ಸಮಾಜದಲ್ಲಿರುವ ಲಿಂಗ ಅಸಮಾನತೆಯನ್ನು ಭೇದಿಸಲು ಮಹಿಳೆಯರು ರಾಜಕೀಯವಾಗಿ ಮುಂದೆ ಬರುವುದು ತುಂಬಾ ಅಗತ್ಯವಾಗಿದೆ. ಆದರೆ, ರಾಜಕೀಯದಲ್ಲಿ ಮಹಿಳೆಯರ ಪ್ರಯಾಣ ಸುಲಭವಲ್ಲ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮನೋಭಾವ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ಕೂಡ ಸಮಸ್ಯೆಯಾಗಿದೆ ಎಂದು ಸಿಕಂದರಾಬಾದ್‌ನ ಸಾಹಿತಿ, ಹೋರಾಟಗಾರ್ತಿ ಡಾ. ಜಿ.ವಿ.ವೆನ್ನೆಲ ಗದ್ದರ್ ಹೇಳಿದರು.
ಉಡುಪಿಯ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ, ಉಡುಪಿ ಬಾಸೆಲ್ ಮಿಷನ್ ಚರ್ಚ್ ಹಾಲ್‌ನ ರತ್ನಾ ಅಮ್ಮಣ್ಣ ವೇದಿಕೆಯಲ್ಲಿ ಶನಿವಾರ (ಮಾ.9) ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಮಾಜ ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನಮಾನವನ್ನು ನೀಡಿದೆ. ಆದರೆ, ಮಹಿಳೆಯರೇ ತಮ್ಮ ಸ್ಥಾನಮಾನ ಏರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ತಮ್ಮ ಮನೆ, ಹಳ್ಳಿ, ಗುಡ್ಡಗಾಡು, ನಗರಗಳಲ್ಲಿ ಮಾಡಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಇಂದಿರಾ ಗಾಂಧಿಯಿಂದ ಹಿಡಿದು ಮಮತಾ ಬ್ಯಾನರ್ಜಿಯವರೆಗೆ ಹಲವು ಮಂದಿ ಸಾಧನೆಗೆ ಲಿಂಗ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಕೂಡ ಜೀವಪರ, ಸಮಾನತೆಗಾಗಿ ಅತ್ಯುತ್ತಮ ನಾಯಕತ್ವನ್ನು ನೀಡಿದ್ದಾರೆ ಎಂದರು.
ನಮ್ಮ ಮುಂದೆ ಇರುವ ನಾಯಕತ್ವದ ಮಾದರಿಗಳು ಪಿತೃ ಪ್ರಧಾನ ನೀತಿಯಿಂದ ಕೂಡಿದೆ. ಅದನ್ನು ಲಿಂಗಸೂಕ್ಷತೆಯಿಂದ ನೋಡಿ ಹೊಸ ದೃಷ್ಟಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಲಿಂಗ ಸಮಾನತೆ, ಸಾಮೂಹಿಕ ನಾಯತ್ವದ ಪರಿಕಲ್ಪನೆಯನ್ನು ನಾವು ಹೆಚ್ಚಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಒಬ್ಬ ಮಹಿಳೆ ಸಾವಿರ ಆಯುಧಗಳಿಗೆ ಸಮಾನ. ಸ್ವಸಹಾಯ ಗುಂಪುಗಳು, ಸಂಘಟನೆಗಳು ಮಹಿಳೆಯರನ್ನು ತಳಮಟ್ಟದಲ್ಲಿಯೇ ಆರ್ಥಿಕ ಸಬಲಗೊಳಿಸಿದೆ. ಮಹಿಳೆಯರ ಕುರಿತ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಕೊಟ್ಟ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವರೋನಿಕಾ ಕರ್ನೆಲಿಯೋ ವಹಿಸಿದ್ದರು. ಅಖಿಲಾ ವಿದ್ಯಾಸಂದ್ರ ಉಡುಪಿ ಘೋಷಣೆ ಮಂಡಿಸಿದರು. ಮೇರಿ ಡಿಸೋಜ ಭಾರತ ಸಂವಿಧಾನ ಪೀಠಿಕೆ ವಾಚಿಸಿದರು. ಅಪ್ಪಿ ಮೂಡುಬೆಳ್ಳಿ ಪಾಡ್ಡಾನ ಹಾಡು ಹಾಡಿದರು.
ವೇದಿಕೆಯಲ್ಲಿ ಗ್ರೇಸಿ ಕುವೆಲ್ಲೊ, ಕುಲ್ಬುಮ್ ಅಬೂಬಕರ್, ಸರೋಜಾ, ರೆಹನಾ ಸುಲ್ತಾನಾ ಬೈಂದೂರು, ಮಂಜುನಾಥ ಗಿಳಿಯಾರು, ಸಂತೋಷ್ ಕರ್ನೆಲಿಯೋ, ನಾಗಮ್ಮ ಬೈಂದೂರು, ಸಂತೋಷ್ ಬಲ್ಲಾಳ್, ಸಂಜೀವ ವಂಡ್ರೆ, ಶಾಂತಿ ನರೋನ್ಹಾ, ಶ್ರೀಕುಮಾರ್, ಸುಮಿತ್ರಾ ಸುಧಾಕರ್, ದೇವಿಕಾ ನಾಗೇಶ್, ಸಲೀಮ್ ಖಾನ್ ಕೊಪ್ಪಳ, ಪ್ರಭಾವತಿ, ಚಂದ್ರಮ್ಮ ಮೊದಲಾದವರು ಉಪಸ್ಥಿತರಿದ್ದರು.
