ಲೋಕಸಭಾ ಚುನಾವಣೆ | ನೇರ ಹಣಾಹಣಿ ಇರುವ ದಕ್ಷಿಣ ಕನ್ನಡದಲ್ಲಿ ಈ ಬಾರಿ ಯಾರಿಗೆ ಸಿಗಲಿದೆ ಟಿಕೆಟ್?

Date:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವಂತಹದ್ದು ಕೊನೆ ಕ್ಷಣದ ತನಕವೂ ಎರಡೂ ಪಕ್ಷಗಳ ಅಭ್ಯರ್ಥಿ ಯಾರೆಂಬ ಕುತೂಹಲ, ಕಾತರ ಇನ್ನೂ ಮುಂದುವರಿದಿದೆ.

ಮೂರು ಬಾರಿ ಗೆದ್ದಿರುವ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರ ಟಿಕೆಟ್‌ನ ಅದೃಷ್ಟ ಕೂಡ ತೂಗುಯ್ಯಾಲೆಯಲ್ಲಿದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಿಥುನ್ ರೈ ಈ ಮೊದಲೇ ‘ಖೋ’ ಕೊಟ್ಟಿರುವುದರಿಂದ ಕಾಂಗ್ರೆಸ್‌ನಲ್ಲಿ ಹೊಸ ಅಭ್ಯರ್ಥಿ ಯಾರೆಂಬ ಸಹಜ ಕುತೂಹಲ ಕೂಡ ಉಂಟಾಗಿದೆ.

ಕರಾವಳಿಯಲ್ಲಿ ‘ನಮ್ಮದು ಹಿಂದುತ್ವದ ಅಂಜೆಂಡಾ’ ಎಂದು ಬಿಜೆಪಿ ಎಷ್ಟೇ ಪ್ರಚಾರ ಮಾಡಿಕೊಂಡರೂ ಟಿಕೆಟ್ ಘೋಷಣೆ ಮಾಡುವುದು ಜಾತಿ ಲೆಕ್ಕಚಾರದ ಸೂತ್ರದಂತೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಳಿನ್ ಕುಮಾರ್ ಕಟೀಲ್ ಬಂಟ ಸಮುದಾಯದವರು. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಬಿಲ್ಲವರು ಮೊದಲ ಸ್ಥಾನದಲ್ಲಿ, ಮುಸ್ಲಿಮರು ಎರಡನೇ ಸ್ಥಾನದಲ್ಲಿ ಇರುವವರು. ಬಂಟರು, ಗೌಡರು, ಪರಿಶಿಷ್ಟ ಜಾತಿ/ಪಂಗಡ, ಕ್ರೈಸ್ತರು ನಂತರದ ಸಾಲಿನಲ್ಲಿರುವವರು.

ಈ ಬಾರಿ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ತಪ್ಪಿದರೆ ಮಿಲಿಟರಿ ರಿಟರ್ನ್ ಆಗಿರುವ ಯುವನಾಯಕ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಗ್ಯಾರಂಟಿಯಾಗುವ ಸಾಧ್ಯತೆ ಹೇರಳವಾಗಿದೆ. ಬ್ರಿಜೇಶ್ ಚೌಟ ಅವರು ಬಂಟ ಸಮುದಾಯದವರು. ಇಷ್ಟಕ್ಕೆ ಒಂದು ಹಂತದ ಲೆಕ್ಕ ಪಕ್ಕಾ ಆಗಿದೆ. ನಳಿನ್ ಕುಮಾರ್ ಪರವಾಗಿ ಪಕ್ಷದ ಕಾರ್ಯಕರ್ತರ ವಲಯದಲ್ಲಿ ದೊಡ್ಡ ಮಟ್ಟಿನ ಅಸಮಾಧಾನ ಇರುವುದು ಸೂರ್ಯ ಚಂದ್ರರಷ್ಟೇ ಸ್ಪಷ್ಟ.

