ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಟ್ಯಾಂಕರ್ ನೀರು ದುಬಾರಿಯಾಗಿದೆ. ಈ ಮದ್ಯೆ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ವತಿಯಿಂದ ವಾರ್ಡ್‌ವಾರು ನೋಡಲ್ ಅಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಪ್ರಸ್ತುತ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವ ಹಿತದೃಷ್ಟಿಯಿಂದ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಈ ಎರಡು ಇಲಾಖೆಗಳ ಅಧಿಕಾರಿಗಳು ತುರ್ತು ಅಗತ್ಯ ಕ್ರಮ ಕೈಗೊಂಡು, ನೀರಿನ ಸಮಸ್ಯೆಯನ್ನು ಬಗೆಹರಿಸಲು ರಾಜರಾಜೇಶ್ವರಿ ವಲಯದ 14 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ | ಮತ್ತೆ ಮೂವರು ಶಂಕಿತರನ್ನು ವಶಕ್ಕೆ ಪಡೆದ ಎನ್‌ಐಎ
ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ, ಸಂಘ/ಸಂಸ್ಥೆಗಳಿಂದ ದೂರುಗಳು ಬಂದ ತಕ್ಷಣ ಜಲಮಂಡಳಿಯ ಅಭಿಯಂತರರೊಂದಿಗೆ ಸಂಪರ್ಕ ಸಾಧಿಸಿ, ಸಮನ್ವಯದೊಂದಿಗೆ ಬೋರ್‌ವೆಲ್‌ಗಳಲ್ಲಿ ನೀರಿಲ್ಲದ ಕಡೆ ನೀರಿನ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.
ಕುಡಿಯುವ ನೀರಿನ ಸಮಸ್ಯೆಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ರವರಿಗೆ ತಿಳಿಸಿದೆ.