ಕಚ್ಚಾ ವಸ್ತುಗಳ ಬೆಲೆ ಏರಿಕೆ, ಅನಿಶ್ಚಿತ ಮಾರುಕಟ್ಟೆ, ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 42 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜವಳಿ ಇಲಾಖೆ ಮಾಹಿತಿ ನೀಡಿದೆ.
ಬೆಳಗಾವಿ ಜಿಲ್ಲೆಯಲ್ಲಿ 24, ಬಾಗಲಕೋಟೆ 5, ಬೆಂಗಳೂರು ಗ್ರಾಮಾಂತರ 4, ರಾಮನಗರ 3, ತುಮಕೂರು 2, ಬೆಂಗಳೂರು ನಗರ, ಧಾರವಾಡ, ಚಿಕ್ಕಬಳ್ಳಾಪುರ, ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಇನ್ನೆರಡು ಪ್ರಕರಣಗಳ ಕುರಿತು ಇನ್ನೂ ಎಫ್‌ಐಆರ್ ದಾಖಲಾಗಿಲ್ಲ.
ಆತ್ಮಹತ್ಯೆ ಮಾಡಿಕೊಂಡ 25 ನೇಕಾರರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ನಾಲ್ವರಿಗೆ ಯೋಜನೆಯಡಿ ಪರಿಹಾರ ಪಡೆಯಲು ಸೂಚಿಸಲಾಗಿದೆ. ಆರು ಪ್ರಸ್ತಾವಗಳಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು. ಉಳಿದ ಏಳು ಪ್ರಕರಣಗಳಲ್ಲಿ ಸೂಕ್ತ ದಾಖಲೆ ಸಲ್ಲಿಸದ ಕಾರಣ ಪ್ರಸ್ತಾವ ಕೈ ಬಿಡಲಾಗಿದೆ ಎಂದು ಜವಳಿ ಇಲಾಖೆ ಮಾಧ್ಯಮಗಳಿಗೆ ತಿಳಿಸಿದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದಡಿ ಗುಂಪು ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 68ನೇಕಾರರ ಕುಟುಂಬದ ಸದಸ್ಯರಿಗೆ ತಲಾ 2 ಲಕ್ಷ ರೂ.ದಂತೆ ಪರಿಹಾರ ಐದು ವರ್ಷಗಳಿಂದ ಬಂದಿಲ್ಲ ಎಂಬ ಆರೋಪವಿದೆ.
ಕಚ್ಚಾ ನೂಲಿನ ಬೆಲೆ, ರೇಷ್ಮೆ ಬೆಲೆ ದುಪ್ಪಟ್ಟಾಗಿದೆ. ಆದರೆ, ಅದಕ್ಕೆ ತಕ್ಕಂತೆ ಸೀರೆಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಮಧ್ಯವರ್ತಿಗಳಿಂದ ಏಕಾಏಕಿ ಬೆಲೆ ಏರಿಳಿತದ ಪರಿಣಾಮ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
