ಧಾರವಾಡ | 24 ಗಂಟೆಯಲ್ಲಿ ಕುಡಿಯುವ ನೀರು ಸರಬರಾಜು, ಮೇವು ಲಭ್ಯ: ಶಾಸಕ ವಿನಯ ಕುಲಕರ್ಣಿ

0
87

ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ ಬರುವ ಧಾರವಾಡ ಗ್ರಾಮೀಣ ಮತ್ತು ಕಲಘಟಗಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 121 ಗ್ರಾಮಗಳಿಗೆ ಅಗತ್ಯವಿರುವ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳು ಅಗತ್ಯವಿದ್ದಲ್ಲಿ ತಕ್ಷಣ ತಾಲೂಕು ಆಡಳಿತ ಸಂಪರ್ಕಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.

ಸಂಜೆ ಕಿತ್ತೂರ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಧಾರವಾಡ ತಾಲೂಕಿನ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ, ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಗಳೊಂದಿಗೆ ಧಾರವಾಡ ತಾಲೂಕಿನ ಬರ ಪರಿಸ್ಥಿತಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಹಾಗೂ ಟಾಸ್ಕ್‌ಫೋರ್ಸ್ ಜರುಗಿಸಿ ಮಾತನಾಡಿದರು.

“ತಾಲೂಕಿನ ಪ್ರತಿ ಎರಡರಿಂದ ಮೂರು ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಮಟ್ಟದ ಓರ್ವ ಅಧಿಕಾರಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿಗಳನ್ನು ರಚಿಸಲಾಗಿದೆ. ಇವುಗಳ ವರದಿ ಆಧಾರದ ಮೇಲೆ ತುರ್ತು ಕ್ರಮ ನಿರ್ವಹಿಸಲಾಗುತ್ತದೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಧಾರವಾಡ ಗ್ರಾಮೀಣ ಮತಕ್ಷೇತ್ರ ಹಾಗೂ ಕಲಘಟಗಿ ಮತಕ್ಷೇತ್ರದ 121 ಹಳ್ಳಿಗಳು ತಾಲೂಕಿನಲ್ಲಿ ಬರುತ್ತವೆ. ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆ ಆಗದಂತೆ ಈಗಾಗಲೇ ಮುಂಜಾಗೃತಾ ಕ್ರಮ ಕೈಗೊಂಡಿದ್ದು, ಪ್ರತಿ ಗ್ರಾಮಕ್ಕೆ ಮೂರು ಖಾಸಗಿ ಬೋರ್‌ವೆಲ್‌ ಗುರುತಿಸಿ, ಮಾಲೀಕರೊಂದಿಗೆ ಚರ್ಚಿಸಿ, ಒಪ್ಪಂದ ಮಾಡಿಕೊಳ್ಳಲಾಗಿದೆ. ಫೆಬ್ರವರಿ 1 ರಿಂದ ಈಗಾಗಲೇ ಧಾರವಾಡ ಗ್ರಾಮೀಣ ವಿಭಾಗದ ಹೊಸಟ್ಟಿ, ಬೇಲೂರ ಮತ್ತು ಕಲಘಟಗಿ ವಿಧಾನಸಭಾ ಮತಕ್ಷೆತ್ರದ ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ” ಎಂದು ತಿಳಿಸಿದರು.

“ತಮ್ಮ ಅಧ್ಯಕ್ಷತೆಯಲ್ಲಿ ಈಗಾಗಲೇ ಮೂರು ತಾಲೂಕುಮಟ್ಟದ ಟಾಸ್ಕ್‌ಪೋ ರ್ಸ್ ಸಭೆಗಳನ್ನು ಜರುಗಿಸಲಾಗಿದ್ದು, ಪ್ರತಿ ಶುಕ್ರವಾರ ಅಥವಾ ಶನಿವಾರದಂದು ಟಾಸ್ಕ್‌ಫೋರ್ಸ್‌ ಸಭೆ ನಡೆಸಲಾಗುತ್ತಿದೆ. ಗ್ರಾಮಮಟ್ಡದ ಟಾಸ್ಕ್‌ಫೋರ್ಸ್‌ ಸಮಿತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಪಿಡಿಒ, ಗ್ರಾಮಾಡಳಿತ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಅಗತ್ಯವಿರುವ ಮೇವು ಕುರಿತು ಅವರು ಮಾಡುವ ಶಿಪಾರಸುಗಳನ್ನು 24 ಗಂಟೆಯಲ್ಲಿ ಈಡೇರಿಸಲಾಗುವುದು” ಎಂದು ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.

