ದುಡಿಯುವ ಮಹಿಳೆಯರ ಘನತೆಯ ಅಸ್ಮಿತೆಗಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತುಮಕೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ತಿಳಿಸಿದರು.
ತುಮಕೂರು ನಗರದ ರವೀಂದ್ರ ಕಲಾ ನಿಕೇತನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಸಂವಿಧಾನ ಕುರಿತು ವಿಭಾಗ ಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದರುʼ
“ಮಹಿಳಾ ದಿನವನ್ನು ಸಾಮಾನ್ಯವಾಗಿ ಆಚರಿಸಲಾಗುತ್ತದೆ. ಆದರೆ ಇಂದು ವಿಶೇಷವಾಗಿ ಸ್ಲಂ ಸಂಘಟನೆಯಿಂದ ದುಡಿಯುವ ಮಹಿಳೆಯರ ದಿನವನ್ನು ಆಚರಿಸುತ್ತಿರುವುದು ಮೌಲ್ಯಯುತವಾಗಿದೆ.
1997ರಲ್ಲಿ ರಾಜಸ್ಥಾನದ ಗುಜ್ಜರ್ ಸಮುದಾಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಬನ್ವಾರಿದೇವಿ ನೇತೃತ್ವದಲ್ಲಿ ವಿಶಾಖ ಸಂಘಟನೆ ಮುಂದಾದಾಗ ಈ ಸಮುದಾಯದ ಮುಖಂಡರು ಗುಂಪು ಬಲತ್ಕಾರ ಮಾಡಿ ಅವಮಾನಿಸಿದರು. ಈ ಬಲತ್ಕಾರವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಜೀವಾವಧಿ ಶಿಕ್ಷೆ ತೀರ್ಪು ನೀಡಿ 2013ರಲ್ಲಿ ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವ ಕಾನೂನನ್ನು ಸಂವಿಧಾನದ ಆಶಯದಂತೆ ರೂಪಿಸಲಾಯಿತು. ಈ ಕಾನೂನು ಖಾಸಗಿ ಮತ್ತು ಸರ್ಕಾರಿ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿಯನ್ನು ರಚಿಸಲಾಗಿದೆ” ಎಂದರು.
“ಉದ್ಯೋಗಸ್ಥ ಮಹಿಳೆಯರಿಗೆ ಕೆಲವೊಂದು ಜಾಗೃತಿಯಿಂದ ಕೆಲಸದ ಸ್ಥಳಗಳಲ್ಲಿ ಕಿರುಕುಳ ನೀಡುವುದನ್ನು ತಡೆಯಲಾಗುತ್ತಿದೆ. ಆದರೆ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಅರಿವಿನ ಕೊರತೆಯಿಂದ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಪುರಾಣಗಳಲ್ಲಿ ಸ್ತ್ರೀಯರನ್ನು ದೇವತೆಗಳ ಸ್ಥಾನದಲ್ಲಿಟ್ಟು ಗೌರವಿಸಲಾಗಿದೆ. ಆದರೆ ವ್ಯವಸ್ಥೆ ಮಹಿಳಾ ಘನತೆಯನ್ನು ನೀಡುವಲ್ಲಿ ವಿಫಲವಾಗಿದೆ. ಇದಕ್ಕೆ ಪುರುಷರಷ್ಟೇ ಕಾರಣರಲ್ಲ. ನಮ್ಮ ಇಡೀ ವ್ಯವಸ್ಥೆ ಕಾರಣವಾಗಿದೆ. ಹಾಗಾಗಿ ಸಾಮಾನ್ಯ ಮಹಿಳೆಯರ ಸ್ಥಿತಿಗತಿ ಹೀನಾಯವಾಗಿದ್ದು, ಕೆಲವು ಮಹಿಳೆಯರು ಕುಟುಂಬ ನಿರ್ವಹಣೆ ಮಾಡಿದರೆ, ದುಡಿಯುವ ಮಹಿಳೆಯರು ಸಮಾಜ ಮತ್ತು ದೇಶವನ್ನು ನಿರ್ವಹಿಸುತ್ತಿದ್ದಾರೆ. ಹೆಣ್ಣಿನ ಪಾತ್ರಕ್ಕೆ ನಾವು ಅಂಟಿಕೊಂಟಿದ್ದೇವೆ. ನಮ್ಮ ಪಾತ್ರಗಳು ಬದಲಾವಣೆಯಾದರೆ ನಮ್ಮ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯವಾಗುತ್ತದೆ” ಎಂದರು.
ಸ್ಲಂ ಜನಾಂದೋಲನದ ಸಂಚಾಲಕ ಎ ನರಸಿಂಹಮೂರ್ತಿ ಮಾತನಾಡಿ, “1977ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮಹಿಳೆಯರ ಹಕ್ಕುಗಳು ಜಾಗತಿಕ ಶಾಂತಿಯನ್ನು ಘೋಷಿಸಿ ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆ, ಸಾಕ್ಷರತೆ ಸಾಧಿಸಲು ಮಹಿಳೆಯರ ಸಹಬಾಗಿತ್ವವನ್ನು ಪುರುಷ ಸಮಾನಾಗಿ ಉತ್ತೇಜಿಸಲು ಹಾಗೂ ಲಿಂಗ ಸಮಾನತೆ ಪ್ರಾಮುಖ್ಯತೆಯ ಅರಿವು ಪಡೆಯಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. 2024ರಲ್ಲಿ ಮಹಿಳಾ ದಿನದ ಥೀಮ್ ಆಗಿ ನ್ಯಾಯ, ಭರವಸೆ, ಶುದ್ಧತೆ ಮತ್ತು ಘನತೆಯನ್ನು ಸೂಚಿಸಲಾಗಿದೆ. 1909 ರಿಂದ 1913ರವರೆಗೆ ಜಗತ್ತಿನ ಹಲವು ಭಾಗಗಳಲ್ಲಿ ಕೂಲಿ ಚಳುವಳಿ ಮತ್ತು ಮತದಾನದ ಹಕ್ಕಿನ ಹೋರಾಟಗಳು ಮಹಿಳಾ ದಿನಕ್ಕೆ ಪ್ರೇರೇಪಣೆಯಾಗಿವೆ. ಹಾಗಾಗಿ ʼದುಡಿಯುವ ಮಹಿಳೆಯರ ನಾಯಕತ್ವʼ ಸಮಾಜ ಪರಿವರ್ತನೆಗೆ ಬೇಕಿದೆ” ಎಂದರು.
ಮಹಿಳಾ ಸಾಂತ್ವಾನ ಕೇಂದ್ರದ ಪಾರ್ವತಮ್ಮ ರಾಜ್‌ಕುಮಾರ್, ಬೆಂಗಳೂರು ಸಾವಿತ್ರಿಬಾಯಿ ಫುಲೆ ಸಂಘಟನೆಯ ಕಾವೇರಿ, ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಅವಳಿಗಿನ್ನು ಅವಳಾಗಿ ಬದುಕಲು ಬಿಡದ ಪುರುಷ ಪ್ರಾಧಾನ್ಯತೆ: ನಾಗೇಶ್ ಹರಳಯ್ಯ
ಕಾರ್ಯಕ್ರಮದಲ್ಲಿ ಸ್ಲಂ ಸಮಿತಿಯ ಮುಖಂಡೆ ಅನುಪಮಾ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಚಿತ್ರದುರ್ಗ ಘಟಕದ ಸುಧಾ, ಬೆಂಗಳೂರು ಘಟಕದ ಮಂಜುಬಾಯಿ, ನಿವೇಶನ ರಹಿತರ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಸುಧಾ, ತುಮಕೂರು ಸ್ಲಂ ಸಮಿತಿಯ ಶಾರದಮ್ಮ, ಗುಲ್ನಾಜ್, ಮಾತಂಗಿ ಮಹಿಳಾ ಸಂಘಟನೆಯ ಶಾರದಮ್ಮ, ಶಂಕ್ರಯ್ಯ, ಕಣ್ಣನ್, ಚಕ್ರಪಾಣಿ, ಗೋವಿಂದರಾಜ್, ಅಶ್ವಥ್, ಜಾಬೀರ್ ಖಾನ್, ಪುಟ್ಟರಾಜು, ಅರುಣ್, ಕೃಷ್ಣಮೂರ್ತಿ, ರಾಘವೆಂದ್ರ, ಸತೀಶ್, ರಾಮಕೃಷ್ಣಯ್ಯ ಇದ್ದರು.
