“ಸರ್ಕಾರವನ್ನು ಬೀಳಿಸಲು ಬಿಜೆಪಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿಯ ಆಮಿಷ ನೀಡಿದೆ” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಉಪ ಚುನಾವಣೆಯಲ್ಲಿ ಪುಟ್ಟಣ್ಣ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೆಂಗೇರಿಯ ಸೂಲಿಕೇರಿ ಮೈದಾನದಲ್ಲಿ ಭಾನುವಾರ ಶಿಕ್ಷಕರ ಕೃತಜ್ಞತಾ ಸಭೆ ನಡೆದಿದೆ. ಇಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆಶಿ, “ಬಿಜೆಪಿಯು ನಮ್ಮ ಸರ್ಕಾರವನ್ನು ಕೆಡವಲು ಪ್ರಯತ್ನ ಮಾಡಿದ್ದು, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನೂ ಸಂಪರ್ಕಿಸಿದ್ದಾರೆ. ಆದರೆ ಬಿಜೆಪಿಗೆ ನಮ್ಮ ಶಾಸಕರನ್ನು ಅವರ ಪಕ್ಷದತ್ತ ಎಳೆದುಕೊಳ್ಳಲು ಸಾಧ್ಯವಾಗಿಲ್ಲ” ಎಂದರು.
“ಬಿಜೆಪಿ ಕೋಮುವಾದಿ ಪಕ್ಷ ಅದು ಸಮಾಜ ಒಡೆಯುತ್ತದೆ ಎಂಬ ಕಾರಣಕ್ಕೆ ನಾವು ಮತ್ತು ಸಿದ್ದರಾಮಯ್ಯ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಯಾವುದೇ ಷರತ್ತು ಇಲ್ಲದೆಯೇ ಸಿಎಂ ಮಾಡಿದೆವು, ಆದರೆ ಬಿಜೆಪಿಯು ನಮ್ಮ ಆಗಿನ ಸರ್ಕಾರವನ್ನು ಕೆಡವಿತು” ಎಂದ ಡಿಕೆಶಿ, “ತಾನು ಸಿಎಂ ಆಗಿದ್ದ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಜೊತೆಗೆಯೇ ಈಗ ಕುಮಾರಸ್ವಾಮಿ ಇದ್ದಾರೆ” ಎಂದು ಟೀಕಿಸಿದರು.
“ಬಿಜೆಪಿ ಪಕ್ಷದ ನಾಯಕರು ಸರ್ಕಾರ ಬೀಳಿಸುವ ವಿಚಾರದಲ್ಲಿ ‘ತಿರುಕನ ಕನಸು’ ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಲು ಬಯಸುತ್ತೇನೆ. ನಾವು ಜನರ ಆಶೀರ್ವಾದದಿಂದ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ” ಎಂದ ಡಿಕೆಶಿ “ಇಂತಹ ನೀತಿಗೆಟ್ಟ ರಾಜಕಾರಣ ನೋಡಿ ಅಸಹ್ಯವಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ನಾವು 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಮಾತ್ರವಲ್ಲದೆ ಮೂವರು ಪಕ್ಷೇತರರ ಬೆಂಬಲದಿಂದ ಬಲಿಷ್ಠವಾಗಿ ಸರ್ಕಾರ ನಡೆಸುತ್ತಿದ್ದೇವೆ, ಹೀಗಿರುವಾಗ ನಮ್ಮ ಸರ್ಕಾರವನ್ನು ಬಿಜೆಪಿಯವರಿಂದ ಬೀಳಿಸಲು ಸಾಧ್ಯವಾಗದು” ಎಂದರು.