀಶರಿಂದ ಅಭೂತಪೂರ್ವ ಸನ್ಮಾನ
ಬಸವಕಲ್ಯಾಣ ಅನುಭವ ಮಂಟಪದ ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ, ಜಗದ್ಗುರು ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು, ಜಗದ್ಗುರು ಡಾ.ಮಾತೆ ಗಂಗಾದೇವಿ, ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು, ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿ ಸೇರಿದಂತೆ 150ಕ್ಕೂ ಹೆಚ್ಚು ಶರಣ ಗುರು, ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
🙏ಶರಣುಶರಣಾರ್ಥಿಗಳು ಆದಷ್ಟುಬೇಗ ವಚಣ ವಿಶ್ವವಿಧ್ಯಾಲಯ ಆಗಬೇಕು.ವೈಚಾರಿಕ ಅರಿವು ಎಲ್ಲಾಸಮಾಜದ ಎಲ್ಲಾವರ್ಗದ ಶರಣಬಂದುಗಳಿಗೆ ತಲುಪಿ ಮೌಢ್ಯ ಕಂದಾಚಾರ ದೂರಾಗಬೇಕು.ಸಿದ್ದರಾಮಯ್ಯನವರು ನುಡಿದಂತೆ ನಡೆಯುವವರು ಇವರಿಂದ ಮಾತ್ರ ಇದು ಸಾಧ್ಯ.ಜೈ ಬಸವ.ಜೈ ಸಿದ್ದರಾಮಯ್ಯ.🙏
Due do code of conduct am not committed here
All the best . I have no any phone pay etc
Send u r phone pay number