ಬ್ರಿಜೇಶ್ ಚೌಟ, ನಳಿನ್ ಕುಮಾರ್ ಕಟೀಲ್, ರಾಜೇಂದ್ರ ಕುಮಾರ್, ಪದ್ಮರಾಜ್

ನಳಿನ್ ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೇಂದ್ರ ಧ್ವನಿ ಎತ್ತುವರೇ, ಅವರ ತಂದೆ ಯಡಿಯೂರಪ್ಪ ನಳಿನ್ ಪರ ಲಾಭಿ ಮಾಡುವರೇ ಎಂಬುದೆಲ್ಲ ಈಗ ಪ್ರಶ್ನೆಯಾಗಿ ಉಳಿದಿಲ್ಲ. ಬಿ ಎಲ್ ಸಂತೋಷ್ ಪ್ರಭಾವವನ್ನು ನಂಬಿಕೊಂಡು ನಳಿನ್ ಕುಮಾರ್ ಟಿಕೆಟ್ ನಿರೀಕ್ಷೆ ಇರಿಸಿಕೊಂಡಿದೆ. ಇನ್ನೊಂದೆಡೆ, ‘ನಮ್ಮ ಪಕ್ಷದಲ್ಲಿ ಸಂಘ ತೀರ್ಮಾನಿಸುವುದು’ ಎಂದು ಬಿಜೆಪಿಯ ನಿತ್ಯ ಪಠಣವು ನಿಜವೇ ಆಗುವುದಾದರೆ ಅವರೂ ಕೂಡ ಮೇಲಕ್ಕೆ ಬೇರೆ ಹೆಸರನ್ನೇ ಪಠಣ ಮಾಡಿದ್ದಾರಂತೆ. ಅಲ್ಲಿಗೆ ಮತ್ತೊಂದು ಲೆಕ್ಕ ಕೂಡ ‘ಕ್ಲೋಸ್’ ಅಂತಾನೆ ತಿಳಿಯಬಹುದು.

ತಾನು ಎದುರಿಸಿದ ಸತತ ಮೂರು ಚುನಾವಣೆಯಲ್ಲಿಯೂ ಗೆಲುವಿನ ಅಂತರವನ್ನು ಡಬ್ಬಲ್ ಮಾಡಿಕೊಂಡ ನಳಿನ್ ಕುಮಾರ್ ಅವರು, ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ವಿಚಾರದಲ್ಲಿ ಮಾತ್ರ ಅವರನ್ನು ಅಭದ್ರತೆ ಕಾಡುತ್ತಿದೆ. ಗಟ್ಟಿಯಾಗಿ ಏನನ್ನೂ ಮಾತನಾಡದ ಸ್ಥಿತಿಯಲ್ಲಿದ್ದಾರೆ. ಒಂದು ರೀತಿಯಲ್ಲಿ ‘ದಮ್ಮು, ತಾಕತ್ತನ್ನು ಬದಿಗಿರಿಸಿದ್ದಾರೆ.

ಇದೆಲ್ಲ ಇರುವಾಗಲೇ ಹಿಂದೂ ಸಂಘಟನೆಯ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಬಿಲ್ಲವ ಟ್ರಂಪ್ ಕಾರ್ಡ್ ಹಿಡಿದುಕೊಂಡು ಬಂದು ಬಿಜೆಪಿ ಟಿಕೆಟ್‌ಗೆ ಜನಾಗ್ರಹ ನಡೆಸಿರುವುದು. ಇನ್ನೊಂದೆಡೆ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ, ʼತಾನು ಹಿಂದುತ್ವದ ನೈಜ ವಾರಸುದಾರ. ನನಗೆ ಟಿಕೆಟ್ ಕೊಡಿʼ ಎಂದು ಬೇಡಿಕೆ ಇಟ್ಟಿದ್ದರು. ಪುತ್ತಿಲರಿಗೆ ಏನೋ ಲೆಕ್ಕಚಾರ ಸರಿಬಾರದಿರುವಾಗ ಸ್ವತಂತ್ರ ಸ್ಪರ್ಧೆಯ ನಿರ್ಧಾರ ಇಷ್ಟರಲ್ಲೇ ಘೋಷಣೆ ಮಾಡಿ ನಳಿನ್ ಕುಮಾರ್ ವಿರುದ್ಧ ಬಂಡಾಯದ ಬಾವುಟ ಬೀಸಿದ್ದಾರೆ.

ಸುರತ್ಕಲ್‌ನಿಂದ ಪುತ್ತೂರು ತನಕದ ಈ ಗೊಂದಲದ ವಾತಾವರಣವೇ ರಾಜ್ಯ ಬಿಜೆಪಿಯಲ್ಲಿನ ನಳಿನ್ ಪ್ರತಿಸ್ಪರ್ಧಿ ಕೆಲವರಿಗೆ ಹರುಷ ತಂದಿದೆ ಎಂಬ ಅಭಿಪ್ರಾಯವಿದೆ. ಇಷ್ಟೆಲ್ಲದರ ನಡುವೆ ದಕ್ಷಿಣ ಕನ್ನಡ ಬಿಜೆಪಿ ಎಂದಿನಂತೆ ನಿಖರವಾಗಿ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಂಗಳೂರಿನಿಂದ ಬಂಟ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡುವಾಗ ಬಿಲ್ಲವರ ನೇತೃತ್ವದಲ್ಲಿ ಚುನಾವಣೆ ನಡೆಯಿತೆಂಬ ಲೆಕ್ಕಾ ಚಾರದ ಪ್ರಕಾರವೇ ಮೊನ್ನೆಯಷ್ಟೇ ಬಿಲ್ಲವ ಸಮುದಾಯದ ಸತೀಶ್ ಕುಂಪಲ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಬಿಲ್ಲವರಿಗೆ ಪಕ್ಷ ಕಟ್ಟುವ ಕೆಲಸದ ಜವಾಬ್ದಾರಿ ಕೊಟ್ಟಿದೆ.

