ಅವಳಿಗಿನ್ನು ಅವಳಾಗಿ ಬದುಕಲು ಬಿಡದ ಪುರುಷ ಪ್ರಾಧಾನ್ಯತೆ: ನಾಗೇಶ್ ಹರಳಯ್ಯ

ಆ ದಿನ ರಮಾಬಾಯಿ ಅಂಬೇಡ್ಕರ್ ಅವರ ಕುರಿತು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿ ಅತಿಥಿಯಾಗಿ ಬಂದವರೊಬ್ಬರು ಪ್ರಗತಿಪರ ಅನಿಸಿಕೊಂಡವರು. ಅವರ ಆರಂಭಿಕ ಮಾತು “ಸಮಾಜ ಸುಧಾರಣೆಗಾಗಿ ದುಡಿದ ಮಹಾನ್ ಪುರುಷರ” ಪಾದಗಳಿಗೆ ವಂದಿಸುತ್ತಾ ಎಂದು ಶುರುವಾಯಿತು. ಇಲ್ಲಿ ರಮಾತಾಯಿ ಒಂದು ಹೆಣ್ಣು ಎನ್ನುವ ಸೂಕ್ಷ್ಮ ಪ್ರಜ್ಞೆ ಇಲ್ಲದ ಇಂತಹ ಪ್ರಗತಿಪರತೆಗೆ ಏನೆಂದು ಕರೆಯಬೇಕು. ಇದು ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಸಂದರ್ಭಗಳು ನನ್ನ ಕಣ್ಣೆದುರಿಗೇ ಇವೆ.‌

21ನೇ ಶತಮಾನದ ಕಾಲಘಟ್ಟದಲ್ಲಿ ಸಂವಿಧಾನ ಜಾರಿಗೆ ಬಂದು ಏಳು ದಶಕಗಳು ಕಳೆದರೂ ಕೂಡ ಈ ಸಮಾಜ ಪುರುಷ ಪ್ರಧಾನ ವ್ಯವಸ್ಥೆಯನ್ನು ಪೋಷಿಸಿಕೊಂಡು ಮುಂದುವರೆದಿರುವುದಕ್ಕೆ ಇವತ್ತಿನ ಪ್ರಗತಿಪರತೆಯ ಆಳದಲ್ಲಿ ಲಿಂಗ ಸೂಕ್ಷ್ಮತೆ, ಲಿಂಗ ಸಂವೇದನೆಯಂತಹ ಸೂಕ್ಷ್ಮ ಪ್ರಜ್ಞೆ ಇಲ್ಲದ ಸ್ಥಿತಿ ಕಾರಣ ಅನಿಸುತ್ತದೆ. ಇಂತಹ ಲಿಂಗ ಪ್ರಜ್ಞೆ ಇಲ್ಲದ ಪ್ರಗತಿಪರತೆ ಸಮಾಜ ಬದಲಾವಣೆಗೆ ಎಷ್ಟು ಪೂರಕವಾದೀತು ಎಂದು ಯೋಚಿಸಬೇಕಿದೆ.

ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರೆದಿದ್ದಾರೆ ಎನ್ನುವ ಮಾತು ಒಂದು ಕಡೆಯಾದರೆ, ಕೌಟುಂಬಿಕ ವ್ಯವಸ್ಥೆಯ ಸುತ್ತ ಅವಳ ಬದುಕು ಪುರಾತನವಾಗಿಯೇ ಉಳಿದಿದೆ ಎನ್ನುವುದು ವಾಸ್ತವ ಸತ್ಯ. ಸಂಪ್ರದಾಯದ ಹೆಸರಲ್ಲಿ ಅವಳ ಉಡುಗೆ, ತೊಡುಗೆ, ನಡಿಗೆ, ಮಾತು ಎಲ್ಲದಕ್ಕೂ ಗಡಿಗಳನ್ನು ನಿರ್ಮಿಸಲಾಗಿದೆ. ತಾನು ಏನೇ ನಿರ್ಧಾರ ಕೈಗೊಳ್ಳಬೇಕೆಂದರೂ ಗಂಡನ ಅಥವಾ ಅಪ್ಪನ ಒಪ್ಪಿಗೆ ಕೇಳುವ ವ್ಯವಸ್ಥೆಯನ್ನು ಇನ್ನೂ ಜೀವಂತವಾಗಿರಿಸಿ, ಇದನ್ನು ಪ್ರೀತಿಯ ಲೇಪನದ ಅಡಿಯಲ್ಲಿ ಒಪ್ಪಿತ ಮೌಲ್ಯವನ್ನಾಗಿಸಲಾಗಿದೆ. ಅವಳು ಅವಳಾಗಿ ಯೋಚಿಸುವ, ನಿರ್ಧರಿಸುವ, ಬದುಕುವ ವ್ಯವಸ್ಥೆ ಇನ್ನು ಅವಳಿಂದ ದೂರ ಉಳಿಸಿ ಪ್ರತಿ ವರ್ಷ ಆಚರಿಸುವ ಸ್ವಾಂತಂತ್ರ್ಯ ದಿನಾಚರಣೆ ಯಾರ ಸಂಭ್ರಮಕ್ಕೆ ಅನಿಸಿ ಬಿಡುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಂಪ್ರದಾಯಿಕ ಪಿತೃಪ್ರಧಾನ ವ್ಯವಸ್ಥೆ ಅಡಿಯಲ್ಲಿ ಸಾವಿರಾರು ವರ್ಷಗಳಿಂದ ಅವಳು ಬಂಧಿತಳಾಗಿದ್ದು, ಅದನ್ನು ಮೀರಿಕೊಳ್ಳಲು ಪ್ರಯತ್ನಿಸುವ ಅವಳಿಗೆ ನೂರೆಂಟು ಅಪವಾದಗಳು, ಬೈಗುಳಗಳು ಈಗಾಗಲೇ ಈ ವ್ಯವಸ್ಥೆ ಸೃಷ್ಟಿಸಿಬಿಟ್ಟಿದೆ. ಗಂಡಾಗಿ ತಪ್ಪಿ ನಡೆದರೆ ರಸಿಕ, ಆ ಜಾಗದಲ್ಲಿ ಅವಳು ಇದ್ದಿದ್ದರೆ ಸೂಳೆ, ಶೀಲಗೆಟ್ಟವಳು. ಅವನಿಗಿಲ್ಲದ ನಾಚಿಕೆ, ಮಾನ, ಮರ್ಯಾದೆ ಇವಳ ಸುತ್ತ ಇವತ್ತಿಗೂ ಗಿರಕಿ ಹೊಡೆಯುತ್ತಿವೆ.

ಮನೆಯ ಅಡುಗೆ, ಕಸ ಗುಡಿಸುವ, ಬಟ್ಟೆ ತೊಳೆಯುವ, ಪಾತ್ರೆ ತೊಳೆಯುವ ಬಹುತೇಕ ಕೆಲಸಗಳು ಅವಳು ಮಾಡಿದರೂ ಕೂಡ ಯಾರಾದರೂ ʼನಿನ್ನ ತಾಯಿ, ಹೆಂಡತಿ ಏನು ಕೆಲಸ ಮಾಡುತ್ತಾರೆʼ ಅಂತ ಕೇಳಿದರೆ ಅವನ ಉತ್ತರ ಹೌಸ್‌ವೈಫ್. ಅವಳ ಮನೆಗೆಲಸವನ್ನು ಕೆಲಸವಾಗಿ ಪರಿಗಣಿಸದ ಅವನ ಮನಸ್ಥಿತಿ ಇನ್ನೂ ಕೂಡ ಮನುಸ್ಥಿತಿಯಲ್ಲಿಯೇ ಉಳಿದಿರುವುದು ಸತ್ಯ.

ಸಂಪ್ರದಾಯದ ಹೆಸರಲ್ಲಿ ಸೀರೆ ಸಂಸ್ಕೃತಿಯ ಭಾಗವಾಗಿ ಮಾಡಿ ಅವಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಟ್ಟಿಡಲಾಯಿತು. ಸಾಹಿತ್ಯಗಳೆಲ್ಲವೂ ಅವಳ ದೇಹದ ಅಂಗಾಂಗಗಳ ವರ್ಣನೆಯನ್ನು ಸೌಂದರ್ಯ ಎಂದು ಬಿಂಬಿಸಿದವು. ಹಾಗೆ ವರ್ಣಿಸಿದವರಿಗೆ ರಸಿಕ ಕವಿ, ಪ್ರೇಮ ಕವಿ ಎಂಬ ಬಿರುದಾಂಕಿತವನಿತ್ತು ಮೆರೆಸಿದವು.

