ಬೈಕ್‌ಗಳಂತಹ ಸಾರಿಗೆಯೇತರ ವಾಹನಗಳನ್ನು ಟ್ಯಾಕ್ಸಿ ಸೇವೆಗೆ ಬಳಕೆ ಮತ್ತು ಅವುಗಳ ಕಾರ್ಯಾಚರಣೆಗೆ ಖಾಸಗಿ ಅಪ್ಲಿಕೇಶನ್‌ಗಳನ್ನು ಬಳಸುವುದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಎಲ್ಲ ರೀತಿಯ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.
ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪಾ ವಿ.ಎಸ್ ಅವರು ಮಾರ್ಚ್ 6 ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಓಲಾ, ಉಬರ್, ರ್ಯಾಪಿಡೋಗಳ ಬೈಕ್ ಟ್ಯಾಕ್ಸಿ ಸೇವೆಗಳಿಗೆ ತೀವ್ರ ಹಿನ್ನಡೆಯಾಗಿದೆ.
ಸಾರ್ವಜನಿಕ ಸಾರಿಗೆಗಾಗಿ ಹಾಗೂ ಸ್ವಯಂ ಉದ್ಯೋಗಾವಕಾಶ ಕೊಡುವ ಉದ್ದೇಶದಿಂದ 2021ರಲ್ಲಿ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿ ಮಾಡಲಾಗಿತ್ತು. ಈಗಾಗಲೇ ಓಲಾ, ಉಬರ್, ರ‍್ಯಾಪಿಡೋದಿಂದ ಬೈಕ್ ಸೇವೆ ಚಾಲನೆಯಲ್ಲಿತ್ತು.
ಆದರೆ, ಆಟೋ ಮತ್ತು ಟ್ಯಾಕ್ಸಿ ಸೇವೆಗಳಿಂದ ತೀವ್ರ ವಿರೋಧ ಮತ್ತು ಒತ್ತಡದಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ, ಬೈಕ್ಸ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ದ್ವಿಚಕ್ರ ವಾಹನ ಬೈಕ್ ಬಾಡಿಗೆ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತವಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೆಲವು ಖಾಸಗಿ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಉಲ್ಲಂಘಿಸಿ ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ಅಕ್ರಮವಾಗಿ ಬಳಸುತ್ತಿರುವುದು ಕಂಡುಬಂದಿದೆ.
ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯು ಬೈಕ್ ರೈಡರ್‌ಗಳು ಹಾಗೂ ಆಟೋ, ಕ್ಯಾಬ್ ಚಾಲಕರು, ಖಾಸಗಿ ಸಾರಿಗೆ ಸಂಸ್ಥೆಗಳ ಸದಸ್ಯರ ನಡುವೆ ಘರ್ಷಣೆ ಮತ್ತು ಹೊಡೆದಾಟಗಳಿಗೆ ಕಾರಣವಾಗಿದೆ. ಇಂತಹ ಹಲವಾರು ಘಟನೆಗಳು ನಡೆದಿದ್ದು, ದೂರುಗಳು ಮತ್ತು ಪ್ರಕರಣಗಳು ದಾಖಲಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಾಲಕ ರಹಿತ ಮೆಟ್ರೋ ಪ್ರಾಯೋಗಿಕ ಸಂಚಾರ
ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಜಾರಿಗೊಳಿಸಿದ್ದ ಮೊದಲ ರಾಜ್ಯವಾಗಿತ್ತು. ‘ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021’ ನೀತಿಯು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು. ಅಲ್ಲದೆ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಬೈಕ್ ಟ್ಯಾಕ್ಸಿಗಳ ಅಗತ್ಯವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿತ್ತು. ಆದರೆ, ನಗರದ ಮೆಟ್ರೊ, ಬಿಎಂಟಿಸಿ ಮತ್ತು ರೈಲು ಬಳಕೆದಾರರಿಗೆ ಬೈಕ್ ಟ್ಯಾಕ್ಸಿಗಳು ಹೆಚ್ಚಿನ ಸಹಾಯ ಮಾಡುತ್ತಿಲ್ಲ ಎಂದು ಸಮಿತಿ ವರದಿ ನೀಡಿತ್ತು.
ಹೀಗಾಗಿ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಹಿಂತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ.