370ನೇ ವಿಧಿ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು
ಸಂವಿಧಾನದ 370ನೇ ವಿಧಿ ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಗುರುವಾರ ಪ್ರಧಾನಿ ಮೋದಿಯವರು ಶ್ರೀನಗರದಲ್ಲಿ ರ್‍ಯಾಲಿಯನ್ನು ನಡೆಸಿದರು. ಆದರೆ ವಿದೇಶಿ ಸುದ್ದಿ ಸಂಸ್ಥೆಗಳ ಪತ್ರಕರ್ತರನ್ನು ಕಾರ್ಯಕ್ರಮದಿಂದ ಹೊರಗಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದ್ದಾರೆ.
ಈ ಕುರಿತು ವರದಿ ಮಾಡಿರುವ ಪ್ರಖ್ಯಾತ ನ್ಯೂಸ್ ವೆಬ್‌ಸೈಟ್ ’ನ್ಯೂಸ್ ಲಾಂಡ್ರಿ’ಯು ಸರ್ಕಾರ ಮತ್ತು ಮಾಧ್ಯಮದ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿವೆ ಎಂದು ಸ್ಪಷ್ಟಪಡಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370ನೇ ವಿಧಿಯನ್ನು ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು 2019ರ ಆಗಸ್ಟ್ 5ರಂದು. ಆ ನಂತರದಲ್ಲಿ ಮೋದಿಯವರು ಕಾಶ್ಮೀರಕ್ಕೆ ಕಾಲಿಟ್ಟಿರಲಿಲ್ಲ.
ರ್‍ಯಾಲಿಗೆ ಒಂದು ವಾರ ಮುಂಚಿತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಕಾರ್ಯಕ್ರಮದ ವರದಿ ಮಾಡಲು ಪಾಸ್‌ಗಳನ್ನು ಪಡೆಯುವಂತೆ ಪತ್ರಕರ್ತರಿಗೆ ತಿಳಿಸಿತ್ತು. ಅಂತೆಯೇ ಪತ್ರಕರ್ತರಿಂದ 160 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 127 ಪಾಸ್‌ಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿತ್ತು.
ಅಮೆರಿಕ ಮೂಲದ ಎಪಿ, ಫ್ರಾನ್ಸ್ ಮೂಲದ ಎಎಫ್‌ಪಿ ಮತ್ತು ರಷ್ಯಾದ ಸ್ಪುಟ್ನಿಕ್‌ನಂತಹ ಸುದ್ದಿ ಸಂಸ್ಥೆಗಳನ್ನು ಕಾರ್ಯಕ್ರಮದಿಂದ ಹೊರಗೆ ಇಡಲಾಗಿದೆ ಎಂದು ’ನ್ಯೂಸ್ ಲಾಂಡ್ರಿ’ ವರದಿ ತಿಳಿಸಿದೆ.
“ಅರ್ಜಿಗಳನ್ನು ಸ್ವೀಕರಿಸಿದ ನಂತರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅರ್ಜಿಗಳ ಪರಿಶೀಲನೆಗಾಗಿ ಪೊಲೀಸ್ ಇಲಾಖೆಯೊಂದಿಗೆ ವಿವರಗಳನ್ನು ಹಂಚಿಕೊಂಡಿದೆ. 160ರಲ್ಲಿ 127 ಹೆಸರುಗಳನ್ನು ಮಾತ್ರ ಪೊಲೀಸ್ ಇಲಾಖೆ ಅಂತಿಮಗೊಳಿಸಿತ್ತು. ಯಾವುದೇ ವಿದೇಶಿ ಮಾಧ್ಯಮಗಳಿಗೆ ಪಾಸ್‌ಗಳನ್ನು ನೀಡಲಾಗಿಲ್ಲ” ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತ ಮೂಲಗಳು ಸ್ಪಷ್ಟಪಡಿಸಿವೆ.
ಜಮ್ಮು ಕಾಶ್ಮೀರದ ವಾರ್ತಾ ಇಲಾಖೆಯ ನಿರ್ದೇಶಕ ಜತಿನ್ ಕಿಶೋರ್ ಪ್ರತಿಕ್ರಿಯಿಸಿ, “ಯಾವುದೇ ವಿದೇಶಿ ಮಾಧ್ಯಮಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆಯೇ?” ಎಂಬುದನ್ನು ಖಚಿತ ಪಡಿಸಿಲ್ಲ. “ವಿದೇಶಿ ಮಾಧ್ಯಮಗಳಿಗೆ ಅನುಮತಿ ನೀಡದಿರುವುದು ಸರಿ ಎಂದು ನಾನು ಭಾವಿಸುವುದಿಲ್ಲ. ನಾವು ಪಡೆದ ಪಟ್ಟಿಯು ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯುರೊ (ಅಂದರೆ ಪಿಐಬಿ) ಮೂಲಕ ಬಂದಿದೆ” ಎಂದಿದ್ದಾರೆ.