ಈ ದೇಶಕ್ಕೆ ಮಹಿಳೆ ಅಧ್ಯಕ್ಷೆ ಆದರೂ ರಾಷ್ಟ್ರಪತಿ(ಪತಿ). ಅವಳು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸಭೆಗಳ ಅಧ್ಯಕ್ಷತೆ ವಹಿಸಿಕೊಂಡರೆ ಸಭಾಪತಿ (ಪತಿ), ಚಿತ್ರರಂಗದಲ್ಲಿ ನಾಯಕ ನಟಿ ( Heroine)‌ ಹೀಗೆ ಸಮಾಜದಲ್ಲಿ ಅವಳನ್ನು ಅವನ ಗುರುತಿನಿಂದ ಕರೆಯುವುದರ ಮೂಲಕ ಅವಳಿಗೆ ಸ್ವಾತಂತ್ರ್ಯದ ಅಸ್ತಿತ್ವವಿಲ್ಲ ಎನ್ನುವ (ನಾ ಸ್ತ್ರೀ ಸ್ವಾತಂತ್ರ್ಯ ಅರ್ಹತಿ) ಮನುವಾದವನ್ನೇ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅವಳು ಅಂಗಡಿಗೆ ಹೋದರೂ ಅವಳೊಂದಿಗೆ 4-5 ವರ್ಷದ ತನ್ನ ಸಣ್ಣ ತಮ್ಮನನ್ನು ಸೆಕ್ಯೂರಿಟಿ ಆಗಿ ಹಿಂದೆ ಕಳುಹಿಸುವುದು, ಸ್ಥಳೀಯ ಪಂಚಾಯತ್ ಮಟ್ಟದಲ್ಲಿ ಅವಳು ಗೆದ್ಧರೂ ಅಧಿಕಾರ ಅವನಲ್ಲಿ ಇಟ್ಟುಕೊಂಡಿರೋದು ಎಲ್ಲವೂ ಇನ್ನು ಪುರುಷ ಆಧಿಪತ್ಯದಿಂದ ಸಮಾಜ ಮುಕ್ತವಾಗಿಲ್ಲ ಎನ್ನುವುದಂತೂ ಅಕ್ಷರಶಃ ಸತ್ಯ.

ಈ ಸುದ್ದಿ ಓದಿದ್ದೀರಾ? ಅಲೆಮಾರಿಗಳ ಬದುಕು ಹಸನಗೊಳಿಸಲು ಹೋರಾಡಿದ ʼಶಾರದಾʼ ಮೇಡಂ; ಈಗ ಕೆಎಎಸ್‌ ಅಧಿಕಾರಿ

ಸರ್ಕಾರಿ ಉದ್ಯೋಗವನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಕಡೆಗೂ ಅವಳಿಗೆ ಅವನ ಸರಿ ಸಮಾನವಾದ ಕೆಲಸಕ್ಕೆ ಸಮಾನ ವೇತನ, ಕೂಲಿ ಸಿಗದಿರುವುದು ಕಣ್ಣೆದುರಿನ ವಾಸ್ತವ. ಹೀಗಿರುವಾಗ ಅವಳು ಅವಳಾಗಿ ಘನತೆಯ ಬದುಕನ್ನು ಬದುಕುವುದಾದರೂ ಯಾವಾಗ ಎನ್ನುವ ಪ್ರಶ್ನೆಯನ್ನು ಪ್ರಗತಿಪರತೆಯೊಳಗೊಂದು ಮೂಡದಿದ್ದರೆ, ಅಣ್ಣ ಬಸವಣ್ಣ ಹೇಳಿದ ಹಾಗೆ “ವಿಪ್ರರು ನುಡಿದಂತೆ ನಡೆಯರು, ತನಗೊಂದು ಬಟ್ಟೆ ಶಾಸ್ತ್ರಕೊಂದು ಬಟ್ಟೆ” ಎನ್ನುವಂತ್ತಾಗಿ ಬಿಡುತ್ತದೆ.

ಈ ದೇಶದಲ್ಲಿ ಅವನ ಅರ್ಧದಷ್ಟಿರುವ ಅವಳ ಅಸ್ತಿತ್ವವು ಅಷ್ಟೇ ಮುಖ್ಯವಾಗಬೇಕು. ಹಾಗಾಗಿ ಮೊದಲು ಅವರವರ ಮನೆ ಮತ್ತು ಮನಸ್ಥಿಯಿಂದ ಅವಳಿಗೆ ಬಿಡುಗಡೆ ಸಿಗುವಂತಾಗಬೇಕು ಎನ್ನುವುದೇ ಆಶಯ.

ನಾಗೇಶ್ ಹರಳಯ್ಯ, ಕಲಬುರಗಿ

LEAVE A REPLY

Please enter your comment!
Please enter your name here