ಗದಗ ನಗರದ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಹೋಗುವ ಮುಖ್ಯದ್ವಾರದಲ್ಲಿ ರಸ್ತೆಗೆ ಮಾಜಿ ಶಾಸಕ ಸಿ ಎಸ್ ಮುತ್ತಿನಪೆಂಡಿಮಠ ಹೆಸರನ್ನು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ ಕೆ ಪಾಟಿಲ್ ನಾಮಕರಣ ಮಾಡಿದರು.
“ಅತ್ಯಂತ ಮುಖ್ಯ ಸುಂದರ ರಸ್ತೆಗೆ ನಾಮಕರಣ ಆಗಿರೋದು ಎಲ್ಲರಿಗೂ ಸಂತೋಷ ತಂದಿದೆ. ಮಾಜಿ ಶಾಸಕ ಸಿ ಎಸ್ ಮುತ್ತಿನಪೆಂಡಿಮಠ ಅವರ ರಾಜಕೀಯ ಜೀವನ ನಂತರದ ಒಡನಾಟ ಬಾಂಧವ್ಯ ಅನ್ಯೋನ್ಯವಾಗಿತ್ತು. ಅವರೊಂದಿಗೆ ಡಿ ಎರ್ ಪಾಟೀಲ ಒಡನಾಟ ಸ್ನೇಹ ಸಂಬಂಧ ತುಂಬಾ ಚೆನ್ನಾಗಿತ್ತು. ಮುತ್ತಿನಪೆಂಡಿಮಠ ಅವರ ಸ್ನೇಹಿತರನ್ನು ನಾನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದೆ. ಅವರ ತತ್ವ ಸಿದ್ದಾಂತ ಮೆಚ್ಚುವಂತಹವು. ಅವರು ನಮ್ಮ ಹಿತೈಷಿಗಳು ಎಂಬುದು ಸಂತೋಷ ಎನಿಸಿತು” ಎಂದು ಸಚಿವ ಎಚ್ ಕೆ ಪಾಟಿಲ್ ಹೇಳಿದರು.
ರಾಜಕಾರಣದಲ್ಲಿ ಸಕ್ರಿಯವಾಗಿ ಸ್ವಲ್ಪದಿನ ಇದ್ದರೂ ಸಹ ಬಹಳಷ್ಟು ಜನರನ್ನು ಗಳಿಸಿಕೊಂಡಿದ್ದರು. ಅನೇಕ ಆತ್ಮೀಯ ಗೆಳೆಯರನ್ನು ಸಂಪಾದಿಸಿದ್ದರು. ಅವರದ್ದು ಸ್ನೇಹಪರ ಬದುಕಾಗಿತ್ತು. ಅವರ ಸಂಸ್ಕೃತಿ ಮೇಲುಸ್ಥರದ ವ್ಯಕ್ತಿತ್ವ ಎಲ್ಲರನ್ನು ಸೆಳೆಯುತ್ತಿತ್ತು ಎಂದರು.
ಮಾಜಿ ಸಚಿವ ಎಸ್ ಎಸ್ ಪಾಟಿಲ್ ಮಾತನಾಡಿ, “ಸಿ ಎಸ್ ಮುತ್ತಿನಪೆಂಡಿಮಠ ಅವರು ವಕೀಲರಾಗಿ ಜನಸೇವೆ ಮಾಡಿದ್ದಾರೆ. ನಾನು ಶಾಸಕನಾಗಲು ಪ್ರಮುಖ ಕಾರಣ ಸಿ ಎಸ್ ಮುತ್ತಿನಪೆಂಡಿಮಠ ಎಂದರೆ ತಪ್ಪಾಗದು” ಎಂದು ಹೇಳಿದರು.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, “ಈ ರಸ್ತೆಗೆ ಸಿ ಎಸ್ ಮುತ್ತಿನಪೆಂಡಿಮಠ ಹೆರಸರಿಡಲು ನಗರಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ, ಅಂಗೀಕರಿಸಲಾಗಿದೆ. ಅವರು ಎರಡು ಬಾರಿ ಶಾಸಕರಾಗಿ ಉತ್ತಮ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಕಾರ್ಯಗಳ ಮೂಲಕ ಜನಸಾಮಾನ್ಯರಲ್ಲಿ ಇಂದಿಗೂ ಅವರು ಅಜರಾಮರರಾಗಿದ್ದಾರೆ” ಎಂದರು.
ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ, “ಜನಸೇವೆ, ನ್ಯಾಯವಾದಿಗಳಾಗಿ ಮಾಡಿದ ಅವರ ಸೇವೆ ಅಗಾಧವಾದದು. ನಾಡನ್ನು ಸಮೃದ್ಧವಾಗಿ ಕಟ್ಟಲು ಮುತ್ತಿನಪೆಂಡಿಮಠ ಅಂತಹವರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಸಾರ್ವಜನಿಕರ ಸೇವೆಯಲ್ಲಿ ಕೆಲಸ ಮಾಡುವಾಗ ಅನೇಕ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ನ್ಯಾಯನಿಷ್ಠುರಿಯಾಗಿ ತಮ್ಮ ಕೆಲಸ ನಿರಂತರವಾಗಿ ಮಾಡುತ್ತಾ ಮುಂದೆ ಸಾಗಿದರು. ಅದಕ್ಕಾಗಿಯೇ ಅವರು ಇಂದಿಗೂ ಜನಮಾನಸದಲ್ಲಿ ಇದ್ದಾರೆ. ವ್ಯಕ್ತಿ ವಿಕಾಸಕ್ಕೆ ಅಸ್ಥಿತ್ವಕ್ಕೆ ಸಮಾಜ ಅಗತ್ಯ. ಅಂತಹ ಸಮಾಜದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯಾಗಿದ್ದವರು ಸಿ ಎಸ್ ಮುತ್ತಿನಪೆಂಡಿಮಠ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ನೇರ ಹಣಾಹಣಿ ಇರುವ ದಕ್ಷಿಣ ಕನ್ನಡದಲ್ಲಿ ಈ ಬಾರಿ ಯಾರಿಗೆ ಸಿಗಲಿದೆ ಟಿಕೆಟ್?
ಕಾರ್ಯಕ್ರಮದಲ್ಲಿ ಸದಸ್ಯರಾದ ಎಲ್ ಡಿ ಚಂದಾವರಿ, ಪದ್ಮಾ ಕಟಗಿ, ಅನಿಲ್ ಅಬ್ಬಿಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಐ ಹಿರೇಮನಿ ಪಾಟಿಲ್, ಡಾ. ಎಂ ಬಿ ಪಾಟಿಲ್, ವಿಶ್ವನಾಥ ಪಾಟಿಲ್, ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ ಇದ್ದರು.
