ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ಭಾನುವಾರ ಟಿಎಂಸಿ ತನ್ನ ಚುನಾವಣಾ ರ್‍ಯಾಲಿ ಆರಂಭಿಸುತ್ತಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಚುನಾವಣಾ ಪ್ರಚಾರ ಆರಂಭಿಸಲು ಸಜ್ಜಾಗಿದ್ದಾರೆ. ಆದರೆ, ಐದು ವರ್ಷಗಳ ಹಿಂದೆ, 2019ರಲ್ಲಿ ಇದೇ ಮೈದಾನದಲ್ಲಿದ್ದ ಲವಲವಿಕೆಗೆ ಹೋಲಿಸಿದರೆ, ಈ ಬಾರಿ ಭಿನ್ನವಾಗಿದೆ. ‘ಜನ ಗರ್ಜನ್ ಸಭಾ’ (ಜನರ ಘರ್ಜನಾ ರ್ಯಾಲಿ)ಗೆ ಭಾಗಿಯಾಗುತ್ತಿರುವ ಪಕ್ಷದ ಬೆಂಬಲಿಗರ ಸಂಖ್ಯೆಯು ಆತಂಕವನ್ನು ಹುಟ್ಟುಹಾಕಿದೆ.
2019ರಲ್ಲಿ, ರಾಜ್ಯದಲ್ಲಿ ಆಡಳಿತಾರೂಢ ಪಕ್ಷಕ್ಕೆ ಆಡಳಿತ ವಿರೋಧಿ ಅಲೆಯೇ ಇರಲಿಲ್ಲ. ಅಲ್ಲದೆ, ಭ್ರಷ್ಟಾಚಾರದ ಆರೋಪಗಳು ಹಾಗೂ ಸಂದೇಶ್‌ಖಾಲಿ ಪ್ರಕರಣದಂತಹ ಗಂಭೀರ ಪ್ರಕರಣಗಳು ಟಿಎಂಸಿ ವಿರುದ್ಧದ ಕೇಳಿಬಂದಿರಲಿಲ್ಲ. ಆದರೆ, ಈ ಬಾರಿ ಇಂತಹ ಆರೋಪಗಳು ಪಕ್ಷಕ್ಕೆ ಮುಜುಗರವನ್ನು ತಂದೊಡ್ಡಿವೆ. ಅಲ್ಲದೆ, 2019ರಂತೆ ಕಾಂಗ್ರೆಸ್ ಸೇರಿದಂತೆ ರಾಷ್ಟ್ರೀಯ ವಿರೋಧ ಪಕ್ಷಗಳ ನಾಯಕರು ರ್‍ಯಾಲಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಪಕ್ಷವು ತಮ್ಮ ನಾಯಕರನ್ನು ರಾಷ್ಟ್ರೀಯ ಮುಖವನ್ನಾಗಿ ಬಿಂಬಿಸಲು ಯತ್ನಿಸುತ್ತಿದೆ. ರಿಪುನ್ ಬೋರಾ, ಸುಶ್ಮಿತಾ ದೇವ್, ಮುಕುಲ್ ಸಂಗ್ಮಾ, ಲಲಿತೇಶ್, ರಾಜೇಶ್ ತ್ರಿಪಾಠಿ, ಕೀರ್ತಿ ಆಜಾದ್, ಶತ್ರುಘ್ನ ಸಿನ್ಹಾ, ಸಾಕೇತ್ ಗೋಖಲೆ ಮತ್ತು ಹೊಸ ಸಂಸದೆ ಸಾಗರಿಕಾ ಘೋಸ್ ಅವರು ವೇದಿಕೆಯಲ್ಲಿ ರಾಷ್ಟ್ರೀಯ ನಾಯಕರಾಗಿ ಜನರನ್ನು ಗೆಲ್ಲುತ್ತಾರಾ ಎಂಬ ಆತಂಕವೂ ಇದೆ.
2019ರಲ್ಲಿ, ಟಿಎಂಸಿ ತನ್ನ ಚುನಾವಣಾ ಪ್ರಚಾರವನ್ನು ಜನವರಿ 19ರಂದು ಆಯೋಜಿಸಿತ್ತು. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ದೇವೇಗೌಡ, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಮತ್ತು ಒಮರ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಡಿಎಂಕೆಯ ಎಂಕೆ ಸ್ಟಾಲಿನ್, ಆರ್‌ಜೆಡಿಯ ತೇಜಸ್ವಿ ಯಾದವ್, ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಭಿಷೇಕ್ ಮನು ಸಿಂಘ್ವಿ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಸುಮಾರು 20 ನಾಯಕರು ಭಾಗಿಯಾಗಿದ್ದರು.