ಅರುಣ್ ಕುಮಾರ್ ಪುತ್ತಿಲ

ಪಕ್ಷದಿಂದ ದೂರ ಇರುವ ಸತ್ಯಜಿತ್ ಅವರ ಟಿಕೆಟ್ ಬೇಡಿಕೆಯನ್ನು ಠುಸ್ಸ್ ಮಾಡಲು ಪಕ್ಷದ ಒಳಗಿನ ಬಿಲ್ಲವ ಸಮುದಾಯದ ಪ್ರಭಾವಿ ಕೇಶವ ಬಂಗೇರ ಎಂಬವರ ಹೆಸರನ್ನು ದಿಢೀರ್ ಆಗಿ ಚಿಮ್ಮಿಸಿಬಿಟ್ಟಿದೆ. ಅಲ್ಲಿಗೆ ಸತ್ಯಜಿತ್‌ನ ಹಿಂದೆ ನಿಲ್ಲುವ ಬಿಲ್ಲವರಿಗೆ ಒಟ್ಟಾರೆ ಗೊಂದಲ ಉಂಟಾಗಿದೆ. ಜತೆಗೆ ಉಡುಪಿಯಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಕ್ಕಿದರೆ ಸುಳ್ಯ, ಪುತ್ತೂರಿನ ಗೌಡರು ನಮ್ಮ ಕಡೆಗೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಕಾ ಲೆಕ್ಕ ಹಾಕಿದ್ದು, ಇತ್ತ ಪುತ್ತಿಲ ಪರಿವಾರವನ್ನು ಮಟ್ಟ ಹಾಕಲು ಸರಿಯಾದ ಶಸ್ತ್ರಕ್ಕೆ ಹುಡುಕಾಟದಲ್ಲಿದೆ.

ಕಾಂಗ್ರೆಸ್ ನಿಧಾನ ಆಟ

ಮೂರೂವರೆ ದಶಕಗಳ ನಿರಂತರ ಸೋಲಿನಿಂದ ಹೈರಾಣಾಗಿರುವ ಕಾಂಗ್ರೆಸ್ ಈ ಬಾರಿ ಹೇಗಾದರೂ ಮಾಡಿ, ಸವಾಲೊಡ್ಡಲೇ ಬೇಕೆಂಬ ಹಠಕ್ಕೆ ಬಿದ್ದು, ಗೆದ್ದೇ ಗೆಲ್ಲುವೆವು, ‘ಮಾಡು ಇಲ್ಲವೇ ಮಡಿ’ ಎಂಬ ಜಿದ್ದಿಗೆ ನಿಂತಿದೆಯೇ ಎಂದು ನೋಡಿದರೆ, ಅಲ್ಲಿ ಈಗಲೇ ಸಾಕಷ್ಟು ಸಮಯವನ್ನು ಕೈ ಚೆಲ್ಲಿದೆ.‌

ಕಳೆದ ಬಾರಿ ಯುವ ಮುಖಕ್ಕೆ ಟಿಕೆಟ್ ಕೊಟ್ಟು ಅನುಭವಿಸಿದ ದೊಡ್ಡ ಸೋಲಿನ ಆತ್ಮಾವಲೋಕನದ ವರದಿ ಏನಾದರೂ ಇತ್ತೋ ಗೊತ್ತಿಲ್ಲ. ಈಗ ಎಲ್ಲವೂ ಹೊಸದೇ ರೆಡಿಯಾಗಬೇಕು. ಹೊಸ ಕ್ಯಾಂಡಿಡೇಟ್ ಕೂಡ ರೆಡಿಯಾಗಬೇಕು. ಹೊಸಬರಿಗೆ ಟಿಕೆಟ್ ಕೊಡಿ ಎಂಬ ಕಾರ್ಯಕರ್ತರ ನಿರೀಕ್ಷೆ ಸಹಜವಾಗಿಯೇ ಪಕ್ಷದ ನಾಯಕರಲ್ಲೂ ಒಲವು ಮೂಡಿಸಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಅವರ ಪರ ಅನೇಕರು ಇಷ್ಟರಲ್ಲೇ ಬ್ಯಾಟಿಂಗ್ ಮಾಡಿದ್ದಾರೆ. ಬಿಲ್ಲವ ಟ್ರಂಪ್ ಕಾರ್ಡ್ ಅವರ ಹೆಗ್ಗಳಿಕೆ. ಅಂದ ಹಾಗೆ ಬಿಲ್ಲವರಿಗೆ ಟಿಕೆಟ್ ಕೊಡುವುದಾದರೆ ಉಡುಪಿಯ ಮಾಜಿ ಸಂಸದ, ಮಾಜಿ ಸಚಿವ ಹಿರಿಯ ಕಾಂಗ್ರೆಸ್ಸಿಗ ವಿನಯ್ ಕುಮಾರ್ ಸೊರಕೆ ಅವರ ಹೆಸರನ್ನು ಅವರ ಹಳೆಯ ದೋಸ್ತಿಗಳೇ ಮುನ್ನೆಲೆಗೆ ತಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ‘ತನಗೆ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಸಿದ್ಧ’ ಎಂದು ಹೇಳಿದ್ದಾರೆ.