ಆದರೆ ಪಿಐಬಿ ಮಹಾನಿರ್ದೇಶಕ ಮನೀಶ್ ದೇಸಾಯಿ ಪ್ರತಿಕ್ರಿಯಿಸಿ, “ಪಿಐಬಿಯ ಪ್ರಧಾನ ಕಚೇರಿಯು ಈ ಪಟ್ಟಿಯನ್ನು ತಯಾರಿಸುವಲ್ಲಿ ಪಾತ್ರವನ್ನು ವಹಿಸಿಲ್ಲ. ಸ್ಥಳೀಯ ಮಾಧ್ಯಮಗಳ ವಿಚಾರವನ್ನು ಸಂಬಂಧಪಟ್ಟ ರಾಜ್ಯವು ನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ.
ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿಯವರು ಪಾಲ್ಗೊಳ್ಳುವ ಕಾರ್ಯಕ್ರಮಗಳ ಪಾಸ್‌ಗಳನ್ನು ಡಿಐಪಿಆರ್ (ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ) ವಿತರಣೆ ಮಾಡುತ್ತದೆ ಎಂದು ಪತ್ರಕರ್ತರು ಹೇಳಿಕೊಂಡಿದ್ದಾರೆ.
ಗುರುವಾರ ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ‘ವಿಕ್ಷಿತ್ ಭಾರತ್, ವಿಕ್ಷಿತ್ ಜಮ್ಮು ಮತ್ತು ಕಾಶ್ಮೀರ’ ಎಂಬ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಮಾತನಾಡಿದರು. 6,400 ಕೋಟಿ ರೂಪಾಯಿಗಳ ವೆಚ್ಚದ ಕೃಷಿ ಮತ್ತು ಪ್ರವಾಸೋದ್ಯಮ ಯೋಜನೆಗಳಿಗೆ ಚಾಲನೆ ನೀಡಿದರು. “ಆರ್ಟಿಕಲ್ 370ರ ರದ್ದು ನಂತರ ಜಮ್ಮು ಮತ್ತು ಕಾಶ್ಮೀರವು ಮುಕ್ತವಾಗಿ ಉಸಿರಾಡುತ್ತಿದೆ” ಎಂದು ಮೋದಿ ಹೇಳಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತ ಸೇರಿದಂತೆ ನಿರ್ಬಂಧಿತ ಅಥವಾ ಸಂರಕ್ಷಿತ ಪ್ರದೇಶಗಳಿಗೆ ಹೋಗುವ ವಿದೇಶಿ ಮೂಲದ ಪತ್ರಕರ್ತರಿಗೆ ಮೊದಲಿನಿಂದಲೂ ಕೆಲವೊಂದು ನಿರ್ಬಂಧಗಳಿವೆ. ಪತ್ರಕರ್ತರಾಗಿ ಕೆಲಸ ಮಾಡುವ ವಿದೇಶಿ ಪ್ರಜೆಗಳು ಹೋಗಬೇಕೆಂದರೆ ಎಂಟು ವಾರಗಳ ಮೊದಲು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ವಿದೇಶಿ ಪ್ರೆಸ್‌ಗಳಿಗಾಗಿ ಕೆಲಸ ಮಾಡುವ ಭಾರತೀಯ ಪ್ರಜೆಗಳಿಗೆ, ಅಂತಹ ಯಾವುದೇ ನಿರ್ಬಂಧವು ಅನ್ವಯಿಸುವುದಿಲ್ಲ. ಆದರೆ ವಿದೇಶಿ ಪ್ರೆಸ್‌ಗಳಿಗಾಗಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳಿಗೂ ಗುರುವಾರ ನಡೆದ ಮೋದಿ ಕಾರ್ಯಕ್ರಮಕ್ಕೆ ಪ್ರವೇಶ ಸಿಕ್ಕಿರಲಿಲ್ಲ.
“ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯು ಮಾನ್ಯತೆ ಪಡೆದ ಪತ್ರಕರ್ತರ ವಿವರಗಳನ್ನು ಪಡೆಯುತ್ತದೆ. ಈ ಬಾರಿಯೂ ಅದೇ ನಡೆದಿದೆ. ಆದರೆ ಇಲಾಖೆಯು ವಿದೇಶಿ ಮಾಧ್ಯಮಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಎಲ್ಲರಿಗೂ ಪಾಸ್ ನೀಡಿದೆ” ಎಂದು ಅರ್ಜಿ ತಿರಸ್ಕೃತಗೊಂಡ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ.
“ವಿದೇಶಿ ಮಾಧ್ಯಮಗಳಿಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ” ಎಂದು ವಿದೇಶಿ ಮಾಧ್ಯಮದ ಹಿರಿಯ ಪತ್ರಕರ್ತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. “ನಾವು ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಯಾವುದೇ ವಿದೇಶಿ ಮಾಧ್ಯಮಗಳಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ಮಾಧ್ಯಮಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಮುಂದುವರಿದು ಅವರು, “ಆ ಬೆಳವಣಿಗೆ ನಮಗೆ ಆಶ್ಚರ್ಯ ತಂದಿಲ್ಲ. ಕಾಶ್ಮೀರದಲ್ಲಿ ನಡೆಯುವ ಯಾವುದಕ್ಕೂ ನಮಗೆ ಪ್ರವೇಶವಿಲ್ಲ. ಇದು ಅನಿರೀಕ್ಷಿತವಾದ ವಿಷಯವಲ್ಲ. ವಿದೇಶಿ ಮಾಧ್ಯಮದ ಪ್ರತಿನಿಧಿಗಳಾದಾಗ, ನೀವು ಅಂತಹ ನಿರಾಕರಣೆಗಳನ್ನು ಸ್ವೀಕರಿಸಿಯೇ ಬದುಕಲು ಕಲಿಯುತ್ತೀರಿ” ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ ವಾರ್ತಾ ಇಲಾಖೆಯ ಅಧಿಕಾರಿ ಕಿಶೋರ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆದರೆ ಯಾರ್‍ಯಾರಿಗೆ ಅನುಮತಿ ನೀಡಲಾಗಿದೆ ಎಂಬ ಪಟ್ಟಿಯನ್ನು ನೀಡಲು ಅವರು ಹಿಂದೇಟು ಹಾಕಿದ್ದಾರೆ.
ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ವಿದೇಶಿ ಪ್ರಜೆಗಳಿಗೆ ಕಳೆದ ವರ್ಷ ಜಿ20 ಶೃಂಗಭೆಯ ಹಿನ್ನೆಲೆಯಲ್ಲಿ ಶ್ರೀನಗರಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಪ್ರವೇಶ ನಿರಾಕರಣೆಯ ಪ್ರವೃತ್ತಿಯಿಂದಾಗಿ 2019 ರಿಂದಲೂ ವಿದೇಶಿ ಪತ್ರಕರ್ತರು ಜಮ್ಮು ಮತ್ತು ಕಾಶ್ಮೀರದ ವಿಷಯಗಳನ್ನು ವರದಿ ಮಾಡುವುದು ಕೂಡ ಅಪರೂಪವಾಗಿದೆ.
ಬುಧವಾರ ತೆಲಂಗಾಣದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, “ನನ್ನ ಸಾರ್ವಜನಿಕ ಸೇವೆಯ ಬಗ್ಗೆ ಮಾಧ್ಯಮಗಳು ಸರಿಯಾಗಿ ಪ್ರಸಾರ ಮಾಡುತ್ತಿಲ್ಲ” ಎಂದಿದ್ದರು.
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಯಾವುದೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿಲ್ಲ. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆದರೆ ಯಾವುದೇ ಪ್ರಶ್ನೆಗಳನ್ನು ಎದುರಿಸಿರಲಿಲ್ಲ.
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿಯುತ್ತಿರುವುದಾಗಿ ಸಮೀಕ್ಷೆಗಳು, ವರದಿಗಳು ಹೇಳುತ್ತಲೇ ಇವೆ. 2023ರ ವಿಶ್ವ ಪತ್ರಿಕಾ ದಿನದ ಸಂದರ್ಭದಲ್ಲಿ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆ ಬಿಡುಗಡೆ ಮಾಡಿದ್ದ ಕೆಲವು ಮಾಹಿತಿಗಳು ಆತಂಕವನ್ನು ಉಂಟು ಮಾಡಿದ್ದವು.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ರಾಷ್ಟ್ರಗಳ ಪೈಕಿ 161ನೇ ಸ್ಥಾನದಲ್ಲಿತ್ತು.
