ಚುನಾವಣಾ ಬಾಂಡ್ ಮಾಹಿತಿಯನ್ನು ನೀಡಲು ಅಧಿಕ ಸಮಯವನ್ನು ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ನಾಳೆಯೇ ಸಂಪೂರ್ಣ ಮಾಹಿತಿ ನೀಡಲು ಆದೇಶಿಸಿದೆ.
ಎಸ್‌ಬಿಐ ತನ್ನ ಅರ್ಜಿಯಲ್ಲಿ ಸ್ವತಃ ಎಲ್ಲಾ ವಿವರಗಳು ಪ್ರತ್ಯೇಕವಾಗಿ ಲಭ್ಯವಿದೆ ಎಂದು ಉಲ್ಲೇಖಿಸಿದೆ. ಹಾಗಿರುವಾಗ ಹೆಚ್ಚುವರಿ ಸಮಯ ಯಾಕೆ ನೀಡಬೇಕು ಎಂದು ಪ್ರಶ್ನಿಸಿರುವ ಸುಪ್ರೀಂ ಎಸ್‌ಬಿಐಯನ್ನು ತರಾಟೆಗೆ ತೆಗೆದುಕೊಂಡು, ಮಾಹಿತಿ ನೀಡಲು ಒಂದು ದಿನದ ಅವಕಾಶ ನೀಡಿದೆ. ಅಲ್ಲದೆ ಎಲ್ಲ ಮಾಹಿತಿಯನ್ನು ಒಟ್ಟುಗೂಡಿಸಿ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್ 15 ಸಂಜೆ 5 ಗಂಟೆಯೊಳಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಆದೇಶಿಸಿದೆ.
ಕಳೆದ ತಿಂಗಳು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದು, ಎಸ್‌ಬಿಐಗೆ ಚುನಾವಣಾ ಬಾಂಡ್‌ನ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಮಾರ್ಚ್ 6ರವರೆಗೆ ಸಮಯ ನೀಡಿತ್ತು.
ಆದರೆ ಚುನಾವಣಾ ಬಾಂಡ್‌ನ ಸಂಪೂರ್ಣ ಮಾಹಿತಿಯನ್ನು ನೀಡಲು ಜೂನ್ ಅಂತ್ಯದವರೆಗೂ ಅಂದರೆ ನಾಲ್ಕು ತಿಂಗಳುಗಳ ಕಾಲಾವಕಾಶವನ್ನು ಕೋರಿ ಎಸ್‌ಬಿಐ ಅರ್ಜಿ ಸಲ್ಲಿಸಿತ್ತು. ಲೋಕಸಭೆ ಚುನಾವಣೆ ಮುಗಿಯುವವರೆಗೂ ಎಸ್‌ಬಿಐ ಅವಕಾಶ ಕೇಳಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
ಇನ್ನು ಸುಪ್ರೀಂ ಕೋರ್ಟ್ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ಎನ್‌ಜಿಒ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಎಸ್‌ಬಿಐ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ವೇಳೆ ಉಲ್ಲೇಖಿಸಿದೆ.
ಅರ್ಜಿ ವಿಚಾರಣೆಯ ಆರಂಭದಲ್ಲೇ “ನೀವು 26 ದಿನಗಳ ಕಾಲ ಏನು ಮಾಡಿದ್ದೀರಿ?” ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, “ಮೂರು ವಾರ ಕಾಲಾವಕಾಶ ನೀಡಿದರೆ ಯಾವ ಪಕ್ಷಕ್ಕೆ ದೇಣಿಗೆ ನೀಡಲಾಗಿದೆ ಎಂಬ ಮಾಹಿತಿ ಹೊರತುಪಡಿಸಿ ಉಳಿದ ಮಾಹಿತಿಯನ್ನು ನೀಡಬಹುದು” ಎಂದ ಎಸ್‌ಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ.
“ಈಗಾಗಲೇ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಲಭಿಸಿದೆ ಎಂಬ ಮಾಹಿತಿಯನ್ನು ರಾಜಕೀಯ ಪಕ್ಷಗಳೇ ನೀಡಿದೆ. ಮತ್ತೆ ಅದೇ ಮಾಹಿತಿ ನೀಡಲು ನಿಮಗೆ ಮೂರು ವಾರಗಳ ಸಮಯ ಯಾಕೆ?” ಎಂದು ಸುಪ್ರೀಂ ಕೋರ್ಟ್ ಎಸ್‌ಬಿಐ ಪರ ವಕೀಲ ಹರೀಶ್ ಸಾಳ್ವೆರನ್ನು ಪ್ರಶ್ನಿಸಿದೆ.
ಚುನಾವಣಾ ಬಾಂಡ್‌ಗಳ ಬಗ್ಗೆ ಫೆ.15 ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಪ್ರಕ್ರಿಯೆ ಅಸಂವಿಧಾನಿಕ ಹಾಗೂ ನಾಗರಿಕರ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತ್ತು.