ಹೊಸ ನಾಯಕ, ಯುವ ನಾಯಕನೆಂಬ ಛಾಪಿನಿಂದಾಗಿ ಪಕ್ಷದೊಳಗಿನ ಚರ್ಚೆಯಲ್ಲಿ ಪದ್ಮರಾಜ್ ಹೆಸರೇ ಹೆಚ್ಚು ಪ್ರಚಲಿತದಲ್ಲಿದೆ. ಇಷ್ಟೆಲ್ಲಾ ನಡೆದಿರುವಾಗ ಹೆವಿವೈಟ್ ಆಕಾಂಕ್ಷಿಯೊಬ್ಬರು ಸೈಲೆಂಟ್ ಆಗಿ ಹೈಕಮಾಂಡ್ ಪೋನ್ ಕಾಲ್ ನಿರೀಕ್ಷೆಯಲ್ಲಿದ್ದಾರೆ. ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್. ಅವರಿಗೆ ನಮ್ಮದು ಜಾತಿ ಬಲ ಕಡಿಮೆಯಾದರೆ ಏನಂತೆ, ಇನ್ನುಳಿದಂತೆ ಚುನಾವಣಾ ರಣತಂತ್ರ ನಮ್ಮಲ್ಲಿದೆ ಅಂದಿದ್ದಾರಂತೆ. ಗೇಮ್ ಚೇಂಜ್ ಹೇಗೂ ನಡೆಯಬುದು ತಾನೇ?

ಈ ಹಿಂದೆ ಜನಾರ್ದನ ಪೂಜಾರಿ ಅವರು ಸ್ಪರ್ಧೆ ಮಾಡಿದಾಗ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದವರು ಇದೇ ರಾಜೇಂದ್ರ ಕುಮಾರ್.‌ ಅಂದರೆ ಚುನಾವಣಾ ರಾಜಕಾರಣದ ಅನುಭವ ಅವರಲ್ಲಿದೆ.

ಈ ಸುದ್ದಿ ಓದಿದ್ದೀರಾ? ಹಾವೇರಿ | ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪೈಪೋಟಿ, ಯಾರಿಗೆ ಟಿಕೆಟ್?

ಅತ್ತ ಉಡುಪಿಯಲ್ಲಿ ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆಯನ್ನು ಕಣಕ್ಕಿಳಿಸಿದರೆ ಎರಡೂ ಜಿಲ್ಲೆಯ ಬಂಟ ಸಮುದಾಯಕ್ಕೆ  ಓಲೈಕೆಯಾಗುವುದು. ಶಿವಮೊಗ್ಗದಲ್ಲಿ ಈಗಾಗಲೇ ಬಂಗಾರಪ್ಪರ ಮಗಳು ಬಿಲ್ಲವ ಈಡಿಗ ಸಮಯದಾಯದ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದರಿಂದ ಬಿಲ್ಲವರ ಬೇಡಿಕೆಗೆ ಕರಾವಳಿ ಮಲೆನಾಡಿನ ಲೆಕ್ಕ ಚುಪ್ತವಾದಂತೆ. ಇದೇ ಸೂತ್ರವೇ ಬಳಕೆಯಾದರೆ ಜೈನರಾಗಿರುವ ರಾಜೇಂದ್ರ ಕುಮಾರ್ ಬಗ್ಗೆ ತಕರಾರು ಇರದು ಎಂಬೆಲ್ಲ ಲೆಕ್ಕಚಾರಗಳಿರುವುದಾಗಿ ತಿಳಿದುಬಂದಿದೆ. ಇರಲಿ ಒಂದೆರೆಡು ದಿನಗಳಷ್ಟೇ ಕಾಯಬೇಕಾಗಿರುವುದು.

ತಾರಾನಾಥ್ ಗಟ್ಟಿ ಕಾಪಿಕಾಡ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...