ಪತ್ನಿ ಮನೆಗೆಲಸ ಮಾಡಬೇಕು ಎಂದು ಪತಿ ಬಯಸುವುದು ಹಿಂಸೆಯೆಂದು ನಾವು ಪರಿಗಣಿಸಲಾಗದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯಿಂದ ವಿಚ್ಛೇದನ ಕೋರಿದ್ದ ಅರ್ಜಿಯನ್ನು ಪುರಸ್ಕರಿಸಿದೆ. ಜೊತೆಗೆ ದಾಂಪತ್ಯ ಜೀವನದಲ್ಲಿ ಜವಾಬ್ದಾರಿಯನ್ನು ಹಂಚಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.
ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಅವರಿದ್ದ ಪೀಠವು, “ವಿವಾಹಿತ ಮಹಿಳೆ ಮನೆಗೆಲಸ ಮಾಡುವಂತೆ ಪತಿ ಹೇಳಿದರೆ, ಅದನ್ನು ಮನೆಯ ನೌಕರರಿಗೆ ಹೇಳುವ ಕೆಲಸದ ಜೊತೆ ಹೋಲಿಸಲಾಗದು. ಆ ಕೆಲಸವನ್ನು ಆಕೆಯು ಆ ಮನೆಯ, ಕುಟುಂಬದ ಮೇಲೆ ಹೊಂದಿರುವ ಪ್ರೀತಿ, ವಾತ್ಸಲ್ಯದಿಂದ ಮಾಡುವುದು ಎಂದು ಪರಿಗಣಿಸಲಾಗುತ್ತದೆ,” ಎಂದಿದೆ.
“ಇಂತಹ ಸ್ಥಿತಿಯಲ್ಲಿ ಪತಿಯು ಹಣಕಾಸು ಜವಾಬ್ದಾರಿಯನ್ನು ಹೊಂದಿರಬಹುದು, ಪತ್ನಿ ಮನೆಯ ಕೆಲಸಗಳ ಜವಾಬ್ದಾರಿಯನ್ನು ಹೊಂದಿರಬಹುದು. ಈ ಪ್ರಕರಣದಲ್ಲಿ ಅದೇ ಸ್ಥಿತಿ ಇರುವುದು. ಒಂದು ಮನೆಯಲ್ಲಿ ಕೆಲಸವನ್ನು ಹಂಚಿಕೊಂಡು ಮಾಡುವಾಗ ಪತಿಯು ಪತ್ನಿಯಲ್ಲಿ ಮನೆಗೆಲಸ ಮಾಡಲು ಹೇಳಿದರೆ ಅದು ಹಿಂಸೆ ಎನ್ನಲಾಗದು,” ಎಂದು ದೆಹಲಿ ಹೈಕೋರ್ಟ್ ಪೀಠ ಪುನರುಚ್ಛರಿಸಿದೆ.
“ಮದುವೆ ಎಂದರೆ ಜವಾಬ್ದಾರಿಯನ್ನು, ಪ್ರೀತಿಯನ್ನು ಹಂಚಿಕೊಳ್ಳುವುದು. ಇಬ್ಬರೂ ಕೂಡಾ ತಮ್ಮ ಸಾಮರ್ಥ್ಯಕ್ಕೆ ಮತ್ತು ಸಂದರ್ಭಕ್ಕೆ ಸರಿಯಾಗಿ ಈ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು,” ಎಂದು ಕೋರ್ಟ್ ತಿಳಿಸಿದೆ.
ಅರ್ಜಿದಾರರು, “ನನ್ನ ಪತ್ನಿ ಮನೆಯ ಕೆಲಸ ಹಂಚಿಕೊಂಡು ಮಾಡುವುದಿಲ್ಲ, ಎಲ್ಲ ಕಾರ್ಯವನ್ನು ನಾನೇ ಮಾಡಬೇಕು, ಕೆಲಸ ಮಾಡಲು ಹೇಳಿದರೆ ಆತ್ಮಹತ್ಯೆಯ ಬೆದರಿಕೆ ಹಾಕುತ್ತಾಳೆ, ಸುಳ್ಳು ಆರೋಪಗಳನ್ನು ಮಾಡುತ್ತಾಳೆ,” ಎಂದು ತಿಳಿಸಿದ್ದಾರೆ. ಆದರೆ ಪತ್ನಿ ಈ ಆರೋಪವನ್ನು ಅಲ್ಲಗಳೆದಿದ್ದು, ವರದಕ್ಷಿಣೆಯ ಆರೋಪವನ್ನು ಪತಿಯ ಮೇಲೆ ಹೊರೆಸಿದ್ದಾರೆ.
ಇದಕ್ಕೆ ವಿಭಿನ್ನವಾಗಿ ಇತ್ತೀಚೆಗೆ ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್, “ಮಹಿಳೆಯು ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಾಳೆ. ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣ ಸಮಯದ ಕೆಲಸವಾಗಿದೆ. ಮಕ್ಕಳ ಪಾಲನೆಯಲ್ಲಿ ತೊಡಗಿರುವ ಪತ್ನಿಗೆ ಪತಿಯು ಹಣ ನೀಡಬೇಕು” ಎಂದು ಹೇಳಿತ್ತು.