ಮದುವೆ ತಡವಾಗುತ್ತಿರುವ ಬಗ್ಗೆ ನೊಂದಿದ್ದ ಮಹಿಳೆಯೊಬ್ಬರಿಗೆ ಸುಳ್ಳು ಹೇಳಿ ಜ್ಯೋತಿಷಿಯೊಬ್ಬ ವಂಚನೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ದಿವ್ಯಾ (28) (ಹೆಸರು ಬದಲಾಯಿಸಲಾಗಿದೆ) ಮೋಸ ಹೋದ ಮಹಿಳೆ. ಈಕೆ ಮೂಲತಃ ಓಡಿಶಾದವರು. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತ ಬೆಂಗಳೂರು ನಗರದ ವರ್ತೂರು ಬಳಿಯ ಗುಂಜೂರಿನಲ್ಲಿ ನೆಲೆಸಿದ್ದಾರೆ.
ಇವರು ಮದುವೆ ತಡವಾಗುತ್ತಿರುವ ಬಗ್ಗೆ ನೊಂದಿದ್ದರು. ಈ ಹಿನ್ನೆಲೆ, ಮಹಿಳೆ ಇಂಟರ್‌ನೆಟ್ ಮೂಲಕ ಜ್ಯೋತಿಷಿಯೊಬ್ಬರ ನಂಬರ್ ಪಡೆದುಕೊಂಡಿದ್ದರು. ಇಂಟರ್‌ನೆಟ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದ ದಿವ್ಯಾ ಜತೆಗೆ ಆರೋಪಿ ಹಾಗೂ ಆತನ ಸಹಚರರು ಮಾತನಾಡಿ, ”ನಿನ್ನ ಮದುವೆಯಾಗುವುದಕ್ಕೆ ಸಮಸ್ಯೆಯಿದೆ. ಗ್ರಹಗಳ ಕಾಟ ಇದೆ. ಇದಕ್ಕೆ ಕುರಿ ಬಲಿ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳನ್ನು ಮಾಡಿ ಗ್ರಹಗಳ ಓಲೈಕೆ ಮಾಡಬೇಕು” ಎಂದು ಹೇಳಿ ನಂಬಿಸಿದ್ದಾರೆ.
”ಒಂದು ವೇಳೆ ನಾವು ಹೇಳುವ ವಿಧಿ ವಿಧಾನಗಳನ್ನು ಮಾಡದಿದ್ದರೆ, ನೀನು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ” ಎಂದು ಆರೋಪಿಗಳು ಆಕೆಯನ್ನು ಹೆದರಿಸಿದ್ದಾರೆ. ಫೆಬ್ರವರಿ 29 ರಿಂದ ಮಾರ್ಚ್ 2 ರವರೆಗೆ ಹಂತ ಹಂತವಾಗಿ ಸಂತ್ರಸ್ತೆಯಿಂದ ಆರೋಪಿಗಳು ₹42,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಆರೋಪಿಗಳು ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಸಂತ್ರಸ್ತೆಗೆ ಮೋಸ ಹೋಗಿರುವುದು ತಿಳಿದುಬಂದಿದೆ. ಕೂಡಲೇ, ಅವರ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಆರೋಪಿಗಳ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಲವ್ ಗುರು ಮತ್ತು ಪರಮೇಶ್ವರ್ ಪಂಡಿತ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸಂತ್ರಸ್ತೆ ದಿವ್ಯಾ, ”ನನಗೆ ಮದುವೆಯಾಗಲು ಸಮಸ್ಯೆ ಇದೆ ಎಂದು ಭಾವಿಸಿ ನಾನು ಇಂಟರ್‌ನೆಟ್‌ನಲ್ಲಿ ಜ್ಯೋತಿಷಿಗಳನ್ನು ಹುಡುಕಲು ಆರಂಭಿಸಿದೆ. ಅದರಲ್ಲಿ ಪರಮೇಶ್ವರ್ ಪಂಡಿತ್ ಅವರ ಸಂಖ್ಯೆ ಕಂಡುಬಂದಿದೆ. ಬಳಿಕ, ಫೆಬ್ರವರಿ 25ರಂದು ಪರಮೇಶ್ವರ್ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬರಿಗೆ ಕರೆ ಮಾಡಿದ್ದೇನು” ಎಂದು ವಿವರಿಸಿದರು.
”ನಂತರ, ಲವ್ ಗುರು ಎಂಬ ಇನ್ನೊಬ್ಬ ವ್ಯಕ್ತಿ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದ. ಮದುವೆಯಾಗಲು ನನ್ನ ಗ್ರಹಗತಿ ಸರಿಯಿಲ್ಲ ಎಂದು ಹೇಳಿಕೊಂಡಾಗ ನನ್ನ ಸಮಸ್ಯೆಯನ್ನು ಪರಿಹರಿಸಲು ಅವರು ನನ್ನನ್ನು ಅಘೋರಿಗಳ ಬಳಿಗೆ ಕರೆದುಕೊಂಡು ಹೋಗಬೇಕು. ನಾನು ಅಘೋರಿಗಳ ಮುಂದೆ ಕುರಿಯನ್ನು ಬಲಿ ಕೊಡಬೇಕು ಎಂದು ಹೇಳಿದ್ದರು. ನನಗೆ ದೊಡ್ಡ ಸಮಸ್ಯೆಗಳಿವೆ” ಎಂದು ಹೆದರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರ್ಚ್ 10ರ ಭಾನುವಾರ ಬೆಳಗ್ಗೆ 6 ಗಂಟೆಗೇ ಆರಂಭ ನಮ್ಮ ಮೆಟ್ರೋ
”ನಾನು ಹಣವನ್ನು ಪಾವತಿಸಿದರೆ ಚರ್ಚಿಸಬಹುದು, ಸಮಸ್ಯೆ ಬಗೆಹರಿಸಬಹುದು ಎಂದು ಅವರು ನನ್ನನ್ನು ಮತ್ತಷ್ಟು ಹೆದರಿಸಿದರು. ನನ್ನ ಜಾತಕದಲ್ಲಿ ಕೆಲವು ಸೈತಾನ ಸಮಸ್ಯೆಗಳಿದ್ದು, ಆಮೇಲೆ ನೋಡಬಹುದು ಎಂದು ಬೆದರಿಕೆ ಹಾಕಿದರು. ಫೆಬ್ರವರಿ 29 ರಿಂದ ಮಾರ್ಚ್ 2ರವರೆಗೆ ಹಂತ ಹಂತವಾಗಿ ₹42,000 ವರ್ಗಾವಣೆ ಮಾಡಿಸಿಕೊಂಡರು” ಎಂದು ದಿವ್ಯಾ ಹೇಳಿದ್ದಾರೆ.
”ಸಂತ್ರಸ್ತೆ ದಿವ್ಯಾ ಶೀಘ್ರವಾಗಿ ದೂರು ದಾಖಲಿಸಿದ್ದರಿಂದ ಆರೋಪಿಯ ಎರಡು ಖಾತೆಗಳಿಂದ ₹17,000 ಸ್ಥಗಿತಗೊಳಿಸಿದ್ದೇವೆ. ಉಳಿದ ಮೊತ್ತವನ್ನು ಹಿಂಪಡೆದಿದ್ದಾರೆ. ಸಂತ್ರಸ್ತೆ ತಮ್ಮ ಮೊಬೈಲ್ ಫೋನ್ ಸಂಖ್ಯೆಗಳನ್ನು ನೀಡಿದ್ದಾರೆ. ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.