“ಪಶುಪಾಲನೆ ಇಲಾಖೆ ನೀಡಿರುವ ತಾಲೂಕಿನ ಜಾನುವಾರುಗಳ ಸಂಖ್ಯೆ ಮತ್ತು ತಾಲೂಕಿನಲ್ಲಿ ಮೇವು ಲಭ್ಯತೆ ಕುರಿತು ಗ್ರಮವಾರು ಸಮೀಕ್ಷೆ ಮಾಡಲಾಗಿದ್ದು, ಮುಂದಿನ 12 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಆದರೂ ಈಗಾಲೇ ಗರಗ ಹೋಬಳಿಯ ಮಾದನ ಭಾವಿ, ಧಾರವಾಡ ಹೋಬಳಿಯ ಧಾರವಾಡ ಎಪಿಎಂಸಿ ಮತ್ತು ಅಮ್ಮಿನಭಾವಿ ಹೋಬಳಿಯ ಮರೇವಾಡದಲ್ಲಿ ಸುಮಾರು 10 ಟನ್ ಮೇವು ದಾಸ್ತಾನು ಮಾಡಲಾಗಿದೆ. ರೈತರು ಬೇಡಿಕೆ ಸಲ್ಲಿಸಿದ್ದಲ್ಲಿ ತಕ್ಷಣ ಪೂರೈಸಲಾಗುವುದು. ಕೃಷಿಕರಲ್ಲದ ಜಾನುವಾರು ಸಾಕಾಣಿಕೆದಾರರು ಮತ್ತು ಸಣ್ಣ, ಅತಿಸಣ್ಣ ರೈತರು ಮೇವು ಬೇಕೆಂದಲ್ಲಿ ನೀಡಲಾಗುವುದು” ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.

“ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಮನರೇಗಾ ಕೂಲಿ ನೀಡಲಾಗುತ್ತಿದೆ. ಬರಗಾಲದ ಹಿನ್ನಲೆಯಲ್ಲಿ ನೂರು ದಿನಗಳ ಬದಲಾಗಿ ನೂರೈವತ್ತು ದಿನಗಳ ವರೆಗೆ ಮನರೇಗಾ ಕೂಲಿ ಕೆಲಸ ನೀಡಲು ಕ್ರಮವಹಿಸಲಾಗಿದೆ. ಜನರು ಉದ್ಯೋಗ ಅರಸಿ, ಗುಳೆ ಹೋಗದಂತೆ ಅವರ ಬೇಡಿಕೆಗಳಿಗೆ ಸ್ಪಂದಿಸಿ, ಮುನ್ನೆಚ್ಚರಿಕೆ ವಹಿಸಲಾಗಿದೆ. ಅಧಿಕಾರಿಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಇದ್ದು, ಜನರ ಬೇಕು ಬೇಡಿಕೆಗಳನ್ನು ಗಮನಿಸಿ, ಸ್ಪಂದಿಸಬೇಕು” ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಸಹಾಯವಾಣಿ ಆರಂಭ: “ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಅಗತ್ಯವಿದ್ದಲ್ಲಿ ಸಾರ್ವಜನಿಕರು ಸಂಪರ್ಕಿಸಲು ಧಾರವಾಡ ತಹಶೀಲ್ದಾರ್‌ ಕಚೇರಿಯಲ್ಲಿ ಸಹಾಯವಾಣಿ-0836 22333822 ಆರಂಭಿಸಲಾಗಿದೆ. ದಿನದ 24 ಗಂಟೆ ಸಹಾಯವಾಣಿ ಕರೆ ಸ್ವೀಕರಿಸಲು ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸಾರ್ವಜನಿಕರು ಅಗತ್ಯವಿದ್ದಲ್ಲಿ ಕರೆ ಮಾಡಿ, ತಿಳಿಸಿಬಹುದು” ಎಂದು ಶಾಸಕರು ತಿಳಿಸಿದರು.

ಈ ಸುದ್ದಿ ಓದಿದ್ದಿರಾ? ರಾಯಚೂರು | ಗ್ಯಾರಂಟಿ ಭರವಸೆಗಳೊಂದಿಗೆ ಸರ್ವಾಂಗೀಣ ಅಭಿವೃದ್ಧಿಗೆ ಬದ್ದ: ಸಚಿವ ಬೋಸರಾಜು

ಸಭೆಯಲ್ಲಿ ಧಾರವಾಡ ತಹಶೀಲ್ದಾರ್ ಡಾ‌ ಡಿ ಎಚ್ ಹೂಗಾರ, ಧಾರವಾಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್ ಸಂಪಗಾವಿ, ಮನರೇಗಾ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಸೇರಿದಂತೆ ಕೃಷಿ, ತೋಟಗಾರಿಗೆ, ಪಶುಸಂಗೋಪನೆ, ಕಂದಾಯ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ನೊಡಲ್ ಅಧಿಕಾರಿಗಳು, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು ಸಭೆಯಲ್ಲಿ ಇದ್ದರು.

LEAVE A REPLY

Please enter your comment!
Please enter your name here