ಗಾಬಸಾವಳಗಿ ಮತ್ತು ಬಿಸನಾಳ ಗ್ರಾಮಗಳನ್ನು ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗಪ್ಸಾಳ್ವಿಕೆ ಗ್ರಾಮದಲ್ಲಿ ಹೋರಾಟ ಸಮಿತಿ ಪ್ರಮುಖರು ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರವೂ ಮುಂದುವರೆದಿದೆ.
“ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ವ್ಯಾಪ್ತಿಯ ಎರಡು ಗ್ರಾಮಗಳನ್ನು ಆಲಮೆಲ ತಾಲೂಕಿಗೆ ಸೇರ್ಪಡೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಸಿಂದಗಿ ತಾಲೂಕು ಕೇಂದ್ರ ಕೇವಲ 12 ಕಿಮೀ ಹತ್ತಿರದಲ್ಲಿದೆ. ಆದರೆ ಆಲಮೆಲ 40 ಕಿಮೀ ದೂರದಲ್ಲಿದೆ. ಈ ಕುರಿತು ಈಗಾಗಲೇ ಹೋರಾಟ ನಿರಂತರವಾಗಿ ಮುಂದುವರಿದಿದೆ” ಎಂದು ಹೋರಾಟ ಸಮಿತಿ ಪ್ರಮುಖರು ಹೇಳಿದರು.
“ಮೊದಲನೇ ಹಂತದಲ್ಲಿ ಗ್ರಾಮದಿಂದ ಸಿಂದಗಿಯವರೆಗೂ ಬೈಕ್ ರ‍್ಯಾಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಸಿಂದಗಿ ತಾಲೂಕಿನ ಎರಡು ಗ್ರಾಮಗಳನ್ನು ಮರು ಸೇರ್ಪಡೆ ಮಾಡಬೇಕೆಂದು ಆಗ್ರಹಿಸಲಾಗಿತ್ತು. ಎರಡನೇ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಸತ್ಯಾಗ್ರಹವನ್ನೂ ಮಾಡಲಾಗಿತ್ತು. ಇದೀಗ ಮೂರನೇ ಹಂತದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | 24 ಗಂಟೆಯಲ್ಲಿ ಕುಡಿಯುವ ನೀರು ಸರಬರಾಜು, ಮೇವು ಲಭ್ಯ: ಶಾಸಕ ವಿನಯ ಕುಲಕರ್ಣಿ
“ಮೂರನೇ ಹಂತದ ಪ್ರತಿಭಟನೆಗೂ ಸ್ಪಂದಿಸದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗುತ್ತದೆ” ಎಂದು ಹೋರಾಟಗಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹೋರಾಟದ ಪ್ರಮುಖರುಗಳಾದ ಬಾಬುಗೌಡ, ಕಾ ಬಿರಾದಾರ, ಪ್ರಭುಗೌಡ ಬಿರಾದಾರ, ಗಂಗಪ್ಪ ಗೌಡ ಬಿರಾದಾರ, ಸಾಹೇಬ ಗೌಡ ಬಿರಾದಾರ, ಶಿವಶರಣ ಹೇಳವಾರ, ಭೀಮನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.