ಆದರೆ, ಈ ಬಾರಿ ಇಂಡಿಯಾ ಒಕ್ಕೂಟದ ಭಾಗವಾಗಿದ್ದ ಟಿಎಂಸಿ, ಕಾಂಗ್ರೆಸ್‌ಗೆ ಹೆಚ್ಚಿನ ಕ್ಷೇತ್ರ ಬಿಟ್ಟುಕೊಡಲು ನಿರಾಕರಿಸಿದ್ದು, ಮೈತ್ರಿಕೂಟದಲ್ಲಿ ಹೊರಬಂದು, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 4 ಕ್ಷೇತ್ರಗಳಲ್ಲಿ ಮಾತ್ರವೇ ಟಿಎಂಸಿ ಗೆಲ್ಲಲು ಸಾಧ್ಯವಾಗಿತ್ತು. ಆದರೆ, 2021ರ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವು ಸಾಧಿಸಿತ್ತು. ಅದೇ ಜೋಶ್‌ನಲ್ಲಿದ್ದ ಪಕ್ಷಕ್ಕೆ ಸಂದೇಶ್‌ಖಾಲಿ ಪ್ರಕರಣ ಮತ್ತು ಅದನ್ನು ನಿಭಾಯಿಸುವಲ್ಲಿನ ಪಕ್ಷವು ವಿಫಲವಾಗಿದೆ. ಆರೋಪಿ ಷಹಜಹಾನ್ ಶೇಖ್‌ನನ್ನು ಪಕ್ಷದಿಂದ ಅಮಾನತು ಮಾಡಿದರೂ, ಪಕ್ಷವು ಆರೋಪಿಯ ಪರವಾಗಿದೆ ಎಂಬ ಆರೋಪಗಳಿವೆ.
“ಕಳೆದ ಲೋಕಸಭೆ ಚುನಾವಣೆ ವಿಭಿನ್ನವಾಗಿತ್ತು. ಆಗ, ನಾವು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿರಲಿಲ್ಲ. ಯಾವುದೇ ಸಂದೇಶ್‌ಖಾಲಿ ರೀತಿಯ ಘಟನೆ ನಡೆದಿರಲಿಲ್ಲ. ಇದೀಗ, ನಾವು ರಾಜಕೀಯವಾಗಿ ರಕ್ಷಣಾತ್ಮಕವಾಗಿ ಮಾತಾಡುವ ಅನಿವಾರ್ಯತೆ ಎದುರಿಸುತ್ತಿದ್ದೇವೆ” ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
“ಕಾಂಗ್ರೆಸ್ ಸ್ಪರ್ಧಿಸದ ಸ್ಥಾನಗಳಲ್ಲಿ ಅವರ ಬೆಂಬಲಿಗರು ನಮಗೆ ಮತ ಹಾಕುವ ಸಾಧ್ಯತೆಯಿಲ್ಲ ಎಂಬುದು ನಮಗೆ ಅರಿವಿದೆ. ಬಿಜೆಪಿ ವಿರುದ್ಧ ನಮ್ಮನ್ನು ಕಾಂಗ್ರೆಸ್ ಬೆಂಬಲಿಗರು ಬೆಂಬಲಿಸದಿದ್ದರೆ, ನಾವೇನು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕು” ಎಂದಿದ್ದಾರೆ.
ರಾಜ್ಯ ಹಣಕಾಸು ಸಚಿವೆ ಮತ್ತು ಮಹಿಳಾ ಟಿಎಂಸಿ ಅಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಮಾತನಾಡಿ, “ನಾವು ಏಕಾಂಗಿಯಾಗಿ ಹೋಗುತ್ತೇವೆ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಘೋಷಿಸಿದ್ದಾರೆ. ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸುವಷ್ಟು ಶಕ್ತಿಶಾಲಿಯಾಗಿದ್ದೇವೆ. ಭಾನುವಾರದಿಂದ ನೀವು ಬಂಗಾಳದ ಘರ್ಜನೆ ನೋಡುತ್ತೀರಿ” ಎಂದಿದ್ದಾರೆ.
ಸಿಪಿಐ(ಎಂ) ಮುಖಂಡ ಸುಜನ್ ಚಕ್ರವರ್ತಿ ಮಾತನಾಡಿ, “ಟಿಎಂಸಿ ಯಾವ ರ್‍ಯಾಲಿ ಆಯೋಜಿಸುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ರ್‍ಯಾಲಿಗಾಗಿ ಮೈದಾನವನ್ನು ತುಂಬಿಸುವ ಜವಾಬ್ದಾರಿಯನ್ನು ಪೊಲೀಸರು ಮತ್ತು ಬಿಡಿಒಗಳಿಗೆ ವಹಿಸಲಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.